IND vs NZ 2nd Test: ಪುಣೆಯಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ 259 ರನ್ ಗಳಿಗೆ ಆಲೌಟಾಗಿದೆ. ಭಾರತದ ಸ್ಪಿನ್ ದಾಳಿಗೆ ಸಿಲುಕಿದ ಕಿವೀಸ್ ಪಡೆ ಅಲ್ಪಮೊತ್ತಕ್ಕೆ ಕುಸಿದಿದೆ. ಅದರಲ್ಲೂ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ತಮ್ಮ ಮಾರಕ ಬೌಲಿಂಗ್ನಿಂದ ಏಳು ವಿಕೆಟ್‌ಗಳನ್ನು ಉರುಳಿಸಿದರೆ, ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಿಚ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು.
ಭಾರತ ಕೂಡ ಮೂರು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದಿದೆ. ಕೆಎಲ್ ರಾಹುಲ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಬದಲಿಗೆ ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಆಕಾಶದೀಪ್ರನ್ನು ತಂಡಕ್ಕೆ ಸೇರಿಕೊಂಡಿದೆ.
ಆರಂಭದಲ್ಲಿ ಕಿವೀಸ್ ಪಡೆಗೆ ಅಶ್ವಿನ್ ಶಾಕ್ ನೀಡಿದ್ದರು. 32 ರನ್ಗಳಿಸಿದ್ದ ಲ್ಯಾಥಮ್ ಅವರನ್ನು ಅಶ್ವಿನ್ ತಮ್ಮ ಸ್ಪಿನ್ ಬಲೆಗೆ ಬೀಳಿಸಿದ್ದರು. ಬಳಿಕ ತಂಡ 76 ರನ್ಗಳಿಸಿದ್ದ ವೇಳೆ ಅಶ್ವಿನ್ ವಿಲ್ ಯಂಗ್ (18) ಅವರ ವಿಕೆಟ್ ಉರುಳಿಸಿದರು. ನಂತರ ಚೇತರಿಸಿಕೊಂಡ ಕಿವೀಸ್ ಬ್ಯಾಟರ್ಗಳು, ರನ್ಗಳಿಸಲಾರಂಭಿಸಿದರು ತಂಡದ ಸ್ಕೋರ್ 138 ಆಗುವವರೆಗೂ ವಿಕೆಟ್ ಕಾಯ್ದುಕೊಂಡಿದ್ದರು. 76 ರನ್ಗಳಿಸಿ ಶತಕದ ಸಮೀಪಿಸುತ್ತಿದ್ದ ಕಾನ್ವೆಗೆ ಅಶ್ವಿನ್ ಶಾಕ್ ನೀಡಿದರು. ಅವರ ವಿಕೆಟ್ ಪಡೆಯುವ ಮೂಲಕ ಶತಕದಾಟಕ್ಕೆ ಬ್ರೇಕ್ ಹಾಕಿದರು. ಆರಂಭಿಕ 3 ವಿಕೆಟ್ ಪಡೆದ ಅಶ್ವಿನ್ ಕಿವೀಸ್ ರನ್ ಓಟಕ್ಕೆ ಬ್ರೇಕ್ ಹಾಕಿದರು.
ಆ ಬಳಿಕ ವಾಷಿಂಗ್ಟನ್ ಸುಂದರ್ ಹವಾ ಶುರುವಾಯಿತು. ಬಿಗಿಯಾದ ಬೌಲಿಂಗ್ನಿಂದ ಎದುರಾಳಿ ಬ್ಯಾಟರ್ಗಳನ್ನು ಸದೆಬಡಿದ ಸುಂದರ್ ಉಳಿದ ಏಳು ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಚಿನ್ ಈ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದರೆ, ಡೆವೊನ್ ಕಾನ್ವೆ (76) ಅಗ್ರ ಸ್ಕೋರರ್ ಎನಿಸಿಕೊಂಡರು. ಕಿವೀಸ್ 62 ರನ್‌ಗಳಲ್ಲಿ ತನ್ನ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಎಲ್ಲಾ ವಿಕೆಟ್ಗಳು ಸುಂದರ್ ಹೆಸರಿಗೆ ಸೇರಿದವು.
7 ವಿಕೆಟ್: ಆರಂಭದಲ್ಲಿ ವಾಷಿಂಗ್ಟನ್ ಕಿವೀಸ್ ವಿರುದ್ಧದ ಸರಣಿಗೆ ಆಯ್ಕೆಯಾಗಿರಲಿಲ್ಲ. ಆದರೆ ಅನಿರೀಕ್ಷಿತವಾಗಿ ಮೊದಲ ಟೆಸ್ಟ್‌ನಲ್ಲಿ ಭಾರತ ಸೋಲಿನ ನಂತರ ಬಿಸಿಸಿಐ ಸುಂದರ್ ಅವರನ್ನು ಎರಡನೇ ಮತ್ತು ಮೂರನೇ ಟೆಸ್ಟ್‌ಗೆ ಆಯ್ಕೆ ಮಾಡಿತು. ಎರಡನೇ ಟೆಸ್ಟ್‌ನಲ್ಲಿ ಅಂತಿಮ ತಂಡದಲ್ಲಿ ಸುಂದರ್ಗೆ ಸ್ಥಾನ ನೀಡಲಾಯಿತು. ಅದಕ್ಕೆ ತಕ್ಕಂತೆ ವಾಷಿಂಗ್ಟನ್ ಸುಂದರ್ ಏಳು ವಿಕೆಟ್ ಪಡೆದು ಮ್ಯಾನೇಜ್‌ಮೆಂಟ್‌ನ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ಭಾರತ ಸ್ಕೋರ್: ಮೊದಲದಿನ ಮುಕ್ತಾಯಕ್ಕೆ ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 1 ವಿಕೆಟ್ ಕಳೆದುಕೊಂಡು 16 ರನ್ ಕಲೆಹಾಕಿದೆ. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಶೂನ್ಯಕ್ಕೆ ಪೆವಿಲಿಯನ್ ಸೇರಿದ್ದಾರೆ. ಶುಭಮನ್ ಗಿಲ್ (10) ಮತ್ತು ಜೈಸ್ವಾಲ್ (6) ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ: ಮೊಟ್ಟ ಮೊದಲ IPL ವಿಕೆಟ್ ಪಡೆದ ಬೌಲರ್ ಯಾರು?: ಆರ್ಸಿಬಿ ಹೆಸರಲ್ಲಿದೆ ಈ ದಾಖಲೆ