ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ವಿಕೆಟ್‌ಕೀಪರ್ - ಬ್ಯಾಟರ್ ಆಗಿರುವ ಜಿತೇಶ್ ಶರ್ಮಾ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಜಿತೇಶ್ ಅವರು ನಾಳಿನ ಪಂದ್ಯದಲ್ಲಿ ಟಾಸ್ ಮಾಡಲು ಬಂದಲ್ಲಿ ಪಂಜಾಬ್ ಕಿಂಗ್ಸ್ನ 16ನೇ ನಾಯಕರಾಗಲಿದ್ದಾರೆ. ಹಿರಿಯ ಕ್ರಿಕೆಟಿಗ ಶಿಖರ್ ಧವನ್ ಮತ್ತು ಸ್ಯಾಮ್ ಕರ್ರನ್ ಅವರ ಅನುಪಸ್ಥಿತಿಯಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಶಿಖರ್ ಧವನ್ ಈಗಾಗಲೇ ಗಾಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಹಂಗಾಮಿ ನಾಯಕರಾಗಿ ಆಯ್ಕೆಯಾಗಿದ್ದ ಸ್ಯಾಮ್ ಕರ್ರನ್ ಪಾಕಿಸ್ತಾನ ವಿರುದ್ಧದ ಟಿ-20 ಸರಣಿಗಾಗಿ ತಾಯ್ನಾಡು ಇಂಗ್ಲೆಂಡ್ಗೆ ಮರಳಿದ್ದಾರೆ. ಹೀಗಾಗಿ ಜಿತೇಶ್ ಶರ್ಮಾ ಲೀಗ್ನ ಅಂತಿಮ ಪಂದ್ಯದಲ್ಲಿ ನಾಯಕತ್ವದ ಹೊಣೆ ಹೊರಲಿದ್ದಾರೆ.
ಈ ಬಗ್ಗೆ ಪಂಜಾಬ್ ಕಿಂಗ್ಸ್ ತಂಡ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅಂತಿಮ ಪಂದ್ಯದ ನಾಯಕರಾಗಿ ಜಿತೇಂದ್ರ ಶರ್ಮಾ ಆಯ್ಕೆಯಾಗಿದ್ದಾರೆ. ಎಸ್ಆರ್ಎಚ್ ವಿರುದ್ಧದ ಅಂತಿಮ ಪಂದ್ಯಕ್ಕಾಗಿ ನಮ್ಮ ನಾಯಕ ಸಿದ್ಧರಾಗಿದ್ದಾರೆ ಎಂದು ಪೋಸ್ಟ್ ಮಾಡಲಾಗಿದೆ. ತಮಗೆ ನಾಯಕತ್ವ ಸಿಕ್ಕ ಸಂತೋಷವನ್ನು ಜಿತೇಶ್ ಶರ್ಮಾ ಅವರು ಹಂಚಿಕೊಂಡಿದ್ದು, ಈ ಅವಕಾಶ ಸಿಕ್ಕಿದ್ದು ಸಂತೋಷ ತಂದಿದೆ. ಈ ಐಪಿಎಲ್ ಋತುವನ್ನು ಗೆಲುವಿನೊಂದಿಗೆ ಮುಗಿಸಲು ಪ್ರಯತ್ನಿಸಲಾಗುವುದು. ತಂಡದ ಗೆಲುವಿಗಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.
30 ವರ್ಷ ವಯಸ್ಸಿನ ಜಿತೇಂದ್ರ, ತಂಡದ ಉಪನಾಯಕರಾಗಿ ಘೋಷಿತರಾಗಿದ್ದರು. ಮೊದಲೆರಡು ಪಂದ್ಯಗಳಲ್ಲಿ ಶಿಖರ್ ಧವನ್ ನಾಯಕತ್ವ ವಹಿಸಿದ್ದರು. ಗಾಯದ ಕಾರಣ ಅವರು ತಂಡದಿಂದ ಹೊರಗುಳಿದರು. ಬಳಿಕ ಸ್ಯಾಮ್ ಕರ್ರನ್ಗೆ ನಾಯಕತ್ವ ವಹಿಸಲಾಯಿತು. ಅವರು 9 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದರು.
ಜಿತೇಂದ್ರ ಶರ್ಮಾ ಉಪ ನಾಯಕರಾಗಿದ್ದರೂ ಫಾರ್ಮ್ ಕೊರತೆ ಎದುರಿಸುತ್ತಿರುವ ಕಾರಣ ಅವರಿಗೆ ಪೂರ್ಣಾವಧಿ ನಾಯಕತ್ವ ಸಿಕ್ಕಿರಲಿಲ್ಲ. ಕಿಂಗ್ಸ್ ತಂಡ ಪ್ರಸ್ತುತ 13 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 10 ಅಂಕಗಳನ್ನು ಹೊಂದಿ ಪಾಯಿಂಟ್ಸ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ.
ಜಿತೇಂದ್ರ ಶರ್ಮಾ ರನ್ ಗಳಿಸಲು ಪರದಾಡುತ್ತಿದ್ದರೂ, ಪಂಜಾಬ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಅವರನ್ನು ತಂಡದಿಂದ ಕೈಬಿಡಲಿಲ್ಲ. ಎಲ್ಲಾ 13 ಪಂದ್ಯಗಳಲ್ಲಿ ಆಡಿಸಿದೆ. ಬಲಗೈ ಬ್ಯಾಟರ್ 13 ಪಂದ್ಯಗಳಲ್ಲಿ 14.09 ಸರಾಸರಿಯಲ್ಲಿ ಕೇವಲ 155 ರನ್ ಮಾತ್ರ ಗಳಿಸಿದ್ದಾರೆ. ಅತ್ಯುತ್ತಮ ಸ್ಕೋರ್ 29 ಆಗಿದೆ. 2022 ರಿಂದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಪರವಾಗಿ ಐಪಿಎಲ್‌ನಲ್ಲಿ ಆಡುತ್ತಿರುವ ಜಿತೇಶ್ ಶರ್ಮಾ, 39 ಪಂದ್ಯಗಳಲ್ಲಿ 698 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಮಾವ ಸುನಿಲ್ ಶೆಟ್ಟಿ ಜೊತೆ ಟೀಂ ಇಂಡಿಯಾಗೆ ಚಿಯರ್ ಮಾಡುವೆ: ಕೆಎಲ್ ರಾಹುಲ್ ಹೀಗೆ ಹೇಳಿದ್ದೇಕೆ? - KL Rahul