ಚೆನ್ನೈ(ತಮಿಳುನಾಡು): ದೇಶದ ಮೊದಲ ನೈಟ್ ಸ್ಟ್ರೀಟ್ ರೇಸ್ ಅನ್ನು ಆಗಸ್ಟ್ 31 ಮತ್ತು ಸೆಪ್ಟೆಂಬರ್ 01 ರಂದು ಚೆನ್ನೈನಲ್ಲಿ ಆಯೋಜಿಸಲಾಗಿದೆ. ಕಳೆದ ವರ್ಷ ಡಿಸೆಂಬರ್ 9 ಮತ್ತು 10 ರಂದು ಚೆನ್ನೈನಲ್ಲಿ ಫಾರ್ಮುಲಾ 4 ಕಾರ್ ರೇಸ್ ಅನ್ನು ಮಿಚುವಾಂಗ್ ಚಂಡಮಾರುತದ ಹಿನ್ನೆಲೆ ಮುಂದೂಡಲಾಗಿತ್ತು.
ಈ ಹಿನ್ನೆಲೆ, ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ ಮತ್ತೊಮ್ಮೆ ಇಂಡಿಯನ್ ಚಾಂಪಿಯನ್ ಶಿಪ್ ಹಾಗೂ ಇಂಡಿಯನ್ ರೇಸಿಂಗ್ ಲೀಗ್ ನಡೆಸಲು ಅನುಮತಿ ನೀಡಿದೆ. ಅದರಂತೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನೈಟ್ ಸ್ಟ್ರೀಟ್ ರೇಸ್ ನಡೆಸಲು ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಯೋಜಿಸಿದಂತೆ, ಈ ರೇಸ್ ಚೆನ್ನೈನ ದ್ವೀಪ ಪ್ರದೇಶದ ಸುತ್ತಮುತ್ತಲಿನ ರಸ್ತೆಗಳಲ್ಲಿ ನಡೆಯಲಿದೆ.
ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರವು ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಆಯೋಜಿಸಿರುವ ಈ ಫಾರ್ಮುಲಾ 4 ರೇಸ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿವಿಧ ರೇಸರ್ಗಳು ಭಾಗವಹಿಸಲಿದ್ದಾರೆ. ಫಾರ್ಮುಲಾ 4 ರೇಸ್ ಅನ್ನು ದ್ವೀಪದ ಸುತ್ತಲೂ ಸುಮಾರು 3.5 ಕಿ.ಮೀ ರಸ್ತೆಯಲ್ಲಿ ನೈಟ್ ಸ್ಟ್ರೀಟ್ ರೇಸ್ ಆಗಿ ನಡೆಸಲು ಸಿದ್ಧತೆ ನಡೆದಿದೆ. ಚೆನ್ನೈ ದ್ವೀಪದಿಂದ ಪ್ರಾರಂಭವಾಗುವ ಈ ಕಾರ್ ರೇಸ್ ಅಣ್ಣಾ ಸಾಲೈ, ಶಿವಾನಂದ ರಸ್ತೆ, ನೇಪಿಯರ್ ಸೇತುವೆ ಮೂಲಕ ಮತ್ತೆ ದ್ವೀಪ ಮೈದಾನ (ತೀವು ತಿಡಾಲ್) ತಲುಪಲಿದೆ.
ಇದು ಭಾರತದಲ್ಲಿ ಮಾತ್ರವಲ್ಲದೇ ದಕ್ಷಿಣ ಏಷ್ಯಾದ ಮೊದಲನೈಟ್ ಸ್ಟ್ರೀಟ್ ರೇಸ್ ಆಗಿರುವುದು ವಿಶೇಷ. ಅನೇಕ ವಿದೇಶಿ ಆಟಗಾರರು ಈ ಲೀಗ್‌ನಲ್ಲಿ ಭಾಗವಹಿಸುತ್ತಿರುವುದರಿಂದ ಬಹಳಷ್ಟು ಅಭಿಮಾನಿಗಳು ಈ ರೇಸ್ ವೀಕ್ಷಿಸಲು ಉತ್ಸುಕರಾಗಿದ್ದಾರೆ.
ಈ ರೇಸ್ನ ಮೊದಲ ದಿನ 3,999 ರೂ ಮತ್ತು ಪ್ರೀಮಿಯಂ ಸ್ಟ್ಯಾಂಡ್ ವಿಭಾಗಕ್ಕೆ ಎರಡನೇ ದಿನ 6,999 ರೂ. ಅಲ್ಲದೇ, ಗ್ರ್ಯಾಂಡ್ ಸ್ಟ್ಯಾಂಡ್ ಶುಲ್ಕ ಮೊದಲ ದಿನಕ್ಕೆ 1,999 ಮತ್ತು ಕೊನೆಯ ದಿನಕ್ಕೆ 2,599 ರೂ. ಅದೇ ರೀತಿ, ಗೋಲ್ಡನ್ ಲಾಂಚ್ ಸ್ಟ್ಯಾಂಡ್‌ನಲ್ಲಿ, ಮೊದಲ ದಿನದ ಟಿಕೆಟ್ ಶುಲ್ಕ 7,999 ರೂ ಮತ್ತು ಎರಡನೇ ದಿನದ ಟಿಕೆಟ್ ಶುಲ್ಕ 13,999 ರೂ. ಆಗಿದೆ. ಪ್ಲಾಟಿನಂ ಲಾಂಚ್ ಟಿಕೆಟ್ ಶುಲ್ಕವು ಮೊದಲ ದಿನ 12,999 ರೂ ಮತ್ತು ಎರಡನೇ ದಿನ 19,999 ರೂ. ಇದೆ. ಈ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಕಾಯ್ದಿರಿಸಬಹುದು ಮತ್ತು ಈ ಲೀಗ್ ಬಗ್ಗೆ ಮುಂದಿನ ಹಂತದ ಎಲ್ಲಾ ಮಾಹಿತಿಯನ್ನು ಒಂದೊಂದಾಗಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ಈ ನೈಟ್ ಸ್ಟ್ರೀಟ್ ರೇಸ್ ನಡೆಸಲು ಯೋಜಿಸಿದಾಗ, ವಿರೋಧ ವ್ಯಕ್ತವಾಗಿತ್ತು. ಸಾರ್ವಜನಿಕರು ಬಳಸುವ ರಸ್ತೆಗಳಲ್ಲಿ ಕಾರ್ ರೇಸ್ ನಡೆಸುವ ಅಗತ್ಯತೆಯ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದರು. ಈ ಸಂಬಂಧ ಮದ್ರಾಸ್ ಹೈಕೋರ್ಟ್ ವಿವಿಧ ಷರತ್ತುಗಳ ಅಡಿಯಲ್ಲಿ ಈ ಲೀಗ್ ನಡೆಸಲು ಅನುಮತಿಸಿದೆ.