ಎರ್ನಾಕುಲಂ(ಕೇರಳ): ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಇಂದು ತವರಿಗೆ ಆಗಮಿಸಿದ ಹಾಕಿ ದಿಗ್ಗಜ ಪಿ.ಆರ್.ಶ್ರೀಜೇಶ್ ಅವರಿಗೆ ಹುಟ್ಟೂರಿನಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಎರ್ನಾಕುಲಂ ಜಿಲ್ಲಾಧಿಕಾರಿ, ಶಾಸಕರು ಮತ್ತು ವಿದ್ಯಾರ್ಥಿಗಳು ನೆಡುಂಬಶ್ಶೇರಿ ವಿಮಾನ ನಿಲ್ದಾಣಕ್ಕೆ ಕುಟುಂಬ ಸಮೇತವಾಗಿ ಆಗಮಿಸಿ ದೆಹಲಿಯಿಂದ ಆಗಮಿಸಿದ ಶ್ರೀಜೇಶ್ ಅವರನ್ನು ಚಪ್ಪಾಳೆಯೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಕುರಿತು ಸಂತಸ ವ್ಯಕ್ತಪಡಿಸಿದ ಶ್ರೀಜೇಶ್, ತವರೂರಿನಲ್ಲಿ ನಿರೀಕ್ಷೆಗೂ ಮೀರಿ ಸ್ವಾಗತ ಸಿಕ್ಕಿದೆ ಎಂದರು. ಮುಂದುವರೆದು, ಕೇರಳದಲ್ಲಿ ಹಾಕಿ ಸಂಬಂಧಿತ ಮೂಲಸೌಕರ್ಯಗಳ ಹೆಚ್ಚಿಸುವ ಬಗ್ಗೆ ಒತ್ತಿ ಹೇಳಿದರು. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡುತ್ತೇನೆ. ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಹಾಕಿ ಮೈದಾನ ಇರಬೇಕು ಎಂದು ಹೇಳಿದರು.
One man. A million memories. #ThankYouSreejesh#Hockey #Paris2024 @TheHockeyIndia @16Sreejesh @asia_hockey pic.twitter.com/4PyuugIQxh
— International Hockey Federation (@FIH_Hockey) August 15, 2024
ತೆರೆದ ಕಾರಿನಲ್ಲಿ ರೋಡ್ ಶೋ: ಬಳಿಕ ವಿಮಾನ ನಿಲ್ದಾಣದಿಂದ ಶ್ರೀಜೇಶ್ ಅವರನ್ನು ತೆರೆದ ಕಾರಿನಲ್ಲಿ ಕುನ್ನತುನಾಡಿಯಲ್ಲಿನ ತಮ್ಮ ಮನೆಯವರೆಗೆ ರೋಡ್ ಶೋ ಮೂಲಕ ಕರೆತರಲಾಯಿತು. ದಾರಿಯುದ್ದಕ್ಕೂ ನೆರೆದಿದ್ದ ಜನರು ಹೂ ಮಳೆಗೈದರು. ನಂತರ ಆಲುವಾ ಯುಸಿ ಕಾಲೇಜಿನಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಶ್ರೀಜೇಶ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. 36ರ ಹರೆಯದ ಅಥ್ಲೀಟ್, ಆತ್ಮಸ್ಥೈರ್ಯದಿಂದ ಮುನ್ನಡೆಯುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇತ್ತೀಚೆಗೆ ಹಾಕಿ ಇಂಡಿಯಾ ದೆಹಲಿಯಲ್ಲಿ ಶ್ರೀಜೇಶ್ ಅವರನ್ನು ಸನ್ಮಾನಿಸಿತ್ತು. ಟೋಕಿಯೊ ಒಲಿಂಪಿಕ್ಸ್ ಪ್ರದರ್ಶನದಂತೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಭಾರತ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಶ್ರೀಜೇಶ್ ಪ್ರಮುಖ ಪಾತ್ರ ವಹಿಸಿದ್ದರು. ಬಲಿಷ್ಠ ಎದುರಾಳಿಗಳ ವಿರುದ್ಧ ಅವರ ದೃಢವಾದ ಗೋಲ್ ರಕ್ಷಣೆ ಗೆಲುವಿನಲ್ಲಿ ನಿರ್ಣಾಯಕವಾಗಿತ್ತು.
ಒಲಿಂಪಿಕ್ಸ್ ನಂತರ ಅಂತಾರಾಷ್ಟ್ರೀಯ ಹಾಕಿಯಿಂದ ನಿವೃತ್ತರಾದ ಶ್ರೀಜೇಶ್ ಗೌರವಾರ್ಥವಾಗಿ ಅವರ ಜರ್ಸಿ ಸಂಖ್ಯೆ 16ಯನ್ನು ನಿವೃತ್ತಿಗೊಳಿಸುವುದಾಗಿ ಹಾಕಿ ಇಂಡಿಯಾ ಘೋಷಿಸಿದೆ. ಅಂತಾರಾಷ್ಟ್ರೀಯ ಹಾಕಿಯಿಂದ ನಿವೃತ್ತಿ ಹೊಂದಿದ್ದರೂ, ಶ್ರೀಜೇಶ್ ಆಟಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸಲಿದ್ದಾರೆ. ಜೂನಿಯರ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ತಿಳಿಸಿದ್ದಾರೆ.
ಶ್ರೀಜೇಶ್ ಪ್ರಸ್ತುತ ತಿರುವನಂತಪುರಂನಲ್ಲಿರುವ ಕೇರಳದ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ನಿ ಅನಿಶ್ಯಾ ಆಯುರ್ವೇದ ವೈದ್ಯೆಯಾಗಿದ್ದಾರೆ.