ಬ್ರಿಡ್ಜ್‌ಟೌನ್ (ಬಾರ್ಬಡೋಸ್): ಆರಂಭಿಕ ಬ್ಯಾಟರ್ ಶಾಯ್ ಹೋಪ್ ಅಬ್ಬರದ ಅಜೇಯ 82 ರನ್ ಹಾಗೂ ಬೌಲರ್ಗಳ ಸಂಘಟಿತ ದಾಳಿಯಿಂದಾಗಿ ವೆಸ್ಟ್ ಇಂಡೀಸ್ ತಂಡವು ಅಮೆರಿಕ ವಿರುದ್ಧ 9 ವಿಕೆಟ್ಗಳ ಅಮೋಘ ಜಯ ದಾಖಲಿಸಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಟಿ20 ವಿಶ್ವಕಪ್ ಗ್ರೂಪ್-2 ಸೂಪರ್ - 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆಲುವಿನ ಲಯಕ್ಕೆ ಮರಳಿದರೆ, ಅಮೆರಿಕ ತಂಡ ಸತತ ಎರಡನೇ ಸೋಲುಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಅಮೆರಿಕ ತಂಡ 19.5 ಓವರ್‌ಗಳಲ್ಲಿ ಕೇವಲ 128 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಓವರ್ನಲ್ಲೇ ಸ್ಟಿವನ್ ಟೇಲರ್ (2) ವಿಕೆಟ್ ಕಳೆದುಕೊಂಡ ಯುಎಸ್ಗೆ, ವಿಕೆಟ್ ಕೀಪರ್ ಆಂಡ್ರೀಸ್ ಗೌಸ್ (29) ಹಾಗೂ ನಿತೀಶ್ ಕುಮಾರ್ (20) ಆಸರೆಯಾದರು. ಈ ಜೋಡಿ ಎರಡನೇ ವಿಕೆಟ್ಗೆ 48 ರನ್ ಸೇರಿಸಿತು.
ಆದರೆ, ನಿತೀಶ್ ವಿಕೆಟ್ ಪತನದ ಬಳಿಕ ಯುಎಸ್ ಇನ್ನಿಂಗ್ಸ್ ಲಯ ತಪ್ಪಿತು. ತದನಂತರ, ನಾಯಕ ಆರನ್ ಜೋನ್ಸ್ 11, ಕೋರಿ ಆಂಡರ್ಸನ್ 7 ಹಾಗೂ ಹರ್ಮೀತ್ ಸಿಂಗ್ ಶೂನ್ಯಕ್ಕೆ ಔಟಾದರು. ಹೀಗಾಗಿ, 86 ರನ್ ಆಗುವಷ್ಟರಲ್ಲೇ 6 ವಿಕೆಟ್ ಉರುಳಿದವು. ಈ ವೇಳೆ, ಮಿಲಿಂದ್ ಕುಮಾರ್ (19) ಹಾಗು ಶಾಡ್ಲಿ ವ್ಯಾನ್ ಸ್ಚಾಲ್ಕ್‌ವಿಕ್ (18) 22 ರನ್ ಜೊತೆಯಾಟವಾಡಿದರು. 112 ರನ್ ಆಗಿದ್ದಾಗ ಇವರಿಬ್ಬರೂ ಒಬ್ಬರ ಹಿಂದೊಬ್ಬರಂತೆ ಔಟಾದರು.
ಆ ಬಳಿಕ ಯುಎಸ್ ಹೆಚ್ಚಿನ ರನ್ ಗಳಿಸದೇ, 19.5 ಓವರ್‌ಗಳಲ್ಲಿ 128ಕ್ಕೆ ಆಲೌಟ್ ಆಯಿತು. ಅಲಿ ಖಾನ್ ಅಜೇಯ 14 ರನ್ ಕಾಣಿಕೆ ನೀಡಿದರು. ವಿಂಡೀಸ್ ಪರ ರಸೆಲ್ 20ಕ್ಕೆ 3 ಹಾಗೂ ರೋಸ್ಟನ್ ಚೇಸ್ 19ಕ್ಕೆ 3 ಹಾಗೂ ಅಲ್ಜಾರಿ ಜೋಸೆಫ್ 31ಕ್ಕೆ 2 ವಿಕೆಟ್ ಪಡೆದರು.
ವಿಂಡೀಸ್ ಅಬ್ಬರದ ಚೇಸಿಂಗ್; 129 ರನ್ ಬೆನ್ನಟ್ಟಿದ ಕೆರಿಬಿಯನ್ನರು ಅಮೆರಿಕ ಬೌಲರ್ಗಳೆದುರು ಅಬ್ಬರಿಸಿದರು. ಯುಎಸ್ ಬೌಲಿಂಗ್ ದಾಳಿಯನ್ನು ಚೆಂಡಾಡಿದ ಶಾಯ್ ಹೋಪ್ 39 ಎಸೆತಗಳಲ್ಲಿ ಅಜೇಯ 82 ರನ್ ಸಿಡಿಸಿದರು. ತಂಡದ ಮೊತ್ತ 67 ರನ್ ಆಗಿದ್ದಾಗ ಜಾನ್ಸನ್ ಚಾರ್ಲ್ಸ್ 15 ರನ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಿಕೋಲಸ್ ಪೂರನ್ 12 ಬಾಲ್ಗೆ ಅಜೇಯ 27 ರನ್ ಬಾರಿಸಿ ತಂಡವು ಸುಲಭದ ಜಯ ಸಾಧಿಸುವಲ್ಲಿ ನೆರವಾದರು. ಕೇವಲ 10.5 ಓವರ್ಗಳಲ್ಲೇ ವೆಸ್ಟ್ ಇಂಡೀಸ್ ತಂಡ ಗೆಲುವಿನ ಗೆರೆ ದಾಟಿತು. ಇದರೊಂದಿಗೆ ಸೂಪರ್-8 ಹಂತದಲ್ಲಿ ಮೊದಲ ಜಯದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಇಂಗ್ಲೆಂಡ್ ಹಿಂದಿಕ್ಕಿ, ರನ್ರೇಟ್ ಆಧಾರದಲ್ಲಿ ಎರಡನೇ ಸ್ಥಾನಕ್ಕೇರಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಜಯದ ಅಂಚಿನಲ್ಲಿ ಎಡವಿದ ಇಂಗ್ಲೆಂಡ್; ಗೆದ್ದು ಬೀಗಿದ ಹರಿಣಗಳು - South Africa Defeats England