ಹೈದರಾಬಾದ್: ವಿಶ್ವದ ಜನಪ್ರಿಯ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದಾಗಿದೆ. 16ನೇ ಶತಮಾನದಲ್ಲಿ ಇಂಗ್ಲೆಂಡ್ನಲ್ಲಿ ಹುಟ್ಟಿಕೊಂಡ ಇದು ಇಂದು ವಿಶ್ವದ ಎರಡನೇ ಜನಪ್ರಿಯ ಕ್ರೀಡೆಯಾಗಿದೆ. ಅದರಲ್ಲೂ ಭಾರತ ಅತೀ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ದೇಶದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಾಗಿರದೇ ಒಂದು ಧರ್ಮವಾಗಿ ಬೆಳೆದು ನಿಂತಿದೆ.
ಇದಕ್ಕೆ ಕಾರಣ ಹಿಂದೆ ದಿಗ್ಗಜರು ನೀಡಿರುವ ಕೊಡುಗೆಗಳು. ಅಂತಹ ದಿಗ್ಗಜರ ಪಟ್ಟಿಯಲ್ಲಿ ಬುಚ್ಚಿ ಬಾಬು ಕೂಡ ಒಬ್ಬರಾಗಿದ್ದಾರೆ. ಹೌದು, ದಕ್ಷಿಣ ಭಾರತದ ಕ್ರಿಕೆಟ್ ಪಿತಾಮಹ ಎಂದು ಕರೆಯಲ್ಪಡುವ ಬುಚ್ಚಿ ಬಾಬು ಅವರು ಸ್ವಾತಂತ್ರ್ಯ ಪೂರ್ವದಲ್ಲಿ ದಕ್ಷಿಣ ಭಾರತ ಭಾಗದಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸಲು ಶ್ರಮ ವಹಿಸಿದ್ದರು. ಅವರ ಅಂದಿನ ಶ್ರಮದ ಫಲವಾಗಿ ಇಂದು ದಕ್ಷಿಣ ಭಾರತದಲ್ಲಿ ಕ್ರಿಕೆಟ್ ಹೆಮ್ಮರವಾಗಿ ಬೆಳೆದು ನಿಂತಿದೆ. ಹಾಗಾದ್ರೆ ಯಾರು ಈ ಬುಚ್ಚಿ ಬಾಬು, ಏತಕ್ಕೆ ಇವರ ಹೆಸರಲ್ಲಿ ಟೂರ್ನಮೆಂಟ್ ಆಯೋಜಿಸಲಾಗುತ್ತದೆ ಎಂಬುದನ್ನು ಈ ಸುದ್ದಿಯಲ್ಲಿ ತಿಳಿಯಿರಿ.
ಯಾರು ಈ ಬುಚ್ಚಿಬಾಬು: ಬುಚ್ಚಿ ಬಾಬು ನಾಯ್ಡು ಎಂದೂ ಕರೆಯಲ್ಪಡುವ ಮೋತವರಪು ವೆಂಕಟ ಮಹಿಪತಿ ನಾಯ್ಡು, ದಕ್ಷಿಣ ಭಾರತದಲ್ಲಿ ಕ್ರಿಕೆಟ್ ಅಭಿವೃದ್ಧಿ ಹೊಂದಲು ಪ್ರಮುಖ ಪಾತ್ರ ವಹಿಸಿದ್ದಾರೆ. ಕ್ರಿಕೆಟ್ ಪ್ರವರ್ತಕರಾಗಿದ್ದ ಇವರು ಮದ್ರಾಸ್ ಪ್ರೆಸಿಡೆನ್ಸಿ ಆರಂಭಿಸಿ ಆಂಗ್ಲರ ವಿರುದ್ಧ ಸ್ಪರ್ಧಿಸಲೆಂದು ಸ್ಥಳೀಯ ಆಟಗಾರರಿಗೆ ವೇದಿಕೆ ಕಲ್ಲಿಸಿದರು. ಅವರ ಈ ಯೋಜನೆ ಯಶಸ್ವಿಕೂಡ ಆಯಿತು. ಬಳಿಕ 1908ರಲ್ಲಿ ಮೊದಲ ಬಾರಿಗೆ ಸ್ಥಳೀಯ ಪ್ರತಿಭೆಗಳನ್ನೊಳಗೊಂಡಂತೆ ಟೂರ್ನಮೆಂಟ್ ಅನ್ನು ಆಯೋಜಿಸಲಾಯಿತು. ಆದರೇ ದುರಾದೃಷ್ಟವಶಾತ್ ಈ ಟೂರ್ನಮೆಂಟ್ಗೂ ಮುನ್ನವೇ ಬುಚ್ಚಿ ಬಾಬು ಅವರು ನಿಧನ ಹೊಂದಿದರು.
