ನವದೆಹಲಿ: ಗೆಲ್ಲಬೇಕೆಂಬ ಛಲ ಮತ್ತು ಸಾಂಘಿಕ ಹೋರಾಟ ತಂಡವನ್ನು ಗೆದ್ದೇ ಗೆಲ್ಲಿಸುತ್ತದೆ ಎಂಬುದಕ್ಕೆ ಶುಕ್ರವಾರ ರಾತ್ರಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಸಾಕ್ಷಿಯಾಯಿತು. ಕೊನೆಯ ಎಸೆತದವರೆಗೂ ಭಾರೀ ರೋಚಕತೆ ಕಾಪಾಡಿಕೊಂಡಿದ್ದ ಪಂದ್ಯವನ್ನು ಯುಪಿ ಮಹಿಳೆಯರು 1 ರನ್ನಿಂದ ಜಯಿಸಿದರು. ಇದಕ್ಕೆ ಪ್ರಮುಖ ಕಾರಣವಾಗಿದ್ದು ದೀಪ್ತಿ ಶರ್ಮಾ ಅವರ ಆಲ್ರೌಂಡ್ ಆಟ.
ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಡೆಲ್ಲಿ ಗೆಲುವಿನ ದಡದಲ್ಲಿದ್ದರೂ, ದಿಢೀರ್ ಕುಸಿದು ಅಚ್ಚರಿಯ ಸೋಲು ಅನುಭವಿಸಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡಕ್ಕೆ ಇದು ನಾಲ್ಕನೇ ಸೋಲಾಗಿದೆ. ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯವನ್ನು ಕೈಚೆಲ್ಲುವ ಮೂಲಕ ನಿರಾಸೆ ಅನುಭವಿಸಿತು. ಯುಪಿ ತಂಡ ನಾಲ್ಕನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಫಲಿತಾಂಶದ ಮೇಲೆ ಸೆಮಿಫೈನಲ್ ತಲುಪುವ ಲೆಕ್ಕಾಚಾರ ಸಾಗಿದೆ.
15 ರನ್ಗೆ 6 ವಿಕೆಟ್: ಇದು ಯಾವುದೋ ಬೌಲರ್ನ ಅದ್ಭುತ ಪ್ರದರ್ಶನವಲ್ಲ. ಡಬ್ಲ್ಯೂಪಿಎಲ್ನ ಬಲಿಷ್ಠ ತಂಡವಾದ ಡೆಲ್ಲಿ ಕೊನೆ ಗಳಿಗೆಯಲ್ಲಿ ಸರ್ವಪತನ ಕಂಡ ರೀತಿ. ಗೆಲುವಿಗೆ 139 ರನ್ ಗುರಿ ಪಡೆದ ತಂಡವನ್ನು ಗೆಲ್ಲಿಸಲು ನಾಯಕಿ ಮೆಗ್ ಲ್ಯಾನಿಂಗ್ ಏಕಾಂಗಿಯಾಗಿ ಹೋರಾಡಿದರು. ಉಳಿದ ಬ್ಯಾಟರ್ಗಳು ಕೈಕೊಟ್ಟ ಕಾರಣ ಫಲಿತಾಂಶ ತಲೆಕೆಳಗಾಯಿತು. ಮೆಗ್ ಭರ್ಜರಿ ಬ್ಯಾಟ್ ಬೀಸಿ 46 ಎಸೆತಗಳಲ್ಲಿ 60 ರನ್ ಗಳಿಸಿದರು. ಇದರಲ್ಲಿ 12 ಬೌಂಡರಿಗಳಿದ್ದವು.
ತಂಡ 93 ರನ್ ಗಳಿಸಿದ್ದಾಗ ನಾಯಕಿ ಔಟಾದರು. ಬಳಿಕ ಜೆಮಿಮಾ ರೋಡ್ರಿಗಸ್ 17, ಅನ್ನಾಬೆಲ್ ಸುದರ್ಲೆಂಡ್ 6, ಜೆಸ್ ಜೊನಾಸ್ಸನ್ 11, ಅರುಂಧತಿ ರೆಡ್ಡಿ ಸೊನ್ನೆಗೆ ಔಟಾದರು. ಇದಕ್ಕೂ ಮೊದಲು ಡ್ಯಾಶಿಂಗ್ ಬ್ಯಾಟರ್ ಶೆಫಾಲಿ ವರ್ಮಾ 15, ಅಲಿಸಿ ಕ್ಯಾಪ್ಸಿ ತಲಾ 15 ರನ್ಗೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ತಂಡ ಸಂಕಷ್ಟಕ್ಕೆ ಸಿಲುಕಿತು. ಒಂದು ಹಂತದಲ್ಲಿ 124ಕ್ಕೆ 4 ವಿಕೆಟ್ ಕಳೆದುಕೊಂಡು ಗೆಲುವಿನ ಹೊಸ್ತಿಲಲ್ಲಿತ್ತು.
