ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾದ ನೂತನ ಮುಖ್ಯ ಕೋಚ್‌ಗಾಗಿ ಅರ್ಜಿ ಆಹ್ವಾನಿಸಿದೆ. ಪ್ರಸ್ತುತ, ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದು, 2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ನಂತರ ಅವರ ಅಧಿಕಾರಾವಧಿಯನ್ನು ವಿಸ್ತರಿಸಲಾಗಿತ್ತು. ಇದೀಗ T20 ವಿಶ್ವಕಪ್ ನಂತರ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆ ಬಿಬಿಸಿಐ ನೂತನ ಮುಖ್ಯ ಕೋಚ್ಗಳ ಹಡುಕಾಟಕ್ಕೆ ಬಿಸಿಸಿಐ ಮುಂದಾಗಿದೆ.
ಈ ಕುರಿತು ಸೋಮವಾರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮುಂದಿನ ಮೂರೂವರೆ ವರ್ಷಗಳ ಅವಧಿಗೆ (ಜುಲೈ 1 2024 ರಿಂದ ಡಿಸೆಂಬರ್ 31, 2027) ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಮೇ.27 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಮಾನದಂಡಗಳು?: ಬಿಸಿಸಿಐ ನಿಯಮಗಳ ಪ್ರಕಾರ, ಮುಖ್ಯ ಕೋಚ್ ಆಗಲು ಬಯಸುವವರು 60 ವರ್ಷದೊಳಗಿನವರಾಗಿರಬೇಕು. ಕನಿಷ್ಠ 30 ಟೆಸ್ಟ್ ಅಥವಾ 50 ಏಕದಿನ ಪಂದ್ಯಗಳನ್ನು ಆಡಿರಬೇಕು. ವಿದೇಶಿ ಕೋಚ್ಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಹಿಂದೆ ಡಂಕನ್ ಫ್ಲೆಚರ್ ಟೀಮ್ ಇಂಡಿಯಾದ ಕೊನೆಯ ವಿದೇಶಿ ಕೋಚ್ ಆಗಿ ನೇಮಕಗೊಂಡಿದ್ದರು.
ಆಯ್ಕೆ ಪ್ರಕ್ರಿಯೆ: ಬಿಸಿಸಿಐ ಪ್ರಕಟಣೆ ಪ್ರಕಾರ, ಆಯ್ಕೆ ಪ್ರಕ್ರಿಯೆಯು ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ಒಳಗೊಂಡಿರುತ್ತದೆ, ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನವನ್ನು ಒಳಗೊಂಡಿರುತ್ತದೆ. ಮಾಜಿ ಭಾರತೀಯ ಬ್ಯಾಟ್ಸ್‌ಮನ್ ಮತ್ತು ರಾಷ್ಟ್ರೀಯ ಆಯ್ಕೆಗಾರ ಜತಿನ್ ಪರಾಂಜಪೆ ಅವರನ್ನು ಒಳಗೊಂಡಿರುವ ಕ್ರಿಕೆಟ್ ಸಲಹಾ ಸಮಿತಿಯು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಸಂದರ್ಶನ ನಡೆಸಲಾಗುತ್ತದೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತೀಚೆಗೆ ಪತ್ರಕರ್ತರೊಂದಿಗಿನ ಸಂವಾದದಲ್ಲಿ ರಾಹುಲ್ ದ್ರಾವಿಡ್ ಕೋಚ್ ಆಗಿ ಉಳಿಯಲು ಬಯಸಿದರೆ, ಅವರು ಮತ್ತೆ ಅರ್ಜಿ ಸಲ್ಲಿಸಬಹುದಾಗಿದೆ. ನಾವು ಮೂರು ವರ್ಷಗಳ ಅವಧಿಗಾಗಿ ಕೋಚ್ ಅನ್ನು ಹುಟುಕಾಟ ನಡೆಸಿದ್ದೇವೆ ಎಂದು ತಿಳಿಸಿದ್ದರು. ಆದರೆ ದ್ರಾವಿಡ್ ಅವರ ಎರಡು ವರ್ಷ ಒಪ್ಪಂದ 2023ರಲ್ಲೇ ಕೊನೆಗೊಂಡಿತ್ತು. ಟಿ-20 ವಿಶ್ವಕಪ್ ದೃಷ್ಟಿಯಿಂದ ಮತ್ತೆ ಮುಂದವರೆಸಲಾಗಿತ್ತು. ಹಾಗಾಗಿ ಅವರು ಮತ್ತೆ ಅರ್ಜಿ ಸಲ್ಲಿಕೆ ಮಾಡುವುದು ಅನುಮಾನ.
ಸದ್ಯ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡವೂ 2022ರ ಟಿ-20 ವಿಶ್ವಕಪ್ ಸೆಮಿ ಫೈನಲ್, 2023ರ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಫೈನಲ್ ತಲುಪಿದ ಸಾಧನೆ ಮಾಡಿತ್ತು. ವಿಶ್ವಕಪ್ನ ಎಲ್ಲ ಪಂದ್ಯಗಳನ್ನು ನಿರಾಯಾಸವಾಗಿ ಗೆದ್ದುಕೊಂಡಿದ್ದ ಭಾರತ ತಂಡ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ನಿರಾಸೆಗೆ ಒಳಗಾಗಿತ್ತು.