ಬೆಂಗಳೂರು: ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆ ಇದೆ. ಬ್ಯಾಟಿಂಗ್ನಲ್ಲಿ ಮೊನಚು ಕಳೆದುಕೊಂಡಿರುವ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ನಿಂದ ಅನಿರ್ದಿಷ್ಟ ಅವಧಿಗೆ ಬಿಡುವು ಕೋರಿದ್ದಾರೆ.
ತೀವ್ರ ವೈಫಲ್ಯ ಅನುಭವಿಸುತ್ತಿರುವ ಆಟಗಾರನನ್ನು ಸನ್ರೈಸರ್ಸ್ ಹೈದರಾಬಾದ್ ಪಂದ್ಯದಿಂದ ಕೈಬಿಡಲಾಗಿತ್ತು. ಇದಕ್ಕೂ ಮೊದಲು ಅವರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಕೋಚ್ ಆ್ಯಂಡಿ ಫ್ಲವರ್ ಅವರ ಜೊತೆ ಮಾತುಕತೆ ನಡೆಸಿದ್ದರು. ತಾನು ಮಾನಸಿಕ ಮತ್ತು ದೈಹಿಕವಾಗಿ ಫಿಟ್ ಆಗಿಲ್ಲದ ಕಾರಣ ಪಂದ್ಯದಿಂದ ಹೊರಗುಳಿಯುವುದಾಗಿ ಅಭಿಪ್ರಾಯ ತಿಳಿಸಿದ್ದರು.
ಕೆಲ ಪಂದ್ಯಗಳಿಂದ ಹೊರಕ್ಕೆ?: ಕಳಪೆ ಫಾರ್ಮ್‌ನಿಂದಾಗಿ ಟೀಕೆಗೆ ಗುರಿಯಾಗಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಮಾನಸಿಕ ಮತ್ತು ದೈಹಿಕವಾಗಿ ಚೇತರಿಸಿಕೊಳ್ಳಲು ಐಪಿಎಲ್ನಿಂದ ಕೆಲಕಾಲ ಬಿಡುವು ಪಡೆಯಲು ನಿರ್ಧರಿಸಿದ್ದಾರೆ. ಹೀಗಾಗಿ ತಮ್ಮನ್ನು ತಂಡದಿಂದ ಕೈಬಿಡಿ ಎಂದು ತಾವೇ ಕೋರಿದ್ದಾರೆ.
ಆಸ್ಟ್ರೇಲಿಯಾದ ಸಿಡಿಲಮರಿ, ಸದ್ಯ ಐಪಿಎಲ್ನಲ್ಲಿ ಮಂಕಾಗಿದ್ದಾರೆ. ಆಡಿರುವ 6 ಪಂದ್ಯಗಳಲ್ಲಿ ಕೇವಲ 28 ರನ್ ಮಾತ್ರ ಗಳಿಸಿದ್ದಾರೆ. ಇದರಲ್ಲಿ ಮೂರು ಬಾರಿ ಸೊನ್ನೆ ಸುತ್ತಿದ್ದಾರೆ. ಬೌಲಿಂಗ್ನಲ್ಲೂ ಅವರ ಕಮಾಲ್ ಮಾಡಿಲ್ಲ. ಇದು ಮಾನಸಿಕವಾಗಿ ಅವರನ್ನು ಕುಗ್ಗಿಸಿದೆ. ತನ್ನ ತಪ್ಪುಗಳನ್ನು ತಿದ್ದಿಕೊಂಡು ಹೊಸ ಚೈತನ್ಯದೊಂದಿಗೆ ತಂಡಕ್ಕೆ ಮರಳಲು ತಾವು ಬಯಸಿದ್ದು, ಅನಿರ್ದಿಷ್ಟ ಅವಧಿಗೆ ತಮ್ಮನ್ನು ತಂಡದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಅಗತ್ ಬಿದ್ದರೆ ಮತ್ತೆ ತಂಡಕ್ಕೆ ವಾಪಸ್: ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವೈಯಕ್ತಿಕವಾಗಿ ನನಗೆ ಇದು ತುಂಬಾ ಸುಲಭದ ನಿರ್ಧಾರ. ಮುಂಬೈ ಇಂಡಿಯನ್ಸ್ ಎದುರಿನ ಸೋಲಿನ ನಂತರ ನಾಯಕ ಮತ್ತು ತರಬೇತಿ ಸಿಬ್ಬಂದಿ ಬಳಿಗೆ ತೆರಳಿ ಚರ್ಚಿಸಿದೆ. ಮಧ್ಯಮ ಕ್ರಮಾಂಕದಲ್ಲಿ ನನ್ನ ಬದಲಿಗೆ ಬೇರೊಬ್ಬ ಆಟಗಾರನ ಇಳಿಸುವ ಸಮಯ ಇದಾಗಿದೆ ಎಂದು ತಿಳಿಸಿದೆ. ಈ ಹಿಂದೆಯೂ ನಾನು ಇಂತಹ ಸ್ಥಿತಿಯನ್ನು ಅನುಭವಿಸಿದ್ದೇನೆ ಎಂದು ತಿಳಿಸಿದರು.
ನಾನು ಮಾನಸಿಕ ಮತ್ತು ದೈಹಿಕವಾಗಿ ಸಜ್ಜಾಗಲು ವಿರಾಮವನ್ನು ಪಡೆಯಲು ಬಯಸಿದ್ದೇನೆ. ದೇಹವನ್ನು ಹುರಿಗೊಳಿಸಬೇಕಿದೆ. ಹಾಗೊಂದು ವೇಳೆ ತಂಡಕ್ಕೆ ನನ್ನ ಅಗತ್ಯಬಿದ್ದರೆ ಮತ್ತೆ ಆಡುವೆ. ಆಗ ನಾನು ಉತ್ತಮ ಪ್ರದರ್ಶನ ನೀಡಬಹುದು ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಇನ್ನೂ, ಸೋಮವಾರ ನಡೆದ ಸನ್ರೈಸರ್ಸ್ ವಿರುದ್ಧದ ಪಂದ್ಯ ಆರ್‌ಸಿಬಿ ಅಭಿಮಾನಿಗಳಿಗೆ ತೀವ್ರ ಘಾಸಿ ಉಂಟು ಮಾಡಿದೆ. ಎಸ್ಆರ್ಎಚ್ ವಿರುದ್ಧ 25 ರನ್‌ಗಳಿಂದ ಸೋಲುವ ಮೊದಲು ಟಿ20 ಇತಿಹಾಸದಲ್ಲೇ ಅತ್ಯಧಿಕ 287 ರನ್ ಬಿಟ್ಟುಕೊಟ್ಟಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 262 ರನ್ ಗಳಿಸಿತು. ಆಡಿದ 7 ಪಂದ್ಯಗಳಲ್ಲಿ 6 ರಲ್ಲಿ ಸೋತು ಪ್ಲೇಆಫ್ ಹಾದಿಯಿಂದ ಬಹುತೇಕ ಹೊರಬಿದ್ದಿದೆ.
ಇದನ್ನೂ ಓದಿ: ಟಿ20 ಇತಿಹಾಸದಲ್ಲಿ ದಾಖಲೆ ರನ್ ಚಚ್ಚಿದ ಹೈದರಾಬಾದ್: ಆರ್ಸಿಬಿಗೆ 6ನೇ ಸೋಲು, ಫ್ಲೇ ಆಫ್ ಕನಸು ಭಗ್ನ? - RCB vs SH result