ಹೈದರಾಬಾದ್ (ತೆಲಂಗಾಣ): 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಮಿಂಚುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿರ್ಣಾಯಕ ಕದನಕ್ಕೆ ಸಜ್ಜಾಗಿದೆ. ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಇಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವನ್ನು ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ಕೊಡುವ ತವಕದಲ್ಲಿ ಇದೆ.
ಪ್ರಸ್ತುತ ಟೂರ್ನಿಯಲ್ಲಿ ಸನ್‌ರೈಸರ್ಸ್ ಇದುವರೆಗೆ 12 ಪಂದ್ಯಗಳನ್ನಾಡಿದೆ. ಈ ಪೈಕಿ 7 ಪಂದ್ಯಗಳಲ್ಲಿ ಗೆದ್ದು 14 ಅಂಕಗಳನ್ನು ಹೊಂದಿದೆ. ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಹೈದರಾಬಾದ್ ತಂಡಕ್ಕೆ ಪ್ಲೇಆಫ್‌ಗೆ ಪ್ರವೇಶಿಸಲು ಕೇವಲ ಒಂದು ಅಂಕ ಮಾತ್ರ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ ವಿರುದ್ಧ ಗೆಲುವಿನೊಂದಿಗೆ ಸನ್‌ರೈಸರ್ಸ್ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ಪ್ಲೇ ಆಫ್‌ಗೆ ತಲುಪಲು ತೀರ್ಮಾನಿಸಿದೆ.
ಈ ಪಂದ್ಯದಲ್ಲಿ ಸೋತರೂ ಹೈದರಾಬಾದ್ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಆದರೆ, ಲೀಗ್ ಹಂತದ ಕೊನೆಯ ಎರಡು ಪಂದ್ಯಗಳನ್ನು ಗೆದ್ದು ಟಾಪ್ 2ರಲ್ಲಿ ಸ್ಥಾನ ಪಡೆಯುವ ಗುರಿಯೊಂದಿಗೆ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮಿಂಚಿನ ಬ್ಯಾಟಿಂಗ್ನಿಂದ ಬಲಿಷ್ಠವಾಗಿರುವ ಸನ್‌ರೈಸರ್ಸ್ ತಂಡಕ್ಕೆ ತವರು ನೆಲದಲ್ಲಿ ತಡೆವೊಡ್ಡುವುದು ಸಹ ಗುಜರಾತ್ ಟೈಟಾನ್ಸ್ಗೆ ಸವಾಲೇ ಸರಿ. ಮೇ 8ರಂದು ಇದೇ ಮೈದಾನದಲ್ಲಿ ನಡೆದ ಲಖನೌ ವಿರುದ್ಧದ ಪಂದ್ಯದಲ್ಲಿ 166 ರನ್‌ಗಳ ಗುರಿಯನ್ನು ಒಂದೂ ವಿಕೆಟ್ ನಷ್ಟವಿಲ್ಲದೇ, ಕೇವಲ 9.4 ಓವರ್‌ಗಳಲ್ಲಿ ಹೈದರಾಬಾದ್ ಸಾಧಿಸಿತ್ತು.
ಇದೀಗ ಒಂದು ವಾರದ ವಿರಾಮದ ಬಳಿಕ ಮತ್ತಷ್ಟು ಉತ್ಸಾಹದಿಂದ ಮೈದಾನಕ್ಕೆ ಇಳಿಯಲು ಹೊರಟಿರುವ ಹೈದರಾಬಾದ್ ತಂಡವು ಗುಜರಾತ್ ಮೇಲೆ ಸವಾರಿ ಮಾಡಲು ಸಜ್ಜಾಗಿದೆ. ಈ ಟೂರ್ನಿಯಲ್ಲಿ ಆರಂಭಿಕರಾದ ಟ್ರಾವಿಸ್ ಹೆಡ್ (533 ರನ್) ಮತ್ತು ಅಭಿಷೇಕ್ ಶರ್ಮಾ (401 ರನ್) ಅದ್ಭುತ ಫಾರ್ಮ್ನಲ್ಲಿದ್ದಾರೆ. ಅಲ್ಲದೇ, ಹೆನ್ರಿಕ್ ಕ್ಲಾಸೆನ್ (339), ನಿತೀಶ್ ಕುಮಾರ್ ರೆಡ್ಡಿ (239) ಜೊತೆಗೆ ಶಹಬಾಜ್ ಅಹಮದ್ ಮತ್ತು ಅಬ್ದುಲ್ ಸಮದ್ ಕೂಡ ಹೈದರಾಬಾದ್ ಬ್ಯಾಟಿಂಗ್ ಬಲವಾಗಿದ್ದಾರೆ.
ಬೌಲಿಂಗ್‌ನಲ್ಲೂ ಸನ್‌ರೈಸರ್ಸ್ ಬಲಿಷ್ಠವಾಗಿದೆ. ನಟರಾಜನ್ (15 ವಿಕೆಟ್), ನಾಯಕ ಪ್ಯಾಟ್ ಕಮ್ಮಿನ್ಸ್ (14), ಮತ್ತು ಭುವನೇಶ್ವರ್ ಕುಮಾರ್ (11) ವೇಗದ ತ್ರಿಮೂರ್ತಿಗಳಾಗಿದ್ದಾರೆ. ಆದರೆ, ಕಳೆದ ಐದು ಪಂದ್ಯಗಳ ಪೈಕಿ ಹೈದರಾಬಾದ್ ತಂಡವು ಮೂರು ಪಂದ್ಯಗಳಲ್ಲಿ ಸೋತಿದೆ. ಅಲ್ಲದೇ, ಇದೇ ಆವೃತ್ತಿಯಲ್ಲಿ ಗುಜರಾತ್ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಸೋತಿತ್ತು. ಆದ್ದರಿಂದ ಈ ಪಂದ್ಯದಲ್ಲಿ ಎಚ್ಚರಿಕೆ ವಹಿಸುವುದು ಕಷ್ಟ ಅನಿರ್ವಾಯವಾಗಿದೆ.
ಮತ್ತೊಂದೆಡೆ, ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಗುಜರಾತ್ ಟೈಟಾನ್ಸ್ ಹೊರಬಿದ್ದಿದೆ. 13 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದ ಗೆಲುವಿನೊಂದಿಗೆ ಲೀಗ್ ಹಂತವನ್ನು ಮುಗಿಸಲು ಗುಜರಾತ್ ಪ್ರಯತ್ನಿಸುತ್ತಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ಕ್ರಿಕೆಟಿಗರ ತೋಳಿನಲ್ಲಿ ನಂದಿನಿ ಲಾಂಛನ, ಜೆರ್ಸಿ ಬಿಡುಗಡೆ