ಚೆನ್ನೈ: ಐಪಿಎಲ್ನ 61ನೇ ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಐದು ವಿಕೆಟ್‌ಗಳ ಗೆಲುವು ಸಾಧಿಸಿದೆ.
ಚೆನ್ನೈನ ಎಂ. ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನೀಡಿದ್ದ 142 ರನ್‌ಗಳ ಗುರಿಯನ್ನು ಬೆನ್ನತ್ತಿದ ಸಿಎಸ್‌ಕೆ 18.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಪ್ರಸಕ್ತ ಋತುವಿನಲ್ಲಿ ಸಿಎಸ್‌ಕೆಗೆ ಇದು ಏಳನೇ ಜಯವಾಗಿದ್ದು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ಮತ್ತೊಂದೆಡೆ ರಾಜಸ್ಥಾನ ನಾಲ್ಕನೇ ಸೋಲನುಭವಿಸಿದೆ.
ಚೆನ್ನೈ ಪರ ನಾಯಕ ರುತುರಾಜ್ ಗಾಯಕ್ವಾಡ್ 41 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಮೇತ ಅಜೇಯವಾಗಿ 42 ರನ್ ಗಳಿಸಿದರು. ನಿಧಾನಗತಿಯ ಪಿಚ್ನಲ್ಲಿ ಕೊನೆಯವರೆಗೂ ನಿಂತು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಉಳಿದಂತೆ ಆರಂಭಿಕರಾದ ರಚಿನ್ ರವೀಂದ್ರ 18 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ನೆರವಿನಿಂದ 27 ರನ್ ಗಳಿಸಿದರು. ರಾಜಸ್ಥಾನ ಪರ ಆರ್.ಅಶ್ವಿನ್ ಎರಡು ವಿಕೆಟ್ ಪಡೆದರೇ, ಯುಜ್ವೇಂದ್ರ ಚಹಾಲ್ ಮತ್ತು ನಾಂದ್ರೆ ಬರ್ಗರ್ ತಲಾ 1 ವಿಕೆಟ್ ಉರುಳಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್‌ಗಳಲ್ಲಿ 141 ರನ್ ಗಳಿಸುವ ಮೂಲಕ ಸಾಧಾರಣ ಮೊತ್ತ ಕಲೆಹಾಕಿತು. ತಂಡದ ಪರ ರಿಯಾನ್ ಪರಾಗ್ ಅಜೇಯವಾಗಿ 47 ರನ್ ಗಳಿಸಿ ಹೈಸ್ಕೋರರ್ ಎನಿಸಿಕೊಂಡರು. ಇವರ ಹೊರತುಪಡಿಸಿ ಧ್ರುವ್ ಜುರೆಲ್ 18 ಎಸೆತಗಳಲ್ಲಿ 28 ರನ್, ಯಶಸ್ವಿ ಜೈಸ್ವಾಲ್ (24), ಜೋಸ್ ಬಟ್ಲರ್ (21) ರನ್ ಕೊಡುಗೆ ನೀಡಿದರು. ಸಿಎಸ್‌ಕೆ ಪರ ಸಿಮರ್‌ಜೀತ್ ಸಿಂಗ್ ಮೂರು ವಿಕೆಟ್ ಪಡೆದರೇ, ತುಷಾರ್ ದೇಶಪಾಂಡೆ ಎರಡು ವಿಕೆಟ್ ಉರುಳಿಸಿದರು.
ಹೆಡ್ ಟು ಹೆಡ್: ಉಭಯ ತಂಡಗಳ ಹೆಡ್ ಟು ಹೆಡ್ ದಾಖಲೆಯ ಕುರಿತು ಹೇಳುವುದಾದರೆ, CSK ಮತ್ತು RR ಐಪಿಎಲ್‌ನಲ್ಲಿ ಒಟ್ಟು 28 ಬಾರಿ ಮುಖಾಮುಖಿಯಾಗಿವೆ. ಚೆನ್ನೈ 15 ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ 13ರಲ್ಲಿ ಗೆಲುವು ಸಾಧಿಸಿದೆ.