ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಬಿಸಿಸಿಐ ಶುಕ್ರವಾರ ಭಾರತ ತಂಡವನ್ನು ಪ್ರಕಟಿಸಿದೆ. ಅಕ್ಟೋಬರ್ 16 ರಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಇವರೊಂದಿಗೆ ಜಸ್ಪ್ರೀತ್ ಬುಮ್ರಾ ಅವರಿಗೂ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಬುಮ್ರಾ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಉಳಿದಂತೆ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಸರ್ಫರಾಜ್ ಖಾನ್ ಜೊತೆಗೆ ಆಕಾಶ್ ದೀಪ್ ಕೂಡ ತಂಡದಲ್ಲಿರಲಿದ್ದಾರೆ.
ಬಿಸಿಸಿಐ ಪ್ರಕಟಿಸಿರು 15 ಸದಸ್ಯರ ತಂಡದಲ್ಲಿ ಅನುಭವಿ ಆಟಗಾರರ ಜತೆಗೆ ಹೊಸ ಆಟಗಾರರಿಗೂ ಅವಕಾಶ ನೀಡಲಾಗಿದೆ. ಇತ್ತೀಚೆಗಷ್ಟೇ ಟೀಂ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಗೆದ್ದಿರುವ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧವೂ ಬಹುತೇಕ ಅದೇ ಆಟಗಾರರೊಂದಿಗೆ ಕಣಕ್ಕಿಳಿಯಲಿದೆ. ಈ ಮೂರು ಪಂದ್ಯಗಳ ಟೆಸ್ಟ್ ಸರಣಿ ಬೆಂಗಳೂರು, ಪುಣೆ ಮತ್ತು ಮುಂಬೈನಲ್ಲಿ ನಡೆಯಲಿವೆ.
ಬಲಿಷ್ಠ ಬ್ಯಾಟಿಂಗ್ ಲೈನ್ಅಪ್: ಈ ಟೆಸ್ಟ್ ಸರಣಿಗೆ ಭಾರತ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ನೊಂದಿಗೆ ಕಣಕ್ಕಿಳಿಯಲಿದೆ. ರೋಹಿತ್ ಜೊತೆಗೆ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ತಂಡದ ಭಾಗವಾಗಿದ್ದಾರೆ. ಉಳಿದಂತೆ ಯುವ ಬ್ಯಾಟರ್ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರ ಮೇಲೂ ಆಯ್ಕೆಗಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಲ್ರೌಂಡರ್ ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಜಡೇಜಾ ಅವರಿಗೂ ಟೀಂ ಇಂಡಿಯಾ ಅವಕಾಶ ನೀಡಿದೆ.
ಬೌಲಿಂಗ್: ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಕೂಡ ತಂಡದ ಭಾಗವಾಗಿದ್ದಾರೆ. ಆಕಾಶ್ ಇತ್ತೀಚೆಗೆ ಮುಕ್ತಾಯಗೊಂಡ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಮಾಡಿ ಮಿಂಚಿದ್ದರು. ಸ್ಪಿನ್ನರ್ ವಿಭಾಗದಲ್ಲಿ ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿ.ಕೀ), ಧ್ರುವ ಜುರೆಲ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: ಇಂದು ಭಾರತ - ಬಾಂಗ್ಲಾ 3ನೇ ಟಿ20: ಇದುವರೆಗೂ ಟೀಂ ಇಂಡಿಯಾ ವಿರುದ್ಧ ಬಾಂಗ್ಲಾ ಗೆದ್ದ ಪಂದ್ಯಗಳೆಷ್ಟು ಗೊತ್ತಾ?