ಗುಲ್ಮಾರ್ಗ್ (ಜಮ್ಮು ಮತ್ತು ಕಾಶ್ಮೀರ್): ನಾಲ್ಕನೇ ಆವೃತ್ತಿಯ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ನ ಮಹಿಳೆಯರ ನಾರ್ಡಿಕ್ ಸ್ಕೀಯಿಂಗ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಕರ್ನಾಟಕದ ಭವಾನಿ ತೆಕ್ಕಡ ನಂಜುಂಡ ಅವರು ಗೆದ್ದಿದ್ದಾರೆ. 10 ಕಿ.ಮೀ ನಾರ್ಡಿಕ್ ಸ್ಕೀಯಿಂಗ್, 1.6 ಕಿ.ಮೀ ಸ್ಪ್ರಿಂಟ್ ಮತ್ತು 5 ಕಿ.ಮೀ ಓಟದಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಈ ದಾಖಲೆ ಬರೆದಿದ್ದಾರೆ.
ವಿಶ್ವವಿಖ್ಯಾತ ಸ್ಕೀ ರೆಸಾರ್ಟ್ ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ನಡೆಯುತ್ತಿದೆ. ವಿಂಟರ್ ಖೇಲೋ ಇಂಡಿಯಾದ ನಾಲ್ಕನೇ ಆವೃತ್ತಿಯಲ್ಲಿ ಭಾಗವಹಿಸಲು 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸುಮಾರು 800 ಕ್ರೀಡಾಪಟುಗಳು, ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಆಗಮಿಸಿದ್ದಾರೆ.
ಫೆ.21 ರಂದು ನಾಲ್ಕನೇ ಆವೃತ್ತಿಯ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ನಾರ್ಡಿಕ್ ಸ್ಕೀಯಿಂಗ್‌ನೊಂದಿಗೆ ಪ್ರಾರಂಭವಾಗಿತ್ತು. ಈ ಆಟದಲ್ಲಿ ದೇಶಾದ್ಯಂತ ಆಟಗಾರರು ಭಾಗವಹಿಸಿದ್ದರು. 1.5 ಕಿ.ಮೀ ದೂರದ ಓಟದಲ್ಲಿ ಮಹಿಳೆಯರು ಭಾಗವಹಿಸಿದರೆ, ಪುರುಷರು 10 ಕಿ.ಮೀ. ಓಟದಲ್ಲಿ ಭಾಗವಹಿಸಿದ್ದರು. ಮಹಿಳೆಯರ ವಾಟರ್ ಸ್ಕೀಯಿಂಗ್‌ನಲ್ಲಿ ಕರ್ನಾಟಕದ ಭವಾನಿ ಜಯಗಳಿಸಿದರೆ, ಉತ್ತರಾಖಂಡದ ಸೀಮಾ ಸೊರಂಗ್ ಮತ್ತು ಐಟಿಬಿಯ ಸಪ್ನಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದರು. ಭವಾನಿ 5.23 ನಿಮಿಷಗಳಲ್ಲಿ, ಸೀಮಾ 5.35 ನಿಮಿಷಗಳಲ್ಲಿ ಮತ್ತು ಸಪ್ನಾ 5.48 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿದ್ದರು.
ಈ ವೇಳೆ ಈಟಿವಿ ಭಾರತದ ಜೊತೆಗೆ ಮಾತನಾಡಿದ್ದ ಭವಾನಿ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ವ್ಯವಸ್ಥೆಗಳು ಸಾಕಷ್ಟು ಉತ್ತಮವಾಗಿವೆ. ಸೌಲಭ್ಯಗಳು ಸಹ ಉತ್ತಮವಾಗಿವೆ. ಈ ಬಾರಿ ಸಾಕಷ್ಟು ಆಧುನಿಕತೆಯನ್ನು ಬಳಸಲಾಗುತ್ತಿದೆ. ನಾನು ಎಲ್ಲಾ ವ್ಯವಸ್ಥೆಗಳಿಂದ ತೃಪ್ತಿ ಹೊಂದಿದ್ದೇನೆ. ನಾನು ಚಳಿಗಾಲದ ಅಥ್ಲೀಟ್ ಮತ್ತು ಕೆಟ್ಟ ಹವಾಮಾನದ ಕಾರಣ ಈ ಬಾರಿ ಖೇಲೋ ಇಂಡಿಯಾವನ್ನು ಆಯೋಜನೆ ಮಾಡಲಾಗದು ಎಂದು ನಾನು ಕೇಳಿದಾಗ ತುಂಬಾ ನಿರಾಶೆಗೊಂಡಿದ್ದೆ. ಕಳೆದ ವರ್ಷವೂ ಚಿನ್ನದ ಪದಕ ಜಯಿಸಿದ್ದು, ಈ ಬಾರಿಯೂ ನನ್ನ ಸಂಪೂರ್ಣ ಶ್ರಮವನ್ನು ಹಾಕಿದ್ದೇನೆ. ಈ ಬಾರಿಯೂ ಪದಕ ಗೆಲ್ಲುವ ವಿಶ್ವಾಸವಿದೆ ಎಂದಿದ್ದರು. ಅದರಂತೆ ಇಂದು ಮೂರು ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾರೆ.
ಇದನ್ನೂ ಓದಿ : ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಆರಂಭ: ವಾಟರ್ ಸ್ಕೀಯಿಂಗ್‌ನಲ್ಲಿ ಮೊದಲ ಸ್ಥಾನ ಪಡೆದ ಕನ್ನಡತಿ