ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ನಾಳೆಯಿಂದ ರಾಂಚಿಯಲ್ಲಿ ಆರಂಭವಾಗಲಿದೆ. ಮೂರು ಟೆಸ್ಟ್ಗಳ ಪೈಕಿ ಎರಡು ಟೆಸ್ಟ್ಗಳಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ 2-1 ರಿಂದ ಮುಂದಿದೆ. ನಾಲ್ಕನೇ ಟೆಸ್ಟ್ ಗೆದ್ದು ಮುನ್ನಡೆ ಸಾಧಿಸುವ ಸನ್ನಾಹದಲ್ಲಿದೆ. ಇನ್ನು ಇಂಗ್ಲೆಂಡ್ ತಂಡ ಈ ಟೆಸ್ಟ್ ಗೆದ್ದು ಸರಣಿ ಸಮ ಮಾಡಿಕೊಳ್ಳುವತ್ತ ಚಿತ್ತ ಹರಿಸಿದೆ. ಎರಡೂ ತಂಡಗಳು ಈ ಪಂದ್ಯಕ್ಕೆ ಸಂಪೂರ್ಣ ಸಜ್ಜಾಗಿವೆ. ಈ ಟೆಸ್ಟ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, 22 ರನ್ಗಳನ್ನು ಮಾಡಿದರೆ, ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಸಾವಿರ ರನ್ ಪೂರೈಸಲಿದ್ದಾರೆ.
ರೋಹಿತ್ ಶರ್ಮಾ 57 ಪಂದ್ಯಗಳ 98 ಇನ್ನಿಂಗ್ಸ್‌ಗಳಲ್ಲಿ 3,978 ರನ್ ಗಳಿಸಿದ್ದಾರೆ. ಇದರಲ್ಲಿ 11 ಶತಕಗಳು ಮತ್ತು 16 ಅರ್ಧ ಶತಕಗಳು ಸೇರಿರುವುದು ವಿಶೇಷ. ರೋಹಿತ್ ಶರ್ಮಾ ಇದುವರೆಗೆ ಟೆಸ್ಟ್‌ನಲ್ಲಿ 45.2 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ಕ್ರಿಕೆಟಿಗನೊಬ್ಬ ವೇಗವಾಗಿ 4000 ರನ್ ಗಳಿಸಿದ ದಾಖಲೆ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದೆ. ಅವರು ವೆಸ್ಟ್ ಇಂಡೀಸ್ ವಿರುದ್ಧ 79 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದ್ದರು. ಅತ್ಯಂತ ವೇಗವಾಗಿ 4000 ರನ್ ಪೂರೈಸಿದ ದಾಖಲೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಡಾನ್ ಬ್ರಾಡ್ಮನ್, ಕೇವಲ 48 ಇನ್ನಿಂಗ್ಸ್‌ಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
ಮೂರನೇ ಟೆಸ್ಟ್‌ನಲ್ಲಿ ರೋಹಿತ್ ಎರಡನೇ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದರು. ಮೂರನೇ ಟೆಸ್ಟ್ ಪಂದ್ಯದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಒಟ್ಟಾರೆ ಸಿಕ್ಸರ್ಗಳ ಸಂಖ್ಯೆ 79ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ.
ಭಾರತ ಪರ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರಲ್ಲಿ ವಿರೇಂದ್ರ ಸೆಹ್ವಾಗ್ (90 ಸಿಕ್ಸರ್) ಮೊದಲ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಎಂ.ಎಸ್.ಧೋನಿ 78 ಸಿಕ್ಸರ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರು. ಇದೀಗ ಧೋನಿ ಅವರನ್ನು ರೋಹಿತ್ ಹಿಂದಿಕ್ಕಿದ್ದಾರೆ. ಮತ್ತೊಂದೆಡೆ, ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ (69), ರವೀಂದ್ರ ಜಡೇಜಾ (61), ಕಪಿಲ್ ದೇವ್ (61) ಹೆಚ್ಚಿನ ಸಿಕ್ಸರ್ ಸಿಡಿಸಿದ ಆಟಗಾರರಾಗಿದ್ದಾರೆ.
ಸದ್ಯ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಕಳೆದ ಪಂದ್ಯದಲ್ಲಿ ಭಾರತದ ನಾಯಕ ಶತಕ ಬಾರಿಸಿದ್ದರು. ಅದೇ ಸಮಯದಲ್ಲಿ, ಯಶಸ್ವಿ ಜೈಸ್ವಾಲ್ ಅವರು ದ್ವಿಶತಕ ಗಳಿಸಿ ಮಿಂಚಿದ್ದರು.
ಇದನ್ನು ಓದಿ: ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್‌ನಿಂದ ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಔಟ್, ಮುಖೇಶ್ ಕುಮಾರ್ಗೆ ಸ್ಥಾನ