ಹೈದರಾಬಾದ್: ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ಗಳಿಂದ ಸೋಲನುಭವಿಸಿತು. ಇದರೊಂದಿಗೆ ಸರಣಿಯಲ್ಲಿ 1-0ರ ಹಿನ್ನಡೆ ಅನುಭವಿಸಿದ್ದು, ಅ.24ರಿಂದ ಪುಣೆಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ತಂಡದ ಮ್ಯಾನೇಜ್ಮೆಂಟ್ ಕೂಡ ರಣತಂತ್ರ ರೂಪಿಸುತ್ತಿದೆ.
ಆದರೆ 2ನೇ ಟೆಸ್ಟ್ ಆರಂಭಕ್ಕೂ ಮೊದಲೇ ಭಾರತಕ್ಕೆ ಆಘಾತ ಎದುರಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಭರ್ಜರಿ ಪ್ರದರ್ಶನ ತೋರಿದ್ದ ವಿಕೆಟ್ ಕೀಪರ್ ಕಮ್ ಬ್ಯಾಟರ್ ರಿಷಭ್ ಪಂತ್ ಮುಂದಿನ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ. ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾದ ಪಂತ್ ನಾಲ್ಕನೇ ದಿನದಾಟದಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು.
ಆ ಬಳಿಕ ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಬಂದ ಪಂತ್ (99) ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ ಸಂಪೂರ್ಣ ಫಿಟ್ ಆಗಿರುವಂತೆ ಕಂಡುಬಂದಿರಲಿಲ್ಲ. 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾತ್ರ ಮಾಡಿದ್ದ ಅವರು ಪಂದ್ಯದುದ್ದಕ್ಕೂ ವಿಕೆಟ್ ಕೀಪಿಂಗ್ ಮಾಡಲಿಲ್ಲ.
ರೋಹಿತ್ ಶರ್ಮಾ ಹೇಳಿಕೆ: ಪುಣೆ ಟೆಸ್ಟ್‌ನಲ್ಲಿ ಪಂತ್ ಆಡುವ ಕುರಿತು ನಾಯಕ ರೋಹಿತ್ ಶರ್ಮಾ ಪ್ರಮುಖ ಅಪ್‌ಡೇಟ್ ನೀಡಿದರು. "ಪಂತ್ ಮೊಣಕಾಲಿಗೆ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಎಚ್ಚರಿಕೆ ವಹಿಸಬೇಕಿದೆ. ಹೀಗಾಗಿ ಮುಂದಿನ ಟೆಸ್ಟ್‌ಗೂ ಮುನ್ನ ಅವರಿಗೆ ಹೆಚ್ಚುವರಿ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ" ಎಂದು ತಿಳಿಸಿದ್ದಾರೆ.
ಶತಕ ವಂಚಿತ: ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ಪಂತ್ ಉತ್ತಮ ಬ್ಯಾಟಿಂಗ್ ಮಾಡಿದ್ದರು. 99 ರನ್ಗಳಿಸಿದ್ದ ಅವರು ವಿಲಿಯಂ ಓ'ರೂರ್ಕ್ ಎಸೆತದಲ್ಲಿ ಬೌಲ್ಡ್ ಆಗಿ ಕೇವಲ 1 ರನ್ನಿಂದ ಶತಕ ತಪ್ಪಿಸಿಕೊಂಡರು.
ಮೊದಲ ಟೆಸ್ಟ್ ವಿವರ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಲ್ಲಿ ಟಾಸ್ ಗೆದ್ದ ಬ್ಯಾಟಿಂಗ್ ಮಾಡಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46ರನ್ಗಳಿಗೆ ಸರ್ವಪತನ ಕಂಡಿತ್ತು. ಇದಕ್ಕೆ ಪ್ರತಿಯಾಗಿ ಕಿವೀಸ್ 462 ರನ್ಗಳನ್ನು ಕಲೆಹಾಕಿ 356 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಸರ್ಫರಾಜ್ ಖಾನ್ (150), ರಿಷಭ್ ಪಂತ್ ಬ್ಯಾಟಿಂಗ್ ನೆರವಿನಿಂದ 462 ರನ್ ದಾಖಲಿಸಿತು. ಆದರೆ, 356 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ನ್ಯೂಜಿಲೆಂಡ್ಗೆ ಕೇವಲ 107 ರನ್‌ಗಳ ಗುರಿ ನೀಡಲಷ್ಟೇ ಶಕ್ತವಾಗಿತ್ತು.
ಇದನ್ನೂ ಓದಿ: ರಣಜಿಯಲ್ಲಿ ಶತಕ ಸಿಡಿಸಿದ ಪೂಜಾರ: ಕ್ರಿಕೆಟ್ ದಿಗ್ಗಜ ಬ್ರಿಯನ್ ಲಾರಾ ರೆಕಾರ್ಡ್ ಬ್ರೇಕ್!