ಬಾರ್ಬಡೋಸ್: ಭಾನುವಾರ ಇಲ್ಲಿನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಬ್ಬರಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್, ಅಮೆರಿಕವನ್ನು 10 ವಿಕೆಟ್ಗಳಿಂದ ಸೋಲಿಸಿ, ಮೊದಲ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ನಾಯಕ ಜೋಸ್ ಬಟ್ಲರ್ ಆಕ್ರಮಣಕಾರಿ ಬ್ಯಾಟಿಂಗ್ ಹಾಗೂ ವೇಗಿ ಕ್ರಿಸ್ ಜೋರ್ಡನ್ ಹ್ಯಾಟ್ರಿಕ್ ಸಾಧನೆಯಿಂದ ಆಂಗ್ಲರು ಸುಲಭದ ಜಯ ದಾಖಲಿಸಿದರು.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲ ಫೀಲ್ಡಿಂಗ್ ಮಾಡುವ ನಿರ್ಧಾರ ಕೈಗೊಂಡಿತು. ಅಮೆರಿಕ ಮೊತ್ತ 9 ರನ್ ಆಗಿದ್ದಾಗಲೇ ಮೊದಲ ವಿಕೆಟ್ ಆಗಿ ವಿಕೆಟ್ ಕೀಪರ್ ಆಂಡ್ರೀಸ್ ಗೌಸ್ (8) ಪೆವಿಲಿಯನ್ಗೆ ಮರಳಿದರು. ಬಳಿಕ ಸ್ಟೀವನ್ ಟೇಲರ್ (12) ಹಾಗೂ ನಿತೀಶ್ ಕುಮಾರ್ (30) ಎರಡನೇ ವಿಕೆಟ್ಗೆ 34 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಈ ಹಂತದಲ್ಲಿ ಕರನ್ ಬೌಲಿಂಗ್ನಲ್ಲಿ ಟೇಲರ್ ಔಟಾದರು. ತದನಂತರ ಅಮೆರಿಕ ನಿರಂತರ ವಿಕೆಟ್ ಕಳೆದುಕೊಳ್ಳುತ್ತ ಸಾಗಿತು.
ನಾಯಕ ಆರನ್ ಜೋನ್ಸ್ (10) ಮತ್ತೊಮ್ಮೆ ವಿಫಲರಾದರು. ಮಿಲಿಂದ್ ಕುಮಾರ್ ಕೇವಲ 4 ರನ್ಗೆ ವಿಕೆಟ್ ಒಪ್ಪಿಸಿದರು. ಈ ನಡುವೆ ಕೋರಿ ಆ್ಯಂಡರ್ಸನ್ 29 ಹಾಗೂ ಹರ್ಮಿತ್ ಸಿಂಗ್ 21 ರನ್ ಬಾರಿಸಿ ತಂಡಕ್ಕೆ ನೆರವಾದರು. ಕೊನೆಯ ಓವರ್ಗಳಲ್ಲಿ ದಿಢೀರ್ ವಿಕೆಟ್ಗಳನ್ನು ಕಳೆದುಕೊಂಡ ಅಮೆರಿಕ 18.5 ಓವರ್ಗಳಲ್ಲಿ ಕೇವಲ 115 ರನ್ಗೆ ಆಲೌಟ್ ಆಯಿತು. ಕ್ರಿಸ್ ಜೋರ್ಡನ್ 10ಕ್ಕೆ 4, ಸ್ಯಾಮ್ ಕರನ್ 23ಕ್ಕೆ2 ಹಾಗೂ ಆದಿಲ್ ರಶೀದ್ 13ಕ್ಕೆ 2 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ 'ಹ್ಯಾಟ್ರಿಕ್' ವಿಶ್ವದಾಖಲೆ - pat Cummins hat tricks
ಜೋರ್ಡನ್ ಹ್ಯಾಟ್ರಿಕ್: ಮಾರ್ಕ್ ವುಡ್ ಬದಲಿಗೆ ಪುನರಾಗಮನ ಮಾಡಿದ ಜೋರ್ಡನ್ (4/10) 19ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸೇರಿದಂತೆ 5 ಎಸೆತಗಳಲ್ಲಿ 4 ವಿಕೆಟ್ ಪಡೆದು ಮಿಂಚಿದರು. ಓವರ್ನ ಮೊದಲ ಬಾಲ್ಗೆ ಕೋರಿ ಆ್ಯಂಡರ್ಸನ್ ಅವರನ್ನು ಔಟ್ ಮಾಡಿದರೆ, 3, 4 ಹಾಗೂ 5ನೇ ಎಸೆತಗಳಲ್ಲಿ ಕ್ರಮವಾಗಿ ಅಲಿ ಖಾನ್, ನೊಸ್ತುಶ್ ಕೆಂಜಿಗೆ ಮತ್ತು ಸೌರಭ್ ನೇತ್ರವಲ್ಕರ್ ವಿಕೆಟ್ ಕಬಳಿಸಿ ಅಮೆರಿಕಕ್ಕೆ ಆಘಾತ ನೀಡಿದರು. ಇದು ಈ ವಿಶ್ವಕಪ್‌ನಲ್ಲಿ ಮೂಡಿಬಂದ ಮೂರನೇ ಹ್ಯಾಟ್ರಿಕ್ ಆಗಿದೆ. ಇದಕ್ಕೂ ಮುನ್ನ ಟೂರ್ನಿಯಲ್ಲಿ ಎರಡು ಸಲ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಈ ಸಾಧನೆ ಮಾಡಿದ್ದಾರೆ.
ಇಂಗ್ಲೆಂಡ್ ಸಿಡಿಲಬ್ಬರದ ಚೇಸಿಂಗ್: 116 ರನ್ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 9.4 ಓವರ್ಗಳಲ್ಲೇ ಗುರಿ ತಲುಪಿತು. ಅಮೆರಿಕ ಬೌಲಿಂಗ್ನ್ನು ಚೆಂಡಾಡಿದ ನಾಯಕ ಜೋಸ್ ಬಟ್ಲರ್ 38 ಎಸೆತಗಳಲ್ಲಿ ಅಜೇಯ 83 ರನ್ ಚಚ್ಚಿದರು. ಇನ್ನೊಂದೆಡೆ, ಫಿಲಿಪ್ ಸಾಲ್ಟ್ 25* ರನ್ ಬಾರಿಸಿದರು. ಭಾರಿ ಅಂತರದ ಗೆಲುವಿನೊಂದಿಗೆ ರನ್ರೇಟ್ನಲ್ಲಿ (+1.992) ಭರ್ಜರಿ ಏರಿಕೆ ಕಂಡ ಆಂಗ್ಲರು, ಗ್ರೂಪ್ 2ರಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ತಲುಪಿದ್ದಾರೆ. ಇನ್ನೊಂದು ಸ್ಥಾನಕ್ಕಾಗಿ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವೆ ಪೈಪೋಟಿ ಇದೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸರಣಿ ಕ್ಲೀನ್ಸ್ವೀಪ್: ಇದು 'ಸ್ಮೃತಿ'ಯಲ್ಲಿ ಉಳಿಯುವ ಟೂರ್ನಿ - INDW vs SAW match