ಲಂಡನ್: ಕಳೆದ ಭಾನುವಾರವಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಕ್ತಾಯಗೊಂಡಿದೆ. ಎರಡೂವರೆ ತಿಂಗಳು ನಡೆದ ಮೆಗಾ ಟೂರ್ನಿಯಲ್ಲಿ 10 ತಂಡಗಳು ಕಪ್ ಗೆಲ್ಲಲು ಪರಸ್ಪರ ಸೆಣಸಾಡಿದ್ದವು. ಅಂತಿಮವಾಗಿ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಕೇಕೆ ಹಾಕಿತು. ಈ ಮೂಲಕ 17ನೇ ಆವೃತ್ತಿಗೆ ಅಧಿಕೃತ ತೆರೆಬಿತ್ತು. ಐಪಿಎಲ್ ಮುಗಿಯುತ್ತಿದ್ದಂತೆ ಇದೀಗ ಎಲ್ಲರ ಗಮನ ಟಿ20 ವಿಶ್ವಕಪ್‌ನತ್ತ ನೆಟ್ಟಿದೆ.
ಜೂನ್ 2ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ಗೆ ವೆಸ್ಟ್ ಇಂಡಿಸ್ ಮತ್ತು ಯುಎಸ್ಎ ದೇಶಗಳು ಆತಿಥ್ಯವಹಿಸುತ್ತಿವೆ. ಮೆಗಾ ಟೂರ್ನಿಗಾಗಿ ಭಾರತ ಕ್ರಿಕೆಟ್ ತಂಡ ಈಗಾಗಲೇ ಅಮೆರಿಕ ತಲುಪಿದ್ದು, ಅಭ್ಯಾಸದಲ್ಲಿ ತೊಡಗಿದೆ. ಜೂ.5ರಿಂದ ಐರ್ಲೆಂಡ್ ವಿರುದ್ದದ ಪಂದ್ಯದೊಂದಿಗೆ ಟೀಮ್ ಇಂಡಿಯಾ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಜೂ.9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.
ಆದರೆ, ಟೂರ್ನಿ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ದೊಡ್ಡ ಹೇಳಿಕೆ ನೀಡಿದ್ದಾರೆ. ಮುಂಬರುವ ಟೂರ್ನಿಯಲ್ಲಿ ಯಾವ ತಂಡ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಸ್ಕೈ ಸ್ಪೋರ್ಟ್ಸ್ ವಾಹಿನಿ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ ಮಾರ್ಗನ್, ಟಿ20 ವಿಶ್ವಕಪ್ನಲ್ಲಿ ಭಾರತ ಬಲಿಷ್ಠವಾಗಿದೆ. ಹಾಗಾಗಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಈ ತಂಡದಲ್ಲಿರುವ ಸದಸ್ಯರು ಯಾವುದೇ ಎದುರಾಳಿ ತಂಡವನ್ನೂ ಬಗ್ಗುಬಡಿಯುವ ಬಲ ಹೊಂದಿದ್ದಾರೆ ಎಂದಿದ್ದಾರೆ.
2019ರಲ್ಲಿ ಇಯಾನ್ ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್ ಮೊದಲ ಬಾರಿಗೆ ಟಿ20 ಚಾಂಪಿಯನ್ ಆಗಿತ್ತು. 36 ವರ್ಷದ ಬ್ಯಾಟರ್ ಈ ಬ್ಯಾಟರ್ 2022ರ ಜುಲೈನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು.