ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 5ರಿಂದ ದುಲೀಪ್ ಟ್ರೋಫಿಯ ಮೊದಲ ಪಂದ್ಯ ನಡೆಯಲಿದೆ. ಬಿಸಿಸಿಐ ವೇಳಾಪಟ್ಟಿಯ ಪ್ರಕಾರ, ಈ ಪಂದ್ಯ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆಯಬೇಕಾಗಿತ್ತು. ಆದರೆ ಪಂದ್ಯದಲ್ಲಿ ಸ್ಟಾರ್ ಆಟಗಾರರೂ ಭಾಗವಹಿಸುತ್ತಿರುವುದರಿಂದ ಪಂದ್ಯ ಬೆಂಗಳೂರಿಗೆ ಬದಲಾಯಿಸಲಾಗಿದೆ.
ಈ ವಿಚಾರವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಘುರಾಮ್ ಭಟ್ 'ಈಟಿವಿ ಭಾರತ'ಕ್ಕೆ ಖಚಿತಪಡಿಸಿದ್ದು, (ಕೆಸಿಎಸ್‌ಎ) ದುಲೀಪ್ ಟ್ರೋಫಿ ಮೊದಲ ಪಂದ್ಯವನ್ನು ಅನಂತಪುರದಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಅನಂತಪುರ ಬೆಂಗಳೂರಿನಿಂದ 220 ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ ವಿಮಾನ ನಿಲ್ದಾಣವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ಆಟಗಾರರು ಅನಂತಪುರಕ್ಕೆ ತೆರಳುವುದು ಕಷ್ಟಕರ ಎಂಬ ಕಾರಣಕ್ಕಾಗಿ ಸ್ಥಳಾಂತರಿಸಲಾಗಿದೆ ಎನ್ನಲಾಗುತ್ತಿದೆ.
ಯಾವ ಮಾದರಿಯಲ್ಲಿ ಪಂದ್ಯ?: ಈ ಬಾರಿ ದುಲೀಪ್ ಟ್ರೋಫಿಯನ್ನು 6 ತಂಡಗಳ ವಲಯ ಮಾದರಿಯಲ್ಲಿ ನಡೆಸಲಾಗುವುದಿಲ್ಲ. ಬದಲಿಗೆ, ಭಾರತ ಎ, ಬಿ, ಸಿ ಮತ್ತು ಡಿ ತಂಡಗಳಾಗಿ ನಾಲ್ಕು ತಂಡಗುಳು ಆಡಲಿವೆ. ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ತಂಡಗಳನ್ನು ಆಯ್ಕೆ ಮಾಡುತ್ತದೆ.
ಯಾವೆಲ್ಲ ಆಟಗಾರರು ಭಾಗಿ?: ದುಲೀಪ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊರತುಪಡಿಸಿ, ಅಗ್ರ ಆಟಗಾರರಾದ ಶುಭ್‌ಮನ್ ಗಿಲ್, ಕೆ.ಎಲ್.ರಾಹುಲ್, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್ ಆಡುವ ಸಾಧ್ಯತೆ ಇದೆ. ದುಲೀಪ್ ಟ್ರೋಫಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರರನ್ನು ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಗೆ ಆಯ್ಕೆ ಮಾಡುವ ಸಾಧ್ಯತೆಯು ಇದೆ ಎನ್ನಲಾಗಿದೆ. ಆದರೆ, ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.
ದುಲೀಪ್ ಟ್ರೋಫಿ 2024ರ ವೇಳಾಪಟ್ಟಿ
- 5-8 ಸೆಪ್ಟೆಂಬರ್: ಭಾರತ ಎ ವಿರುದ್ಧ ಭಾರತ ಬಿ
- 5-8 ಸೆಪ್ಟೆಂಬರ್: ಭಾರತ ಸಿ ವಿರುದ್ಧ ಭಾರತ ಡಿ
- 12-15 ಸೆಪ್ಟೆಂಬರ್: ಭಾರತ ಎ ವಿರುದ್ಧ ಭಾರತ ಡಿ
- 12-15 ಸೆಪ್ಟೆಂಬರ್: ಭಾರತ ಬಿ ವಿರುದ್ಧ ಭಾರತ ಸಿ
ಇದನ್ನೂ ಓದಿ: ಬಾರ್ಡರ್-ಗವಾಸ್ಕರ್ ಟ್ರೋಫಿ: ಟೂರ್ನಿ ಆರಂಭಕ್ಕೂ ಇದುವೇ ವಿಜೇತ ತಂಡ ಎಂದ ಪಾಂಟಿಂಗ್! - Ricky Ponting Prediction