ಬಳಿಕ ಅವರ ಗೌರವಾರ್ಥವಾಗಿ 1909ರಲ್ಲಿ ಬುಚ್ಚಿ ಬಾಬು ಟೂರ್ನಮೆಂಟ್ ಆಯೋಜಿಸಲಾಯಿತು. 1934ರಲ್ಲಿ ರಣಜಿ ಟ್ರೋಫಿ ಆರಂಭಕ್ಕೂ ಮುನ್ನ ಬುಚ್ಚಿ ಬಾಬು ಟ್ರೋಫಿ ಭಾರತದ ಪ್ರತಿಷ್ಠಿತ ಪಂದ್ಯಾವಳಿಯಾಗಿತ್ತು. ಆರಂಭದಲ್ಲಿ ಸ್ಥಳೀಯ ಕ್ಲಬ್ ಈವೆಂಟ್ ಆಗಿ ನಡೆಯುತ್ತಿದ್ದ ಇದು ನಂತರ ವಿಕಸನಗೊಂಡು 1960ರ ದಶಕದಲ್ಲಿ ಆಹ್ವಾನಿತ ಸ್ಪರ್ಧೆಯಾಗಿ, ಭಾರತೀಯ ಕ್ರಿಕೆಟ್‌ನಲ್ಲಿ ತನ್ನ ಸ್ಥಾನಮಾನವನ್ನು ಗಟ್ಟಿಗೊಳಿಸಿತು. ಅಂದಿನಿಂದ ಇಂದಿನವರೆಗೂ ಈ ಟೂರ್ನಮೆಂಟ್ ಚಾಲ್ತಿಯಲ್ಲಿದೆ.
ಬಳಿಕ 2016ರಲ್ಲಿ ತಮಿಳುನಾಡು ಪ್ರೀಮಿಯರ್ ಲೀಗ್ ಆರಂಭಗೊಂಡ ಕಾರಣ ಬುಚ್ಚಿ ಬಾಬು ಟೂರ್ನಮೆಂಟ್ ನಡೆಸುವುದು ಕಷ್ಟವಾಗತೊಡಗಿತು. ಕಾರಣ ಜೂನ್ ನಿಂದ ಆಗಸ್ಟ್ ವರೆಗೂ ಈ ಟೂರ್ನಮೆಂಟ್ ನಡೆಸಲಾಗುತ್ತದೆ. ಮತ್ತೊಂದೆಡೆ ಬುಚ್ಚಿ ಬಾಬು ಟೂರ್ನಮೆಂಟ್ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ನಡೆಯುವ ಕಾರಣ ಎರಡೂ ಒಟ್ಟಿಗೆ ನಡೆಸುವುದು ಅಸಾಧ್ಯವಾಯಿತು. 2017ರಿಂದ ಬುಚ್ಚಿ ಬಾಬು ಟೂರ್ನಮೆಂಟ್ಗೆ ಬ್ರೇಕ್ ಹಾಕಲಾಯಿತು.
ಇದೀಗ 2024ರಲ್ಲಿ ಮತ್ತೆ ಆಯೋಜಿಸಲಾಗಿದೆ. ಸದ್ಯ ಬುಚ್ಚಿ ಬಾಬು ಟೂರ್ನಮೆಂಟ್ನಲ್ಲಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ಗಳಾದ ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಶ್ರೇಯಸ್ ಐಯ್ಯರ್ ಇದರಲ್ಲಿ ಭಾಗವಹಿಸಿದ್ದಾರೆ. ಆ.15 ರಿಂದ ಆರಂಭಗೊಂಡಿರುವ ಈ ಟೂರ್ನಮೆಂಟ್ ಆ.30ಕ್ಕೆ ಕೊನೆಗೊಳ್ಳಲಿದೆ.
ಇದನ್ನೂ ಓದಿ: ಲಕ್ನೋ ಸೂಪರ್ ಜೈಂಟ್ಸ್ ಮಾಲೀಕನ ಭೇಟಿಯಾದ ಕೆ.ಎಲ್ ರಾಹುಲ್: ಇಬ್ಬರ ನಡುವಿನ ಮಾತುಕತೆ ಬಹಿರಂಗ! - KL Rahul