ದುಬೈ: ವಿಶೇಷ ಬೌಲಿಂಗ್ ಶೈಲಿಯ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬುಧವಾರ ಬಿಡುಗಡೆ ಮಾಡಿರುವ ಟೆಸ್ಟ್ ಶ್ರೇಯಾಂಕದಲ್ಲಿ ಬುಮ್ರಾ ಮೊದಲ ಸ್ಥಾನ ಪಡೆದಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್ ಎಂಬ ಕೀರ್ತಿಯೂ ಅವರ ಪಾಲಾಗಿದೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಬುಮ್ರಾ, ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಸಂಪಾದಿಸಿದರು. ಇದರ ಜೊತೆಗೆ ನಂಬರ್ 1 ಸ್ಥಾನ ಪಡೆದ ಭಾರತದ ನಾಲ್ಕನೇ ಬೌಲರ್ ಎಂಬ ಹಿರಿಮೆಗೂ ಪಾತ್ರರಾದರು. ಇದಕ್ಕೂ ಮೊದಲು ಈ ಸ್ಥಾನ ಪಡೆದಿದ್ದ ಆರ್.ಅಶ್ವಿನ್, ರವೀಂದ್ರ ಜಡೇಜಾ, ಬಿಷನ್ ಸಿಂಗ್ ಬೇಡಿ ಅವರ ಕ್ಲಬ್ ಸೇರಿದರು.
ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ 2ನೇ ಟೆಸ್ಟ್ಗೂ ಮುನ್ನ ನಾಲ್ಕನೇ ಸ್ಥಾನದಲ್ಲಿದ್ದ ಬುಮ್ರಾ, ಪಂದ್ಯದಲ್ಲಿ ಒಂಬತ್ತು ವಿಕೆಟ್ ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದ್ದ ಭಾರತದವರೇ ಆದ ರವಿಚಂದ್ರನ್ ಅಶ್ವಿನ್ರನ್ನು ಕೆಳಗಿಳಿಸಿದರು. ಪ್ಯಾಟ್ ಕಮ್ಮಿನ್ಸ್, ಕಗಿಸೊ ರಬಾಡರನ್ನೂ ಕೂಡ ಹಿಂದಿಕ್ಕಿದರು. 2 ಸ್ಥಾನ ಖೋತಾ ಕಂಡಿರುವ ಅಶ್ವಿನ್ ಮೂರನೇ ಸ್ಥಾನಕ್ಕೆ ಕುಸಿದರು.
ಅಶ್ವಿನ್ 11 ತಿಂಗಳ ಅಧಿಪತ್ಯ ಕೊನೆ: 2ನೇ ಟೆಸ್ಟ್‌ನಲ್ಲಿ 106 ರನ್‌ಗಳ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ ಸಮಬಲ ಸಾಧಿಸಲು ನೆರವಾದ ಬುಮ್ರಾ, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಅಶ್ವಿನ್ ಅವರ 11 ತಿಂಗಳ ನಂಬರ್ 1 ಸ್ಥಾನವನ್ನು ಕಿತ್ತುಕೊಂಡರು. 499 ಟೆಸ್ಟ್ ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಬುಮ್ರಾ 881 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದರೆ, ಅಶ್ವಿನ್ 904 ಮತ್ತು ಜಡೇಜಾ 899 ರೇಟಿಂಗ್ನೊಂದಿಗೆ 9ನೇ ಸ್ಥಾನ ಪಡೆದು ಟಾಪ್ 10ರಲ್ಲಿರುವ ಭಾರತೀಯ ಬೌಲರ್ಗಳಾಗಿದ್ದಾರೆ. ಅಶ್ವಿನ್ ಮತ್ತು ಜಡೇಜಾ ಅವರು 2017 ರ ಮಾರ್ಚ್ನಲ್ಲಿ ಜಂಟಿಯಾಗಿ ಅಗ್ರಸ್ಥಾನ ಪಡೆದಿದ್ದರು.
ಬ್ಯಾಟಿಂಗ್, ತಂಡ ವಿಭಾಗ: ಬ್ಯಾಟಿಂಗ್ ವಿಭಾಗದ ಶ್ರೇಯಾಂಕದಲ್ಲಿ ದ್ವಿಶತಕ ವೀರ ಯಶಸ್ವಿ ಜೈಸ್ವಾಲ್ 37 ಸ್ಥಾನ ಮೇಲೇರಿ 29ನೇ ಶ್ರೇಯಾಂಕ ತಲುಪಿದ್ದಾರೆ. ಶತಕ ಸಿಡಿಸಿದ ಶುಭಮನ್ ಗಿಲ್ ವೃತ್ತಿಜೀವನದ ಅತ್ಯುತ್ತಮ 38ನೇ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ 1 ಸ್ಥಾನ ಕುಸಿದು 7ನೇ ಕ್ರಮಾಂಕದಲ್ಲಿದ್ದಾರೆ. ನ್ಯೂಜಿಲ್ಯಾಂಡ್ನ ಕೇನ್ ವಿಲಿಯಮ್ಸ್ನ ಅಗ್ರ ಬ್ಯಾಟರ್ ಆಗಿದ್ದಾರೆ. ತಂಡ ವಿಭಾಗದಲ್ಲಿ ಭಾರತ 2ನೇ ಟೆಸ್ಟ್ ಗೆಲ್ಲುವ ಮೂಲಕ 1 ಸ್ಥಾನ ಮೇಲೇರಿ 2 ಕ್ರಮಾಂಕ ಪಡೆದಿದೆ. ಆಸ್ಟ್ರೇಲಿಯಾ ಮೊದಲಿದ್ದರೆ, ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಕನ್ನಡಿಗನ ಸಾಧನೆಗೆ 25 ವರ್ಷ: ಅನಿಲ್ ಕುಂಬ್ಳೆ ಎಂಬ ಬಿರುಗಾಳಿಗೆ ಕುಸಿದಿತ್ತು ಇಡೀ ಪಾಕಿಸ್ತಾನ ತಂಡ