ನವದೆಹಲಿ: ಭಾರತ- ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಐದನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತದ ಯುವ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಮಾ.7ರಿಂದ ಧರ್ಮಶಾಲಾದಲ್ಲಿ ಪ್ರಾರಂಭವಾಗುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ದೇವದತ್ ಅಂತಾರಾಷ್ಟ್ರೀಯ ಟೆಸ್ಟ್ ಪಾದಾರ್ಪಣೆ ಮಾಡಬಹುದು ಎಂದು ವರದಿಯಾಗಿದೆ. ಮೂರು ಟೆಸ್ಟ್ ಪಂದ್ಯಗಳಲ್ಲಿ ಸತತ ವೈಫಲ್ಯ ಕಂಡಿರುವ ರಜತ್ ಪಾಟಿದಾರ್ ಬದಲು ಅವರನ್ನು ಪ್ಲೇಯಿಂಗ್ 11ರಲ್ಲಿ ಸೇರಿಸಿಕೊಳ್ಳಬಹುದು. ಮತ್ತೊಂದೆಡೆ ಹೈದರಾಬಾದ್ ಟೆಸ್ಟ್ ಬಳಿಕ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕನ್ನಡಿಗ ಕೆ.ಎಲ್.ರಾಹುಲ್ ಕೂಡ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು ದೇವದತ್ಗೆ ತಂಡದಲ್ಲಿ ಸ್ಥಾನ ಪಕ್ಕಾ ಎಂದು ಹೇಳಲಾಗುತ್ತಿದೆ.
ಈಗಾಗಲೇ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಜತ್ ಪಾಟೀದಾರ್, ವಿಕೆಟ್ ಕೀಪರ್ ಧ್ರುವ್ ಜುರೆಲ್, ಬ್ಯಾಟರ್ ಸರ್ಫರಾಜ್ ಖಾನ್ ಮತ್ತು ವೇಗದ ಬೌಲರ್ ಆಕಾಶ್ ದೀಪ್ ಪದಾರ್ಪಣೆ ಮಾಡಿದ್ದಾರೆ. ದೇವದತ್ ಕೂಡಾ ಆಡುವ ಬಳಗ ಸೇರಿಕೊಂಡರೆ, ಐದನೇ ಆಟಗಾರ ಎನಿಸಿಕೊಳ್ಳುವರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್) ಅದ್ಭುತ ಪ್ರದರ್ಶನ ತೋರಿದ್ದ ದೇವದತ್ ಪಡಿಕ್ಕಲ್ 2021ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆದರು. ನಂತರ ಅಂತಾರಾಷ್ಟ್ರೀಯ ಟಿ20ಗೂ ಪಾದಾರ್ಪಣೆ ಮಾಡಿದರು. ಭಾರತ ಪರ ಎರಡು ಟಿ20 ಪಂದ್ಯಗಳನ್ನಾಡಿರುವ ಅವರು ಕೇವಲ 38 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 31 ಪಂದ್ಯಗಳನ್ನಾಡಿರುವ ದೇವದತ್ ಇದುವರೆಗೆ 2227 ರನ್ ಕಲೆಹಾಕಿದ್ದಾರೆ. ಇದರಲ್ಲಿ 6 ಶತಕ ಹಾಗೂ 12 ಅರ್ಧಶತಕಗಳು ಸೇರಿವೆ.
ರಾಂಚಿ ಟೆಸ್ಟ್ ಪಂದ್ಯದ ನಂತರ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಕೋಚಿಂಗ್ ಸಿಬ್ಬಂದಿಯ ಇತರ ಸದಸ್ಯರು ಮತ್ತು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಆಯ್ಕೆ ಸಮಿತಿ ಈ ಸಂಗತಿಯನ್ನು ಅಧಿಕೃತಗೊಳಿಸಬೇಕಷ್ಟೇ.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 3-1 ಅಂತರದಿಂದ ಮುನ್ನಡೆ ಸಾಧಿಸಿರುವ ಭಾರತ, ಧರ್ಮಶಾಲಾದಲ್ಲಿ ಪ್ರಾರಂಭವಾಗುವ ಕೊನೆಯ ಟೆಸ್ಟ್ಗೆ ಸಿದ್ಧತೆ ನಡೆಸುತ್ತಿದೆ. ಪಂದ್ಯದಲ್ಲಿ ತನ್ನ ಆಡುವ 11ರ ಬಳಗದಲ್ಲಿ ಪಡಿಕ್ಕಲ್ ಸ್ಥಾನ ಸೇರಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಗೋಚರಿಸಿದೆ.
ಇದನ್ನೂ ಓದಿ: WPL: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಯುವಕನ ವಿರುದ್ಧ ಎಫ್ಐಆರ್