ಬೆಂಗಳೂರು: ಅಪ್ರಾಪ್ತೆಯನ್ನ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಹೊಂದಿ ವಂಚಿಸಿದ ಆರೋಪ ಭಾರತೀಯ ರಾಷ್ಟ್ರೀಯ ಹಾಕಿ ತಂಡದ ಸದಸ್ಯ, ಅರ್ಜುನ ಪ್ರಶಸ್ತಿ ವಿಜೇತ ಆಟಗಾರರೊಬ್ಬರ ವಿರುದ್ಧ ಕೇಳಿ ಬಂದಿದೆ. ಹೈದರಾಬಾದ್ ಮೂಲದ ವಾಲಿಬಾಲ್ ಆಟಗಾರ್ತಿ ನೀಡಿದ ದೂರಿನನ್ವಯ ಜ್ಞಾನಭಾರತಿ ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಭಾರತೀಯ ಹಾಕಿ ತಂಡದ ಡಿಫೆಂಡರ್ ಆಗಿರುವ ವರುಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ವಿವರ: ದೂರುದಾರ ಯುವತಿ 2016-17ನೇ ಸಾಲಿನಲ್ಲಿ ನ್ಯಾಷನಲ್ ಸೆಂಟರ್ ಆಗಿ ಎಕ್ಸಿಲೆನ್ಸ್ನಿಂದ ವಾಲಿಬಾಲ್ ಕ್ರೀಡೆಯಲ್ಲಿ ಆಯ್ಕೆಯಾಗಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ದಕ್ಷಿಣ ವಿಭಾಗದ ತರಬೇತಿ ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದ ದೂರುದಾರಳಿಗೆ ಸಾಮಾಜಿಕ ಜಾಲತಾಣದ ಮೂಲಕ ಹಾಕಿ ಆಟಗಾರನ ಪರಿಚಯವಾಗಿತ್ತು. 17 ವರ್ಷದವಳಾಗಿದ್ದ ದೂರುದಾರಳನ್ನ ಪ್ರೀತಿಸುವುದಾಗಿ ನಂಬಿಸಿದ್ದ ಹಾಕಿ ಆಟಗಾರ, 'ನಿನ್ನ ಮನೆಯವರನ್ನ ಒಪ್ಪಿಸಿ ಮದುವೆಯಾಗುತ್ತೇನೆ. ಅಲ್ಲಿಯವರೆಗೂ ಪ್ರೇಮಿಗಳಾಗಿ ಇರೋಣ' ಎಂದು ನಂಬಿಸಿದ್ದರು ಎಂಬ ಆರೋಪ ದೂರಿನಲ್ಲಿ ಉಲ್ಲೇಖವಾಗಿದೆ.
ಹಾಕಿ ಆಟಗಾರ 2019ರಲ್ಲಿ ನೈಟ್ ಡಿನ್ನರ್ ನೆಪದಲ್ಲಿ ಜಯನಗರಕ್ಕೆ ನನ್ನನ್ನು ಕರೆದೊಯ್ದು ಬಲವಂತವಾಗಿ ದೈಹಿಕ ಸಂಪರ್ಕ ಬೆಳಸಿದ್ದನು ಎಂಬ ಆರೋಪವನ್ನು ದೂರಿನಲ್ಲಿ ಸಂತ್ರಸ್ತೆ ಮಾಡಿದ್ದಾರೆ. ಇದಾದ ಬಳಿಕವೂ ನಿರಂತರ ಐದು ವರ್ಷಗಳ ಕಾಲ ಮದುವೆಯಾಗುವುದಾಗಿ ನಂಬಿಸಿ ಆಗಾಗ ದೈಹಿಕ ಸಂಪರ್ಕ ಹೊಂದಿದ್ದರು. ಆದರೆ ಈಗ ಒಂದು ವರ್ಷಗಳ ಹಿಂದೆ ದೂರುದಾರಳ ತಂದೆ ಮೃತಪಟ್ಟಾಗ ಮನೆ ಬಳಿ ಬಂದು ಸಾಂತ್ವನ ಹೇಳಿ ಹೋಗಿದ್ದ ಹಾಕಿ ಆಟಗಾರ ನಂತರ ಸಂಪರ್ಕಕ್ಕೆ ಸಿಗದೇ ವಂಚಿಸುತ್ತಿದ್ದಾನೆ ಎಂದು ನೊಂದ ಯುವತಿ ಆರೋಪಿಸಿದ್ದಾರೆ. ದೂರಿನನ್ವಯ ಜ್ಞಾನ ಭಾರತಿ ಠಾಣಾ ಪೊಲೀಸರು ಸದ್ಯ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮೂಲತಃ ಹಿಮಾಚಲ ಪ್ರದೇಶದ ವರುಣ್ ಕುಮಾರ್, ಪ್ರಸ್ತುತ ಭಾರತ ಹಾಕಿ ತಂಡದ ಡಿಫೆಂಡರ್ ಆಗಿ ಗುರುತಿಸಿಕೊಂಡಿದ್ದಾರೆ. 2017ರಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದ ಅವರು, 2022ರ ಬರ್ಮಿಂಗ್ ಹ್ಯಾಂ - ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ, 2022ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಹಾಗೂ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಸಾಧನೆ ಬಳಿಕ ಇವರಿಗೆ 1 ಕೋಟಿ ಬಹುಮಾನವನ್ನ ಹಿಮಾಚಲ ಪ್ರದೇಶ ಸರ್ಕಾರ ಘೋಷಿಸಿತ್ತು. 2021ನೇ ಸಾಲಿನ ಅರ್ಜುನ ಪ್ರಶಸ್ತಿಗೂ ಇವರು ಭಾಜನರಾಗಿದ್ದರು.
ಓದಿ: 2ನೇ ಟೆಸ್ಟ್: 106 ರನ್‌ಗಳಿಂದ ಇಂಗ್ಲೆಂಡ್ ಮಣಿಸಿದ ಭಾರತ; 1-1ರಿಂದ ಸರಣಿ ಸಮ