ಹರಾರೆ(ಜಿಂಬಾಬ್ವೆ): ವಿಶ್ವದಾದ್ಯಂತ ಹೊಡಿಬಡಿ ಆಟ ಎಂದೇ ಹೆಸರುವಾಸಿಯಾಗಿರುವ ಟಿ20 ಕ್ರಿಕೆಟ್‌ನಲ್ಲಿ ಬೌಲರ್ಗಳು ಪಾರಮ್ಯ ಮೆರೆಯುವುದು ವಿರಳ. ಚುಟುಕು ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳು ಅಬ್ಬರಿಸಿದರೆ, ಬೌಲರ್ಗಳು ರನ್ ಚಚ್ಚಿಸಿಕೊಳ್ಳುವುದು ಸಾಮಾನ್ಯ. ಹೀಗಾಗಿ, ಬಹುತೇಕ ಪಂದ್ಯಗಳು ಬೃಹತ್ ಮೊತ್ತಗಳಿಗೆ ಸಾಕ್ಷಿಯಾಗುತ್ತವೆ. ಆದರೆ, ಅಪರೂಪವೆಂಬಂತೆ ಇಲ್ಲೊಂದು ಪಂದ್ಯದಲ್ಲಿ ತಂಡವು ದೊಡ್ಡ ಟಾರ್ಗೆಟ್ ಬೆನ್ನತ್ತುವಲ್ಲಿ ಎಡವಿದ್ದಲ್ಲದೆ, ಕೇವಲ 16 ರನ್ಗಳಿಗೆ ಆಲೌಟ್ ಆಗಿದೆ.!
ಜಿಂಬಾಬ್ವೆ ದೇಶೀಯ ಟ್ವೆಂಟಿ-20 ಟೂರ್ನಿಯಲ್ಲಿ ಇಂತಹದ್ದೊಂದು ವಿಲಕ್ಷಣ ದಾಖಲೆ ಮೂಡಿಬಂದಿದ್ದು, ಮಶೋನಾಲ್ಯಾಂಡ್ ಈಗಲ್ಸ್ ಟೀಂ ಅತ್ಯಲ್ಪ ಮೊತ್ತ 16 ರನ್ ಗಳಿಸಿತು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಕಳಪೆ ಮೊತ್ತವಾಗಿದೆ. ಆದರೆ, ಈ ಹಿಂದೆ ಐಲ್ ಆಫ್ ಮ್ಯಾನ್ ತಂಡ ಕೇವಲ 10 ರನ್ಗೆ ಸರ್ವಪತನ ಕಂಡಿರುವುದು ಇದುವರೆಗಿನ ದಾಖಲೆ. ಜೊತೆಗೆ, ಸಿಡ್ನಿ ಥಂಡರ್ ತಂಡವೂ ಹಿಂದೊಮ್ಮೆ 16 ರನ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿರುವುದು ಟಿ20 ಮಾದರಿಯಲ್ಲಿ ಮತ್ತೊಂದು ಅತಿ ಕಡಿಮೆ ಮೊತ್ತವಾಗಿದೆ.
ಟಾಸ್ ಗೆದ್ದ ಡರ್ಹಾಮ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 229 ರನ್ ಪೇರಿಸಿತ್ತು. ಬಾಸ್ ಡಿ ಲೀಡೆಡ್ 29 ಎಸೆತಗಳಲ್ಲಿ 58 ರನ್ ಬಾರಿಸಿದರು. ಇದಕ್ಕೆ ಉತ್ತರವಾಗಿ, ಕೇವಲ 16 ರನ್ಗಳಿಗೆ ಪೂರ್ಣ ಈಗಲ್ಸ್ ತಂಡ ಪೆವಿಲಿಯನ್ ಸೇರಿಕೊಂಡಿತು. ತಂಡದ ಐವರು ಬ್ಯಾಟರ್‌ಗಳು ಖಾತೆ ತೆರೆಯಲೂ ಪರದಾಡಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಅಲ್ಲದೆ, ಯಾವುದೇ ಬ್ಯಾಟರ್‌ಗಳೂ ಸಹ ಎರಡಂಕಿ ಮೊತ್ತ ತಲುಪಲು ಸಾಧ್ಯವಾಗಲಿಲ್ಲ. ಡರ್ಹಾಮ್ ಪರ ಕ್ಯಾಲಮ್ ಪಾರ್ಕಿನ್ಸನ್, ಪಾಲ್ ಕಾಗ್ಲಿನ್ ಹಾಗೂ ಲ್ಯೂಕ್ ರಾಬಿನ್ಸನ್ ತಲಾ ಎರಡು ವಿಕೆಟ್ ಕಬಳಿಸಿದರು. ಬಾಸ್ ಡಿ ಲೀಡೆ ಮತ್ತು ನಾಥನ್ ಸೌಟರ್ ತಲಾ ಒಂದೊಂದು ಹುದ್ದರಿ ಪಡೆದರು.
ಡರ್ಹಾಮ್ ತಂಡವು 213 ರನ್‌ಗಳ ವಿಜಯ ದಾಖಲಿಸಿದ್ದು, ಟಿ20 ಕ್ರಿಕೆಟ್‌ನಲ್ಲಿ ಇದು ಮೂರನೇ ಬೃಹತ್ ಅಂತರದ ಗೆಲುವಾಗಿದೆ. ಇದಕ್ಕೂ ಮುನ್ನ ನೇಪಾಳ ಮತ್ತು ಜೆಕ್ ರಿಪಬ್ಲಿಕ್ ತಂಡಗಳು ಭಾರಿ ಅಂತರದ ಜಯ ಸಾಧಿಸಿದ್ದವು. ಬ್ಯಾಟರ್ ರಿಯಾನ್ ಬರ್ಲ್ ಆರು ಇನಿಂಗ್ಸ್‌ಗಳಿಂದ 59.75 ಸರಾಸರಿಯೊಂದಿಗೆ 239 ರನ್ ಗಳಿಸುವ ಮೂಲಕ ಪಂದ್ಯಾವಳಿಯ ಅಗ್ರ ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಜಲಾತ್ ಖಾನ್ 13 ವಿಕೆಟ್‌ಗಳನ್ನು ಕಬಳಿಸಿದ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಇದನ್ನೂ ಓದಿ: ವಿಶ್ವ ಕ್ರಿಕೆಟ್ಗೆ ಭಾರತವೇ ನಂಬರ್ 1; ಮೂರೂ ಮಾದರಿಗಳಲ್ಲಿ ಟೀಂ ಇಂಡಿಯಾ ಅಗ್ರಜ