ನವದೆಹಲಿ: ಐಪಿಎಲ್ನ 43ನೇ ಪಂದ್ಯದಲ್ಲಿಂದು ಡೆಲ್ಲಿ ಕ್ಯಾಪಿಟಲ್ಸ್ ಎದುರು ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ. ಪಂತ್ ಪಡೆ ನೀಡಿದ್ದ 258 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಗೆಲುವಿಗಾಗಿ ಕೊನೆ ಓವರ್ವರೆಗೂ ಹೋರಾಟ ನಡೆಸಿ ಅಂತಿಮವಾಗಿ 10ರನ್ಗಳಿಂದ ಸೋಲನುಭವಿಸಿದೆ.
ತಂಡದ ಪರ ತಿಲಕ್ ವರ್ಮಾ 32 ಎಸೆತಗಳಲ್ಲಿ 63 ರನ್ ಕಲೆಹಾಕಿ ಅತ್ಯಧಿಕ ಇನ್ನಿಂಗ್ಸ್ ಆಡಿದರು. ನಾಯಕ ಹಾರ್ದಿಕ್ ಪಾಂಡ್ಯ 24 ಎಸೆತಗಳಲ್ಲಿ 46 ರನ್ ಮತ್ತು ಟಿಮ್ ಡೇವಿಡ್ 17 ಎಸೆತಗಳಲ್ಲಿ 37 ರನ್ ಗಳಿಸಿದರು. ಆದರೆ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಬೌಲಿಂಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಮುಕೇಶ್ ಕುಮಾರ್ ಮತ್ತು ರಸಿಕ್ ಸಲಾಂ ತಲಾ 3 ವಿಕೆಟ್ ಪಡೆದರೇ, ಖಲೀಲ್ ಅಹ್ಮದ್ 2 ವಿಕೆಟ ಉರುಳಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 257ರನ್ಗಳನ್ನು ಕಲೆ ಹಾಕಿತ್ತು. ದೆಹಲಿ ಪರ ಅಬ್ಬರ ಆಟ ಪ್ರದರ್ಶಿಸಿದ ಜೇಕ್ ಫ್ರೇಸರ್-ಮೆಕ್‌ಗುರ್ಕ್ (84), ಅಭಿಷೇಕ್ ಪೊರೆಲ್ (36), ಶಾಯ್ ಹೋಪ್ (41), ಟ್ರಿಸ್ಟಾನ್ ಸ್ಟಬ್ಸ್ (48*), ರಿಷಭ್ ಪಂತ್ (29) ಬಿರುಸಿನ ಬ್ಯಾಟಿಂಗ್ ನೆರವಿನಿಂದ ತಂಡ ಬೃಹತ್ ಮೊತ್ತವನ್ನು ಪೇರಿಸಿತು. ಮುಂಬೈ ಪರ ಮೊಹಮ್ಮದ್ ನಬಿ, ಪಿಯೂಷ್ ಚಾವ್ಲಾ, ಲ್ಯೂಕ್ ವುಡ್, ಜಸ್ಪ್ರೀತ್ ಬುಮ್ರಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಪ್ಲೇ ಆಫ್ ರೇಸ್ನಲ್ಲಿ ಡೆಲ್ಲಿ: ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಡೆಲ್ಲಿ ತಂಡ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇದುವರೆಗೆ 10 ಪಂದ್ಯಗಳನ್ನು ಆಡಿ 5ರಲ್ಲಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಡೆಲ್ಲಿ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿ ಚೆನ್ನೈ ತಂಡವನ್ನು ಹಿಂದಿಕ್ಕಿದೆ.
ಮುಂಬೈ ಪ್ಲೇ ಆಫ್ ಹಾದಿ ಕಷ್ಟ: ಮತ್ತೊಂದೆಡೆ ಮುಂಬೈ ತಂಡ ಸತತ ಸೋಲಿನಿಂದ 9ನೇ ಸ್ಥಾನಕ್ಕೆ ತಲುಪಿದೆ. ಆಡಿರುವ 9 ಪಂದ್ಯಗಳಲ್ಲಿ ಕೇವಲ 3ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇಂದಿನ ತಂಡದ ಸೋಲು ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಕಷ್ಟಕರಗೊಳಿಸಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು ಮುಂಬೈ ತನ್ನ ಉಳಿದ 5 ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕಾಗಿದೆ.
ಇದನ್ನೂ ಓದಿ: ಆರ್ಚರಿ ವಿಶ್ವಕಪ್: ಕಾಂಪೌಂಡ್ ಮಿಶ್ರ ತಂಡದಲ್ಲಿ ಮಹಿಳೆಯರು ಶೈನಿಂಗ್, ಭಾರತಕ್ಕೆ ಒಲಿದ ಮೂರು ಚಿನ್ನ - Archery World Cup