ಚಂಡೀಗಢ/ಬೆಂಗಳೂರು: ಈ ವರ್ಷದ ಹೊಸ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಗೆ ಪಂಜಾಬ್ ಕಿಂಗ್ಸ್ ತನ್ನ ನೂತನ ಜರ್ಸಿ ಅನಾವರಣಗೊಳಿಸಿತು. ಶನಿವಾರ ಚಂಡೀಗಢದಲ್ಲಿ ನಡೆದ ಸಮಾರಂಭದಲ್ಲಿ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ, ನಾಯಕ ಶಿಖರ್ ಧವನ್, ಆಟಗಾರರಾದ ಜಿತೇಶ್ ಶರ್ಮಾ, ಅರ್ಷದೀಪ್ ಸಿಂಗ್, ತಂಡದ ತರಬೇತುದಾರರು ಹಾಗು ಸಹಾಯಕ ಸಿಬ್ಬಂದಿ ಭಾಗಿಯಾಗಿದ್ದರು.
ಪ್ಲೇಆರ್‌ನಿಂದ ತಯಾರಿಸಲ್ಪಟ್ಟ ಹೊಸ ಕೆಂಪು ಜೆರ್ಸಿಯನ್ನು ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಸಿದ್ಧಪಡಿಸಲಾಗಿದೆ. ಹೊಸ ಜೆರ್ಸಿಯ ಬಟ್ಟೆಯನ್ನು ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳಲಾಗಿದೆ. ತಯಾರಿಕೆಯನ್ನು ಭಾರತದಲ್ಲಿ ಪ್ಲೇಆರ್ ಮಾಡಿದೆ.
ಇದು ಶೇ 20 ಹಗುರ ಮತ್ತು ಶೇ 30 ರಷ್ಟು ಹೆಚ್ಚು ಹಿಗ್ಗಬಲ್ಲದು. ಬೆವರು, ಬ್ಯಾಕ್ಟೀರಿಯಾ ನಿಯಂತ್ರಕ ಆ್ಯಂಟಿ-ಫಿಲ್ಲಿಂಗ್ ತಂತ್ರಜ್ಞಾನಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಜೆರ್ಸಿ UV ಕಿರಣನಿರೋಧಕವಾಗಿದೆ. ಈ ಮೂಲಕ ಬಣ್ಣ ಮಾಸದಂತೆ ತಡೆಯುವ ರೀತಿ ರೂಪುಗೊಳಿಸಲಾಗಿದೆ.
ಹಲವು ವಿಶೇಷತೆಗಳು: ಜರ್ಸಿಯ ಕೆಳಭಾಗದಲ್ಲಿ ಕೇಸರಿ ಮಾದರಿಗಳು ಬೆಂಕಿಯಿಂದ ಸ್ಫೂರ್ತಿ ಪಡೆದಿದ್ದು, ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿರುವ ಸಂಕೇತವಾಗಿದೆ. ಮಂಗಳಕರ ಆರಂಭವನ್ನೂ ಇದು ಸೂಚಿಸುತ್ತಿವೆ. ಭುಜದ ಮೇಲಿನ ಭಾರತೀಯ ತ್ರಿವರ್ಣವು ರಾಷ್ಟ್ರ ಮತ್ತು ಸಶಸ್ತ್ರ ಪಡೆಗಳಿಗೆ ಗೌರವ ಸೂಚಿಸುತ್ತವೆ. ಬದಿಗಳಲ್ಲಿರುವ ನಿಹಾಲ್ ನೀಲಿ ಬಾಣಗಳು ಮೇಲ್ಮುಖ ಚಲನೆಯನ್ನು ಪ್ರತಿಬಿಂಬಿಸುತ್ತವೆ ಮತ್ತು ಪಂಜಾಬ್‌ನ ಯೋಧರ ಆಯುಧಗಳನ್ನು ಸಂಕೇತಿಸುತ್ತಿವೆ. ಜರ್ಸಿಯ ಕೆಳಗಿನ ತುದಿಯಲ್ಲಿರುವ ಜೇನುಗೂಡು ಮಾದರಿ ಅಭಿಮಾನಿಗಳಿಗೆ ಮತ್ತು ಟೀಮ್‌ವರ್ಕ್‌ನ ಉತ್ಸಾಹಕ್ಕೆ ಸಮರ್ಪಿತ.
