ಟಿ20 ವಿಶ್ವಕಪ್ ರೋಚಕ ಸೂಪರ್-8; ಭಾರತದ ಎದುರಾಳಿಗಳ್ಯಾರು? ಪಂದ್ಯಗಳು ಯಾವಾಗ? - T20 World Cup Super Eight - T20 WORLD CUP SUPER EIGHT
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್- 8 ಹಂತದ ಪಂದ್ಯಗಳು ಜೂನ್ 19 ರಿಂದ ಆರಂಭವಾಗಲಿವೆ. ಭಾರತ ತಂಡದ ಪಂದ್ಯಗಳು ಸೇರಿದಂತೆ ಮುಂದಿನ ಹಂತಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Published : Jun 17, 2024, 10:12 AM IST
ನ್ಯೂಯಾರ್ಕ್; ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟರ್ಗಳ ಅಬ್ಬರಕ್ಕಿಂತ, ಮೈದಾನದಲ್ಲಿ ಬೌಲರ್ಗಳೇ ಚಮತ್ಕಾರ ತೋರುತ್ತಿದ್ದಾರೆ. ಬೌಲಿಂಗ್ ಸ್ನೇಹಿ ಪಿಚ್ಗಳಲ್ಲಿ ಬ್ಯಾಟರ್ಗಳಿಗೆ ಅಗ್ನಿಪರೀಕ್ಷೆ ಎದುರಾಗುತ್ತಿದೆ. ಸದ್ಯ ಟೂರ್ನಿಯು ಸೂಪರ್-8 ಹಂತದತ್ತ ತಲುಪುತ್ತಿದೆ. ಈ ಹಂತಕ್ಕೇರಿದ ತಂಡಗಳು ಯಾವುವು ಎಂಬುದು ಇದೀಗ ಅಧಿಕೃತವಾಗಿದೆ.
ಟಿ20 ವಿಶ್ವಕಪ್ ಸೂಪರ್-8 ಹಂತದ ಹಣಾಹಣಿಗಳನ್ನು ಗುಂಪು 1 ಹಾಗೂ ಗುಂಪು 2 ಎಂದು ವಿಂಗಡಣೆ ಮಾಡಲಾಗಿದೆ. ಗ್ರೂಪ್ 1ರಲ್ಲಿ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳಿವೆ. ಹಾಗೆಯೇ, ಗ್ರೂಪ್ 2ರಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಆಡುತ್ತಿರುವ ಅಮೆರಿಕ ತಂಡಗಳು ಸ್ಥಾನ ಪಡೆದಿವೆ.
ಸೂಪರ್-8 ಹಂತದಲ್ಲಿ 12 ಪಂದ್ಯಗಳು ನಡೆಯಲಿವೆ. ತಲಾ ಒಂದು ತಂಡವು ಮೂರು ಪಂದ್ಯಗಳನ್ನು ಆಡಲಿದೆ. ಇಲ್ಲಿ ಹೆಚ್ಚು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ 2 ತಂಡಗಳು ಮುಂದಿನ ಹಂತ ಅಂದರೆ ಸೆಮಿಫೈನಲ್ಗೆ ಪ್ರವೇಶ ಪಡೆಯಲಿವೆ. ಹೀಗಾಗಿ, ಈ ಹಂತವು ಇನ್ನಷ್ಟು ರೋಚಕತೆಯಿಂದ ಕೂಡಿರಲಿದೆ.
ಯಾವಾಗಿಂದ ಸೂಪರ್-8 ಆರಂಭ: ಜೂನ್ 2 ರಿಂದ ಆರಂಭವಾದ ಟೂರ್ನಿಯಲ್ಲಿ ಈಗಾಗಲೇ 38 ಪಂದ್ಯಗಳು ನಡೆದಿವೆ. ಇನ್ನೆರಡು ಮ್ಯಾಚ್ಗಳ ಬಳಿಕ, ಅಂದರೆ 40 ಪಂದ್ಯಗಳ ನಂತರ ಸೂಪರ್-8 ಫೈಟ್ ಶುರುವಾಗಲಿದೆ. ಈ ಹಂತದ ಮೊದಲ ಪಂದ್ಯದಲ್ಲಿ ಜೂನ್ 19 ರಂದು ಅಮೆರಿಕ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಎದುರಾಗಲಿವೆ.
ಭಾರತ ತಂಡದ ಪಂದ್ಯಗಳು: ರೋಹಿತ್ ಶರ್ಮಾ ಪಡೆಯು ಜೂನ್ 20ರಂದು ಅಫ್ಘಾನಿಸ್ತಾನದ ವಿರುದ್ಧ ಈ ಹಂತದ ಮೊದಲ ಪಂದ್ಯವನ್ನು ಆಡಲಿದೆ. ಬಳಿಕ ಜೂನ್ 22ರಂದು ಬಾಂಗ್ಲಾದೇಶ ಹಾಗೂ ಜೂನ್ 24ರಂದು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಭಾರತ ಕಣಕ್ಕಿಳಿಯಲಿದೆ. ಟೀಂ ಇಂಡಿಯಾದ ಎಲ್ಲ ಪಂದ್ಯಗಳೂ ಕೂಡ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿವೆ.
ಮುಂದಿನ ಹಂತಗಳು: ಸೂಪರ್-8 ಬಳಿಕ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಜೂನ್ 26ರಂದು ಟ್ರಿನಿಡಾಡ್ನಲ್ಲಿ ಮೊದಲ ಸೆಮಿಫೈನಲ್ ಹಾಗೂ ಜೂನ್ 27ರಂದು ಗಯಾನಾದಲ್ಲಿ ಎರಡನೇ ಸೆಮಿಫೈನಲ್ ಪಂದ್ಯವಿದೆ. ಜೂನ್ 29ರಂದು ಟೂರ್ನಿಯ ಅಂತಿಮ ಪಂದ್ಯ ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ.
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ 20 ತಂಡಗಳು ಭಾಗವಹಿಸಿವೆ. ಈಗಾಗಲೇ ಬಲಿಷ್ಠ ತಂಡವಾದ ನ್ಯೂಜಿಲೆಂಡ್ ಹಾಗೂ ಮಾಜಿ ಚಾಂಪಿಯನ್ ಶ್ರೀಲಂಕಾ ತಂಡಗಳು ಕಳಪೆ ಪ್ರದರ್ಶನದಿಂದ ಟೂರ್ನಿಯಿಂದ ಹೊರಬಿದ್ದಿವೆ. ಸೂಪರ್-8ಕ್ಕೆ ಅಚ್ಚರಿಯ ಪ್ರವೇಶ ಮಾಡಿರುವ ಅಮೆರಿಕ, ಜೊತೆಗೆ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳನ್ನೂ ಕೂಡ ಈ ಹಂತದಲ್ಲಿ ಲಘುವಾಗಿ ಪರಿಗಣಿಸುವಂತಿಲ್ಲ. ತಂಡಗಳು ಸೆಮಿಫೈನಲ್ಗೇರಲು ಎಲ್ಲ ಪಂದ್ಯಗಳೂ ಕೂಡ ಮಹತ್ವದ್ದಾಗಿವೆ.
ಇದನ್ನೂ ಓದಿ: ಐರ್ಲೆಂಡ್ ವಿರುದ್ಧ ಪ್ರಯಾಸದ ಗೆಲುವು; ಟಿ20 ವಿಶ್ವಕಪ್ನಿಂದ ಪಾಕ್ ನಿರ್ಗಮನ - Pakistan beats Ireland