ದೀಪ್ತಿ ಶರ್ಮಾ ಹ್ಯಾಟ್ರಿಕ್: ಭಾರತದ ಸ್ಟಾರ್ ಆಲ್ರೌಂಡರ್ ದೀಪ್ತಿ ಶರ್ಮಾ ನೀಡಿದ ಗುದ್ದಿಗೆ ಡೆಲ್ಲಿ ಮಕಾಡೆ ಮಲಗಿತು. 19ನೇ ಓವರ್ ಬೌಲ್ ಮಾಡಿ ದೀಪ್ತಿ ಶರ್ಮಾ ಮೊದಲೆರಡು ಎಸೆತಗಳಲ್ಲಿ ಸತತ 2 ವಿಕೆಟ್ ಕಿತ್ತರು. 14ನೇ ಓವರ್ನ ಕೊನೆಯ ಎಸೆತದಲ್ಲಿ ಸುದರ್ಲೆಂಡ್ ಔಟ್ ಮಾಡಿದ್ದು ಸೇರಿ ಸತತ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದರು. ಬಳಿಕ ನಾಲ್ಕನೇ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದು ಡೆಲ್ಲಿ ತಂಡವನ್ನು ಭಾರೀ ಸಂಕಷ್ಟಕ್ಕೆ ಸಿಲುಕಿಸಿದರು.
ಕೊನೆಯ ಓವರ್ನಲ್ಲಿ ಗೆಲುವಿಗೆ 10 ರನ್ ಬೇಕಿತ್ತು. ಗ್ರೇಸ್ ಹ್ಯಾರೀಸ್ ಎಸೆದ ಓವರ್ನ ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸಿದ ರಾಧಾ ಯಾದವ್ ಗೆಲುವಿನ ನಗೆ ಉಕ್ಕಿಸಿದರು. ನಂತರ 2 ರನ್ ಪಡೆದರು. ಮೂರನೇ ಎಸೆತದಲ್ಲಿ ರಾಧಾ ಕ್ಲೀನ್ಬೌಲ್ಡ್ ಆದರು. ಆಗ 4 ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ ಒಂಟಿ ರನ್ಗಾಗಿ ಓಡಿದ ತಾನಿಯಾ ಬಾಟಿಯಾ ರನೌಟ್ ಆದರು. ಗೆಲುವಿನ ಹೊಡೆತಕ್ಕೆ ಮುಂದಾದ ತಿತಾಸ್ ಸಧು ಐದನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಇದರಿಂದ ತಂಡ 1 ರನ್ನಿಂದ ರೋಚಕವಾಗಿ ಸೋತು ತೀವ್ರ ನಿರಾಸೆ ಅನುಭವಿಸಿತು. ಕೊನೆಯವರೆಗೂ ಹೋರಾಡಿದ ಯುಪಿ ಮಹಿಳೆಯರು ಭರ್ಜರಿ ಸಂಭ್ರಮಾಚರಣೆ ಮಾಡಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ದೀಪ್ತಿ ಶರ್ಮಾರ (59) ಅರ್ಧಶತಕ, ನಾಯಕಿ ಅಲಿಸ್ಸಿ ಹೀಲಿ (29) ಬ್ಯಾಟಿಂಗ್ ನೆರವಿನಿಂದ 8 ವಿಕೆಟ್ಗೆ 138 ರನ್ ಗಳಿಸಿತ್ತು.
ಇದನ್ನು ಓದಿ:WPL: ಯುಪಿ ವಾರಿಯರ್ಸ್ ಮಣಿಸಿ ಮತ್ತೆ ಗೆಲುವಿನ ಹಳಿಗೆ ಮರಳಿದ ಮುಂಬೈ ಇಂಡಿಯನ್ಸ್