''ತಂಡದ ಬೆನ್ನೆಲುಬಾಗಿರುವ ಅಭಿಮಾನಿಗಳ ಸಮ್ಮುಖದಲ್ಲಿ ನಮ್ಮ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲು ನಾವು ಸಂತೋಷಪಡುತ್ತೇವೆ. ಹೊಸ ಬಣ್ಣಗಳು ಪಂಜಾಬ್‌ನ ಭಾವನೆಗಳು ಮತ್ತು ನಾಡಿಮಿಡಿತದಂತಿವೆ. ತಂಡವು ಮೈದಾನದಲ್ಲಿ ಅಭಿಮಾನಿಗಳನ್ನು ಪ್ರತಿನಿಧಿಸುತ್ತದೆ. ನಮ್ಮ ಹೊಸ ಜರ್ಸಿ ಕ್ರೀಡಾಂಗಣದಲ್ಲಿ ಕೆಲವು ಮರೆಯಲಾಗದ ನೆನಪುಗಳನ್ನು ಸೃಷ್ಟಿಸಲಿದೆ'' ಎಂದು ಸಹ- ಮಾಲೀಕರಾದ ಪ್ರೀತಿ ಜಿಂಟಾ ಹೇಳಿದರು.
ತಂಡದ ನಾಯಕ ಶಿಖರ್ ಧವನ್ ಮಾತನಾಡುತ್ತಾ, ''ಶೇರ್ ಸ್ಕ್ವಾಡ್‌ಗೆ ಹಿಂತಿರುಗಲು ನಾನು ಎಷ್ಟು ಸಂತೋಷವಾಗಿದ್ದೇನೆ ಎಂದು ಪದಗಳಲ್ಲಿ ಹೇಳುವುದು ಕಷ್ಟ. ಈ ಋತುವಿನಲ್ಲಿ ನಾವು ರೋಮಾಂಚನಕಾರಿ ತಂಡವನ್ನು ಹೊಂದಿದ್ದೇವೆ. ರೋಮಾಂಚಕ ಹೊಸ ಜೆರ್ಸಿಯನ್ನು ಧರಿಸಲು ಮತ್ತು ನಿಮ್ಮೆಲ್ಲರ ಮುಂದೆ ಹೊಸ ತವರು ಮೈದಾನದಲ್ಲಿ ಆಡಲು ನಾವು ಎದುರು ನೋಡುತ್ತಿದ್ದೇವೆ'' ಎಂದು ಹರ್ಷ ವ್ಯಕ್ತಪಡಿಸಿದರು.
ಹೊಸ ಜೆರ್ಸಿ ಪಂಜಾಬ್ ಕಿಂಗ್ಸ್ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಭಾರತದ ಆ್ಯಪ್ನಲ್ಲಿ ಬಿಡುಗಡೆಯಾಗಲಿದೆ. ಅಂತಾರಾಷ್ಟ್ರೀಯ ಅಭಿಮಾನಿಗಳಿಗೆ ಯುಕೆ, ಕೆನಡಾ, ಆಸ್ಟ್ರೇಲಿಯಾ ಮತ್ತು ಯುಎಇಯಲ್ಲಿಯೂ ಲಭ್ಯವಿರಲಿದೆ ಎಂಬ ಮಾಹಿತಿ ಹಂಚಿಕೊಳ್ಳಲಾಯಿತು.
ಮಾರ್ಚ್ 23ರಂದು ಚಂಡೀಗಢದ ನೂತನ ಮಹರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತನ್ನ ಮೊದಲ ಪಂದ್ಯ ಆಡಲಿದೆ.
ಇದನ್ನೂ ಓದಿ: WPL Final: ಆರ್ಸಿಬಿ ಸವಾಲು ಎದುರಿಸಲು ನಾವು ಸಿದ್ಧ: ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಲ್ಯಾನಿಂಗ್