ನವದೆಹಲಿ: ಈ ಬಾರಿಯ ಪ್ಯಾರಿಸ್ ಒಲಿಂಪಿಕ್ನಲ್ಲಿ ಹೆಚ್ಚಿನ ಪದಕ ಗೆಲ್ಲುವ ಗುರಿಯನ್ನು ಹೊಂದಿದ್ದ ಭಾರತೀಯ ಅಥ್ಲೀಟ್‌ಗಳಿಗೆ ಭಾರೀ ನಿರಾಸೆಯಾಗಿದೆ. ಕಳೆದ ಒಲಿಂಪಿಕ್ನಲ್ಲಿ ಚಿನ್ನದ ಪದಕ ಸೇರಿ 7 ಪದಕಗಳನ್ನು ಗೆದ್ದಿದ್ದ ಅಥ್ಲೀಟ್‌ಗಳಿಗೆ ಈ ಬಾರಿ ಹಿಂದಿನ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗಲಿಲ್ಲ.
1 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಒಳಗೊಂಡಂತೆ ಕೇವಲ 6 ಪದಕಗಳನ್ನು ಮಾತ್ರ ಗೆದ್ದುಕೊಂಡಿದ್ದಾರೆ. ಆದ್ರೆ ನಿಮಗೆ ಗೊತ್ತಾ ಕಳೆದ 24 ವರ್ಷಗಳಲ್ಲಿ ಭಾರತ ಒಲಿಂಪಿಕ್ನಲ್ಲಿ ಎಷ್ಟು ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ ಮತ್ತು ಯಾವ ಕ್ರೀಡೆಯಲ್ಲಿ ಗೆದ್ದಿತ್ತು ಎಂಬುದರ ಬಗ್ಗೆ ಈ ಸುದ್ದಿಯಲ್ಲಿ ತಿಳಿಯೋಣ.
ಒಲಿಂಪಿಕ್ ಪದಕಗಳು: ಭಾರತ 1900 ರಿಂದ ಒಲಿಂಪಿಕ್ನಲ್ಲಿ ಭಾಗವಹಿಸುತ್ತಿದೆ. ಒಲಿಂಪಿಕ್ಸ್ ಅಧಿಕೃತ ವೆಬ್ಸೈಟ್ ಪ್ರಕಾರ ಭಾರತ ಇದುವರೆಗೂ ಒಟ್ಟು 26 ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದೆ. ಅಂದಿನಿಂದ ಇಲ್ಲಿಯವರೆಗೆ 41 ಪದಕಗಳನ್ನು ಗೆದ್ದುಕೊಂಡಿದೆ. ಈ ಅವಧಿಯಲ್ಲಿ ಭಾರತ ಕೇವಲ 10 ಚಿನ್ನದ ಪದಕಗಳನ್ನು ಗೆದ್ದಿದ್ದು, ಅದರಲ್ಲಿ ಭಾರತದ ಪುರುಷರ ಹಾಕಿ ತಂಡ 8 ಚಿನ್ನದ ಪದಕಗಳನ್ನು ಹೊಂದಿದೆ. ಇದನ್ನು ಹೊರತು ಪಡಿಸಿ ಇಬ್ಬರು ಕ್ರೀಡಾಪಟುಗಳು ಮಾತ್ರ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
24 ವರ್ಷಗಳಲ್ಲಿ ಭಾರತ ಗೆದ್ದ ಚಿನ್ನದ ಪದಕ ಎಷ್ಟು?: 2000 ರಿಂದ 2024ರ ವರೆಗಿನ ಒಲಿಂಪಿಕ್ನಲ್ಲಿ ಭಾರತ ಕೇವಲ ಎರಡು ಚಿನ್ನದ ಪದಕಗಳನ್ನು ಗೆದ್ದಿದೆ. 2008ರ ಬೀಜಿಂಗ್ ಒಲಿಂಪಿಕ್ನಲ್ಲಿ ಶೂಟರ್ ಅಭಿನವ್ ಬಿಂದ್ರಾ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದಿದ್ದರು. ಇದಾದ 12 ವರ್ಷಗಳ ಬಳಿಕ, ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ 2020ರಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದರು. ಇದಕ್ಕೂ ಮುನ್ನ 1980ರ ಮಾಸ್ಕೋ ಒಲಿಂಪಿಕ್ನಲ್ಲಿ ಭಾರತ ಹಾಕಿ ತಂಡ ಚಿನ್ನದ ಪದಕ ಜಯಿಸಿತ್ತು. ಕಳೆದ 44 ವರ್ಷಗಳಲ್ಲಿ ಭಾರತ ಕೇವಲ 3 ಚಿನ್ನದ ಪದಕಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ.