ಪ್ಯಾರಿಸ್(ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತ ಇಂದು ಕುಸ್ತಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾರತ ಬೆಳ್ಳಿ ಮತ್ತು ಕಂಚು ಸೇರಿ 2 ಪದಕ ಗೆದ್ದಿತ್ತು. ಈ ಬಾರಿ ಶೂಟಿಂಗ್ ಬಿಟ್ಟರೆ ಇದುವರೆಗೆ ಯಾವುದೇ ಸ್ಪರ್ಧೆಯಲ್ಲಿ ಪದಕ ಗೆದ್ದಿಲ್ಲ. ಹಾಗಾಗಿ ಕುಸ್ತಿಪಟುಗಳ ಮೇಲೆ ಪದಕ ನಿರೀಕ್ಷೆ ಇದೆ.
ನಿಶಾ ದಹಿಯಾ ಇಂದು ಪ್ಯಾರಿಸ್‌ನ ಚಾಂಪ್ ಡಿ ಮಾರ್ಸ್ ಅರೆನಾದಲ್ಲಿ ನಡೆಯಲಿರುವ ಕುಸ್ತಿಯಲ್ಲಿ ತಮ್ಮ ಅಭಿಯಾನ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಮಹಿಳೆಯರ 68 ಕೆ.ಜಿ ವಿಭಾಗದಲ್ಲಿ ನಿಶಾ ಸ್ಪರ್ಧಿಸುವರು. ಈ ಬಾರಿ ಒಬ್ಬ ಪುರುಷ ಕುಸ್ತಿಪಟು ಮಾತ್ರ ಅಖಾಡದಲ್ಲಿದ್ದಾರೆ. ಏಷ್ಯನ್ ಚಾಂಪಿಯನ್ ಮತ್ತು ಏಷ್ಯನ್ ಗೇಮ್ಸ್‌ನ ಕಂಚಿನ ಪದಕ ವಿಜೇತ ಅಮನ್ ಸೆಹ್ರಾವತ್ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಮಹಿಳೆಯರ 50 ಕೆ.ಜಿ ವಿಭಾಗದಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಅನುಭವಿ ವಿನೇಶ್ ಫೋಗಟ್ ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ರಿಯೊ 2016ರಲ್ಲಿ 48 ಕೆ.ಜಿ ಹಾಗೂ ಟೋಕಿಯೊ 2020ರಲ್ಲಿ 53 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆದರೆ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ವಿನೇಶ್ ದೇಶದ ಅತ್ಯಂತ ಯಶಸ್ವಿ ಮಹಿಳಾ ಕುಸ್ತಿಪಟುವಾಗಿದ್ದು ಎರಡು ವಿಶ್ವ ಚಾಂಪಿಯನ್‌ಶಿಪ್, ಮೂರು ಕಾಮನ್‌ವೆಲ್ತ್ ಗೇಮ್‌ಗಳು ಮತ್ತು ಎಂಟು ಏಷ್ಯನ್ ಚಾಂಪಿಯನ್‌ಶಿಪ್ ಪದಕಗಳನ್ನು ಗೆದ್ದಿದ್ದಾರೆ.
53 ಕೆ.ಜಿ ವಿಭಾಗದಲ್ಲಿ ಅಂತಿಮ್ ಪಂಗಲ್ ಕಣಕ್ಕಿಳಿಯಲಿದ್ದಾರೆ. 2020ರಲ್ಲಿ, ಪಂಗಲ್, ಜೂನಿಯರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಮತ್ತು 23 ವರ್ಷದೊಳಗಿನ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಇದಲ್ಲದೆ 76 ಕೆ.ಜಿ ವಿಭಾಗದಲ್ಲಿ ರಿತಿಕಾ ಹೂಡಾ ಮತ್ತು 57 ಕೆ.ಜಿ ವಿಭಾಗದಲ್ಲಿ ಅಂಶು ಮಲಿಕ್ ಅವರಿಂದ ಭಾರತ ಪದಕದ ಭರವಸೆಯಲ್ಲಿದೆ.
ಟೋಕಿಯೊ ಒಲಿಂಪಿಕ್ಸ್ ಕುಸ್ತಿಯಲ್ಲಿ 7 ಕುಸ್ತಿಪಟುಗಳು ಭಾರತ ಪ್ರತಿನಿಧಿಸಿದ್ದರು. ಇದರಲ್ಲಿ ರವಿಕುಮಾರ್ ದಹಿಯಾ (ಪುರುಷರ ಫ್ರೀಸ್ಟೈಲ್ 57 ಕೆ.ಜಿ) ಮತ್ತು ಬಜರಂಗ್ ಪುನಿಯಾ (ಪುರುಷರ ಫ್ರೀಸ್ಟೈಲ್ 65 ಕೆ.ಜಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದರು. ಆದರೆ, ಪ್ಯಾರಿಸ್ ಗೇಮ್ಸ್‌ಗೆ ಅರ್ಹತಾ ಸುತ್ತು ತಲುಪಲು ಸಾಧ್ಯವಾಗಲಿಲ್ಲ.
ಪ್ಯಾರಿಸ್ ಒಲಿಂಪಿಕ್ಸ್- ಭಾರತ ಪ್ರತಿನಿಧಿಸುತ್ತಿರುವ ಕುಸ್ತಿಪಟುಗಳು:
- ಅಮನ್ ಸೆಹ್ರಾವತ್ - ಪುರುಷರ ಫ್ರೀಸ್ಟೈಲ್ 57 ಕೆ.ಜಿ
- ವಿನೇಶ್ ಫೋಗಟ್ - ಮಹಿಳೆಯರ 50 ಕೆ.ಜಿ
- ಅಂತಿಮ್ ಪಂಗಲ್ - ಮಹಿಳೆಯರು 53 ಕೆ.ಜಿ
- ಅಂಶು ಮಲಿಕ್ - ಮಹಿಳೆಯರು 57 ಕೆ.ಜಿ
- ನಿಶಾ ದಹಿಯಾ - ಮಹಿಳೆಯರು 68 ಕೆ.ಜಿ
- ರಿತಿಕಾ ಹೂಡಾ - ಮಹಿಳೆಯರು 76 ಕೆ.ಜಿ
ಇದನ್ನೂ ಓದಿ: ಮಹಿಳಾ-ಪುರುಷರ ರೋಯಿಂಗ್ ಸ್ಪರ್ಧೆಯಲ್ಲಿ 2 ಪದಕ ಗೆದ್ದ ವಿಶ್ವದ ಮೊದಲ ಅಥ್ಲೀಟ್! - Olympics Rowing