ನವದೆಹಲಿ: ಏಕದಿನ (ODI) ಮತ್ತು ಟಿ20 ಕ್ರಿಕೆಟ್‌ಗಳಲ್ಲಿ ತಂಡಗಳು ಸಮಯ ವ್ಯರ್ಥ ಮಾಡುವುದನ್ನು ತಡೆಯಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 'ಸ್ಟಾಪ್ ಕ್ಲಾಕ್' ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಡಿಸೆಂಬರ್ 2023ರಲ್ಲಿ ಈ ಸ್ಟಾಪ್ ಕ್ಲಾಕ್ ನಿಯಮವನ್ನು ಪರಿಚಯಿಸಲಾಗಿತ್ತು. ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದ್ದು, ಜೂನ್‌ನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ನಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಐಸಿಸಿ ಪ್ರಕಟಿಸಿದೆ.
ಏನಿದು ಸ್ಟಾಪ್ ಕ್ಲಾಕ್; ಈ ನಿಯಮದ ಪ್ರಕಾರ ಫೀಲ್ಡಿಂಗ್ ಮಾಡುತ್ತಿರುವ ತಂಡವು ಹಿಂದಿನ ಓವರ್ ಮುಗಿಸಿ 60 ಸೆಕೆಂಡ್ಗಳೊಳಗೆ ಹೊಸ ಓವರ್ ಅನ್ನು ಆರಂಭಿಸಬೇಕು. ಒಂದು ವೇಳೆ ಈ ಸಮಯದೊಳಗೆ ಹೊಸ ಓವರ್ ಆರಂಭಿಸುವಲ್ಲಿ ತಂಡ ವಿಫವಾದರೆ ಎರಡು ಬಾರಿ ಎಚ್ಚರಿಕೆಯನ್ನು ನೀಡಲಾಗುತ್ತದೆ. ಬಳಿಕ ಪ್ರತಿ ಸಮಯ ಉಲ್ಲಂಘನೆಗೆ 5 ರನ್ಗಳ ದಂಡವನ್ನು ವಿಧಿಸಲಾಗುತ್ತದೆ. ಇದರಿಂದ ಎದುರಾಳಿ ತಂಡದ ಸ್ಕೋರ್ಗೆ ಈ 5ರನ್ ಸೇರ್ಪಡೆಯಾಗುತ್ತದೆ. ಓವರ್ ಪೂರ್ಣಗೊಳ್ಳತ್ತಿದ್ದಂತೆ ಮೈದಾನದಲ್ಲಿ ಅಳವಡಿಸಿರುವ ದೊಡ್ಡ ಪರದೆಯಲ್ಲಿ ಈ ಟೈಮ್ ಕೌಂಟಿಂಗ್ ಆರಂಭಗೊಳ್ಳತ್ತದೆ. ಮೂರನೇ ಅಂಪೈರ್ ಕ್ಲಾಕ್ನ ಆರಂಭವನ್ನು ನಿರ್ಧರಿಸಲಿದ್ದಾರೆ. ಇದರಿಂದ ಪ್ರತಿ ಪಂದ್ಯಗಳಲ್ಲಿ 20 ನಿಮಿಷಗಳ ಉಳಿತಾಯವಾಗಲಿದೆ ಎಂದು ಐಸಿಸಿ ತಿಳಿಸಿದೆ.
ಯಾವುದಕ್ಕೆಲ್ಲ ವಿನಾಯಿತಿ: ಆದಾಗ್ಯೂ, ಐಸಿಸಿ ಈ ನಿಯಮಕ್ಕೆ ಕೆಲವು ವಿನಾಯಿತಿಗಳನ್ನು ಸಹ ಸೇರಿಸಿದೆ. ಅಂತಹ ಸಂದರ್ಭಗಳಲ್ಲಿ ಈ ಸಮಯವನ್ನು ರದ್ದುಗೊಳಿಸಲಾಗುತ್ತದೆ. ಇದು ಬ್ಯಾಟ್ಸ್‌ಮನ್ ಅಥವಾ ಫೀಲ್ಡರ್ ಗಾಯಗೊಂಡ ಸಂದರ್ಭದಲ್ಲಿ, ಮೈದಾನದ ಚಿಕಿತ್ಸೆ ಕೊಡುವ ವೇಳೆ, ಬ್ಯಾಟ್ಸ್‌ಮನ್ ಕ್ರೀಸ್‌ಗೆ ಬರುವಾಗ ಮತ್ತು ಡ್ರಿಂಕ್ಸ್ ಬ್ರೇಕ್ ವೇಳೆ ಸಮಯವನ್ನು ರದ್ದುಗೊಳಿಸಲಾಗುತ್ತದೆ. ಫೀಲ್ಡಿಂಗ್ ತಂಡದ ನಿಯಂತ್ರಣಕ್ಕೆ ಮೀರಿದ ಕೆಲ ಸಂದರ್ಭಗಳಲ್ಲೂ ಸಮಯ ಕಳೆದುಹೋದರೆ ಆಗಲೂ ಈ ವಿನಾಯಿತಿ ಅನ್ವಯಿಸಲಿದೆ ಎಂದು ಐಸಿಸಿ ಹೇಳಿದೆ.
ಫೀಲ್ಡಿಂಗ್ ತಂಡಗಳು ಸಾಮಾನ್ಯವಾಗಿ ಪಂದ್ಯದ ವೇಗವನ್ನು ನಿಧಾನಗೊಳಿಸಲು ಪ್ರಯತ್ನಿಸುತ್ತವೆ, ಇದರಿಂದಾಗಿ ಅವರು ಕಾರ್ಯತಂತ್ರವನ್ನು ರೂಪಿಸಲು ಹೆಚ್ಚಿನ ಸಮಯ ಸಿಕ್ಕಂತಾಗುತ್ತದೆ. ಅಲ್ಲದೆ ತಂಡಗಳು ಪ್ರತಿ ಎಸೆತದ ನಂತರ ಫೀಲ್ಡಿಂಗ್ ಬದಲಾವಣೆಗೂ ಅವಕಾಶ ಸಿಕ್ಕಂತಾಗುತ್ತದೆ. ಈ ಹಿಂದೆ ಸಮಯ ಮೀರಿ ಪಂದ್ಯ ನಡೆದಾಗ ತಂಡ ಮತ್ತು ನಾಯಕನಿಗೆ ದಂಡ ವಿಧಿಸಲಾಗುತ್ತಿತ್ತು. ಆದರೆ ಇದು ಸಮಯ ವ್ಯರ್ಥವನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿರಲಿಲ್ಲ.
2024 ರ ಟಿ20 ವಿಶ್ವಕಪ್ ಜೂನ್ 2 ರಂದು ಪ್ರಾರಂಭವಾಗಿ ಜೂನ್ 29 ರಂದು ಕೊನೆಗೊಳ್ಳಲಿದೆ. ಎರಡೂ ಸೆಮಿಸ್ ಪಂದ್ಯಗಳು 27 ರಂದು ನಡೆದರೆ, ಫೈನಲ್ 29 ರಂದು ಜರುಗಲಿದೆ.
ಇದನ್ನೂ ಓದಿ: WPL 2024 : ಮುಂಬೈ ಇಂಡಿಯನ್ಸ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಬೆಂಗಳೂರು ವನಿತೆಯರು