Sanju Samson Record: ಶುಕ್ರವಾರ ಡರ್ಬನ್ನ ಕಿಂಗ್ಸ್‌ಮೀಡ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ತೋರಿದ್ದಾರೆ. ತಮ್ಮ ಸೂಪರ್ ಫಾರ್ಮ್ ಅನ್ನು ಮುಂದುವರೆಸಿರುವ ಸಂಜು ಭರ್ಜರಿ ಶತಕ ಸಿಡಿಸಿದ್ದಾರೆ.
ಆರಂಭಿಕರಾಗಿ ಕ್ರೀಸ್ಗಿಳಿದ ಸಂಜು ಶತಕದೊಂದಿಗೆ 107 ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ತಮ್ಮ ಇನ್ನಿಂಗ್ಸ್ನಲ್ಲಿ ರನ್ ಮಳೆ ಸುರಿಸಿದ ಸಂಜು 7 ಬೌಂಡರಿ ಮತ್ತು 10 ಸಿಕ್ಸರ್ ಸಿಡಿಸಿ ಹರಿಣ ಬೌಲಿಂಗ್ ಪಡೆಯನ್ನು ಧ್ವಂಸ ಮಾಡಿದರು. ಇದರೊಂದಿಗೆ ರೋಹಿತ್ ಶಮಾ, ಸೂರ್ಯಕುಮಾರ್ ಯಾದವ್ ಮತ್ತು ಯುವರಾಜ್ ಸಿಂಗ್ ಅವರ ದಾಖಲೆಗಳನ್ನು ಮುರಿದು ತಮ್ಮ ಹೆಸರಿಗೆ ಹೊಸ ದಾಖಲೆಗಳನ್ನು ಸೇರಿಸಿಕೊಂಡಿದ್ದಾರೆ.
For his sublime century in the 1st T20I, Sanju Samson receives the Player of the Match award 👏👏
— BCCI (@BCCI) November 8, 2024
Scorecard - https://t.co/0NYhIHEpq0#TeamIndia | #SAvIND | @IamSanjuSamson pic.twitter.com/Y6Xgh0YKXZ
ಒಂದು ಶತಕ ಹಲವು ದಾಖಲೆ ಉಡೀಸ್: ಅಭಿಷೇಕ್ ಶರ್ಮಾರೊಂದಿಗೆ ಆರಂಭಿಕರಾಗಿ ಕ್ರೀಸ್ಗಿಳಿದ ಸಂಜು 47 ಎಸೆತಗಳಲ್ಲಿ ಶತಕ ಪೂರೈಸಿದರು. ಇದರೊಂದಿಗೆ ಹರಿಣಗಳ ಪಡೆ ವಿರುದ್ಧ ವೇಗದ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ದಾಖಲೆ ಬರೆದರು. ಅಲ್ಲದೆ, ಭಾರತದ ಪರ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 2017ರಲ್ಲಿ ಇಂದೋರ್‌ನಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ 118 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದರಲ್ಲಿ 10 ಸಿಕ್ಸರ್‌ಗಳನ್ನು ಸಿಡಿಸಿದ್ದರು.
ಹಿಟ್ಮ್ಯಾನ್ ದಾಖಲೆ ಮುರಿದ ಸಂಜು: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಹೆಚ್ಚು ಸ್ಕೋರ್ ಗಳಿಸಿದ ಬ್ಯಾಟರ್ ಆಗಿ ರೋಹಿತ್ ಶರ್ಮಾ ಅವರ ದಾಖಲೆ ಮುರಿದರು. ಇದಕ್ಕೂ ಮುನ್ನ 2015ರಲ್ಲಿ ಧರ್ಮಶಾಲಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ 106 ರನ್‌ಗಳ ಇನಿಂಗ್ಸ್ ಆಡಿದ್ದರು.
ಹರಿಣಗಳ ನೆಲದಲ್ಲಿ ಅತಿ ಹೆಚ್ಚು ಸ್ಕೋರ್: ದಕ್ಷಿಣ ಆಫ್ರಿಕಾ ನೆಲದಲ್ಲಿ ಅತ್ಯಧಿಕ ಸ್ಕೋರ್ ಮಾಡಿದ ದಾಖಲೆಯನ್ನೂ ಸಂಜು ನಿರ್ಮಿಸಿದ್ದಾರೆ. ಇದರೊಂದಿಗೆ ಸೂರ್ಯಕುಮಾರ್ ಹೆಸರಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು. ಕಳೆದ ವರ್ಷ ಜೋಹಾನ್ಸ್ಬರ್ಗ್ ವಾಂಡರರ್ಸ್ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ 100 ರನ್ ಸಿಡಿಸಿ ಈ ಸಾಧನೆ ಮಾಡಿದ್ದರು.
ಯುವರಾಜ್ ಸಿಂಗ್ ದಾಖಲೆ: ನಿನ್ನೆಯ ಪಂದ್ಯದಲ್ಲಿ ಸಂಜು ಯುವರಾಜ್ ಸಿಂಗ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಂತಾರಾಷ್ಟ್ರೀಯ T20 ಪಂದ್ಯದಲ್ಲಿ ಸ್ಪಿನ್ ಬೌಲಿಂಗ್ನಲ್ಲಿ ಅತಿ ಹೆಚ್ಚು ರನ್ಗಳಿಸಿ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯದಲ್ಲಿ ಸಂಜು 27 ಸ್ಪಿನ್ ಬೌಲಿಂಗ್ ಆಡಿ ಅದರಲ್ಲಿ 58 ರನ್ ಗಳಿಸಿದರು. 2012ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ 24 ಸ್ಪಿನ್ ಎಸೆತಗಳಲ್ಲಿ 57 ರನ್ ಗಳಿಸಿದ್ದರು.
IND vs SA T20 Highlights ಪಂದ್ಯದ ವಿವರ: ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 202ರನ್ ಪೇರಿಸಿತು. ಈ ಗುರಿಯನ್ನು ಬೆನ್ನತ್ತಿದ ಹರಿಣಗಳ ಪಡೆ ಕನ್ನಡಿಗ ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಟೋಯಿ ಬೌಲಿಂಗ್ ದಾಳಿಗೆ ಸಿಲುಕಿ 141 ರನ್ಗಳಿಗೆ ಆಲೌಟ್ ಆಗಿ 61 ರನ್‌ಗಳ ಸೋಲನುಭವಿಸಿತು.
ಇದನ್ನೂ ಓದಿ: ಹರಿಣಗಳ ನಾಡಲ್ಲಿ ಭಾರತೀಯರ ಅಬ್ಬರ: ಸಂಜು ಸೆಂಚುರಿಗೆ ಸೋತು ಶರಣಾದ ದಕ್ಷಿಣ ಆಫ್ರಿಕಾ