ಕೊಲಂಬೊ (ಶ್ರೀಲಂಕಾ): ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಲಂಕಾದ ಜೆಫ್ರಿ ವಾಂಡರ್ಸೆ ಅವರ ಸ್ಪಿನ್ ದಾಳಿಗೆ ನಲುಗಿದ ಭಾರತ ತಂಡ ಎರಡನೇ ಏಕದಿನದಲ್ಲಿ 32 ರನ್ಗಳ ಸೋಲು ಕಂಡಿದೆ. ಗೆಲ್ಲಬೇಕಿದ್ದ ಮೊದಲ ಪಂದ್ಯವನ್ನು ಕೈಚೆಲ್ಲಿದ್ದ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಹಿನ್ನಡೆ ಅನುಭವಿಸಿತು.
ಜೆಫ್ರಿ ವಾಂಡರ್ಸೆ ಅವರ ಸ್ಪಿನ್ ದಾಳಿಗೆ ರೋಹಿತ್ ಶರ್ಮಾ, ಅಕ್ಷರ್ ಪಟೇಲ್, ಶುಭ್ಮನ್ ಗಿಲ್ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟರ್ಗಳು ನಿರುತ್ತರವಾದರು. ಶಿವಂ ದುಬೆ, ಕೆಎಲ್ ರಾಹುಲ್ ಸೊನ್ನೆಗೆ ಔಟಾದರೆ, ವಿರಾಟ್ ಕೊಹ್ಲಿ 14, ಶ್ರೇಯಸ್ ಅಯ್ಯರ್ 7 ವಾಷಿಂಗ್ಟನ್ ಸುಂದರ್ 15 ರನ್ ಗಳಿಸುವಷ್ಟರಲ್ಲಿ ಸುಸ್ತಾದರು. ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ ಲಂಕಾ ಪಡೆ 9 ವಿಕೆಟ್ಗೆ 240 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 42.2 ಓವರ್ಗಳಲ್ಲಿ 208 ರನ್ಗೆ ಸರ್ವಪತನ ಕಂಡಿತು.
Sri Lanka win the 2nd ODI by 32 runs.#TeamIndia will look to bounce back in the 3rd and Final #SLvIND ODI.
— BCCI (@BCCI) August 4, 2024
Scorecard ▶️ https://t.co/KTwPVvU9s9 pic.twitter.com/wx1GiTimXp
ಉತ್ತಮ ಆರಂಭ, ದಿಢೀರ್ ಕುಸಿತ: ಸಾಧಾರಣ ಗುರಿ ಬೆನ್ನತ್ತಿದ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಎಂದಿನಂತೆ ಕಿಕ್ ಸ್ಟಾರ್ಟ್ ನೀಡಿದರು. 10 ಓವರ್ಗಳ ಪವರ್ಪ್ಲೇನಲ್ಲಿ 76 ರನ್ ಗಳಿಸಿತು. ಗಿಲ್ ಮತ್ತು ಶರ್ಮಾ ಜೋಡಿ ಮೊದಲ ವಿಕೆಟ್ಗೆ 97 ರನ್ ಗಳಿಸಿತು. 44 ಎಸೆತಗಳಲ್ಲಿ 64 ಗಳಿಸಿದ್ದಾಗ ಶರ್ಮಾ ವಾಂಡೆರ್ಸಿ ಬೌಲಿಂಗ್ನಲ್ಲಿ ಔಟಾದರು. ಅದಾದ ಬಳಿಕ ತಂಡ ದಿಢೀರ್ ಕುಸಿತ ಕಾಣಲು ಶುರು ಮಾಡಿತು. ಇದರ ಬೆನ್ನಲ್ಲೇ ಶುಭ್ಮನ್ಗಿಲ್ 35 ರನ್ಗೆ ವಿಕೆಟ್ ಅದೇ ಸ್ಪಿನ್ನರ್ಗೆ ಬಲಿಯಾದರು.
97 ರನ್ಗೆ 1 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ, ಉಳಿದ 9 ವಿಕೆಟ್ಗೆ ಗಳಿಸಿದ್ದು ಕೇವಲ 101 ರನ್. ತೀವ್ರ ಕುಸಿತ ಅನುಭವಿಸಿದ ತಂಡಕ್ಕೆ ಅಕ್ಷರ್ ಪಟೇಲ್ (44) ಕೊಂಚ ನೆರವಾದರು. ಅಸಲಂಕಾ ಬೌಲಿಂಗ್ನಲ್ಲಿ ಅಕ್ಷರ್ ಔಟಾದ ಬಳಿಕ ತಂಡ ಕೆಲವೇ ನಿಮಿಷಗಳಲ್ಲಿ ಆಲೌಟ್ ಆಯಿತು.
ವಾಂಡೆರ್ಸೆ ಸ್ಪಿನ್ ಜಾದು: 34 ವರ್ಷದ ಜೆಫ್ರಿ ವಾಂಡೆರ್ಸೆ ಭಾರತ ತಂಡಕ್ಕೆ ಅಕ್ಷರಶಃ ಕಂಟಕವಾಗಿ ಕಾಡಿದರು. 10 ಓವರ್ಗಳಲ್ಲಿ 33 ರನ್ ಬಿಟ್ಟುಕೊಟ್ಟು 6 ವಿಕೆಟ್ ಕಿತ್ತರು. ನಾಯಕ ಚರಿತ ಅಸಲಂಕಾ ಕೊನೆಯಲ್ಲಿ 3 ವಿಕೆಟ್ ಗಳಿಸಿ ಭಾರತ ತಂಡಕ್ಕೆ ಸೋಲಿನ ರುಚಿ ಉಣಿಸಿದರು. ಮೂರನೇ ಮತ್ತು ಕೊನೆಯ ಪಂದ್ಯ ಇದೇ ಮೈದಾನದಲ್ಲಿ ಆಗಸ್ಟ್ 7 ರಂದು ನಡೆಯಲಿದೆ.
ಇದನ್ನೂ ಓದಿ: ಹಾಕಿ ಕ್ವಾರ್ಟರ್ ಫೈನಲ್ನಲ್ಲಿ ಬ್ರಿಟನ್ ಮಣಿಸಿದ ಭಾರತ: ಸೆಮಿ ಫೈನಲ್ ಪ್ರವೇಶ - paris olympics 2024