ನವದೆಹಲಿ: ಭಾರತ ಕ್ರಿಕೆಟ್ ತಂಡದ ಬಲಗೈ ಬ್ಯಾಟರ್ ಸರ್ಫರಾಜ್ ಖಾನ್ ಅವರ ಸಹೋದರ ಮುಶೀರ್ ಖಾನ್ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಪಘಾತದಲ್ಲಿ ಮುಶೀರ್ ಖಾನ್ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ.
ಮುಂದಿನ ವಾರ ಆರಂಭವಾಗಲಿರುವ ಇರಾನಿ ಕಪ್ ಪಂದ್ಯಕ್ಕಾಗಿ ಮುಶೀರ್ ಖಾನ್ ತನ್ನ ತಂದೆಯೊಂದಿಗೆ ಕಾರಿನಲ್ಲಿ ಲಖನೌಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಕಾರು ಮೂರು ಬಾರಿ ಪಲ್ಟಿಯಾಗಿ ಅವಘಡ ಸಂಭವಿಸಿದೆ. ಅಕ್ಟೋಬರ್ 1 ರಿಂದ 5ರ ವರೆಗೆ ಲಕ್ನೋದಲ್ಲಿ ನಡೆಯಲಿರುವ ಇರಾನಿ ಕಪ್ ಪಂದ್ಯಾವಳಿಯಲ್ಲಿ ಮುಶೀರ್ ಭಾಗವಹಿಸಬೇಕಿತ್ತು.
Musheer Khan suffers a fracture in a road accident in UP. He's set to miss the Irani Cup and the initial phase of the Ranji trophy. (TOI).
— Mufaddal Vohra (@mufaddal_vohra) September 28, 2024
- Wishing Musheer a speedy recovery! pic.twitter.com/lZaLJmjniC
ಇರಾನಿ ಕಪ್ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಮುಶೀರ್ ಖಾನ್ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಬೇರೆ ಯಾರನ್ನು ಘೋಷಿಸುವುದಿಲ್ಲ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯು ಹಿರಿಯ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ಖಚಿತಪಡಿಸಿದ್ದಾರೆ. ಇದೀಗ ಮುಶೀರ್ ಅನುಪಸ್ಥಿತಿಯಲ್ಲಿ ಮುಂಬೈ ತಂಡದ ಪರ ಪೃಥ್ವಿ ಶಾ ಮತ್ತು ಹಾರ್ದಿಕ್ ತಮರ್ ಓಪನರ್ ಆಗಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಜತೆಗೆ ನಾಯಕ ಅಜಿಂಕ್ಯ ರಹಾನೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದಾಗಿದೆ.
42 ಬಾರಿ ರಣಜಿ ಟ್ರೋಫಿ ಗೆದ್ದು ದಾಖಲೆ ಬರೆದಿರುವ ಮುಂಬೈ ಹಾಗೂ ರೆಸ್ಟ್ ಆಫ್ ಇಂಡಿಯಾ ನಡುವೆ ಇರಾನಿ ಕಪ್ ಪಂದ್ಯ ನಡೆಯಲಿದೆ. ಈ ಪಂದ್ಯ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ದುಲೀಪ್ ಮುಶೀರ್ ಶತಕ: ಇತ್ತೀಚಿಗಷ್ಟೇ ಮುಕ್ತಾಯಗೊಂಡ ದುಲೀಪ್ ಟ್ರೋಫಿಯಲ್ಲಿ ಭಾರತ ಬಿ ತಂಡದ ಪರ ಆಡುವಾಗ ಮುಶೀರ್ ಖಾನ್ 181 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಇದು ಅವರ ಮೊದಲ ದುಲೀಪ್ ಟ್ರೋಫಿ ಪಂದ್ಯವಾಗಿತ್ತು. ಇದಕ್ಕೂ ಮುನ್ನ ಅಂಡರ್-19 ವಿಶ್ವಕಪ್‌ನಲ್ಲೂ ಭಾರತದ ಪರ ಆಡುತ್ತಿದ್ದಾಗ ಮುಶೀರ್ ಆಫ್ರಿಕಾದಲ್ಲಿ 2 ಶತಕ ಸಿಡಿಸಿದ್ದರು. ಅಷ್ಟೇ ಅಲ್ಲ, ದೇಶಿಯ ಕ್ರಿಕೆಟ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ.