ರಾಜಸ್ಥಾನದ ಮರಳಿನಲ್ಲೂ ಬೂಮ್ರಾರಂತೆ ಬೌಲಿಂಗ್ ಮಾಡುವ ಬಾಲಕ: ವಿಡಿಯೋ ನೋಡಿ - Rajasthan boy bowling - RAJASTHAN BOY BOWLING
ಬಾಲಕನೊಬ್ಬ ಅದ್ಭುತವಾಗಿ ಬೌಲಿಂಗ್ ಮಾಡುತ್ತಿರುವ ವಿಡಿಯೋವೊಂದು ರಾಜಸ್ಥಾನದ ಬಾರ್ಮರ್ ಜಿಲ್ಲೆಯಿಂದ ಹೊರಬಿದ್ದಿದೆ.
Published : Apr 29, 2024, 11:16 AM IST
ಬಾರ್ಮರ್ (ರಾಜಸ್ಥಾನ): ದೇಶದಲ್ಲಿ ಐಪಿಎಲ್ ಹವಾ ಜೋರಾಗಿಯೇ ಸದ್ದು ಮಾಡುತ್ತಿದೆ. ಯುವ ಜನತೆಗೆ ಕ್ರಿಕೆಟ್ ಮೇಲಿನ ಹುಚ್ಚು ಹೇಳತೀರದು. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕ್ರಿಕೆಟ್ ಮೇಲೆ ಅತಿಯಾದ ಪ್ರೀತಿ ಬೆಳೆಸಿಕೊಂಡಿದ್ದಾರೆ. ಊರು, ಗಲ್ಲಿಗಳಲ್ಲಿ ಕ್ರಿಕೆಟ್ ಪಂಟರುಗಳು ಹುಟ್ಟಿಕೊಂಡಿದ್ದಾರೆ. ಅಂಥದ್ದೇ ಒಂದು ಪ್ರತಿಭೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.
ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಾಲಕನೊಬ್ಬ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅರೆ.. ಅದರಲ್ಲೇನು ವಿಶೇಷ ಅಂತೀರಾ. ರಾಜಸ್ಥಾನ ಹೇಳಿಕೇಳಿ ಮರುಭೂಮಿ ಪ್ರದೇಶ. ಇಲ್ಲಿ ಎಲ್ಲದರಲ್ಲೂ ಬರ. ಬರೀ ಮರಳಿನಿಂದಲೇ ಕೂಡಿರುವ ಭೂಮಿಯಲ್ಲಿ ಕ್ರಿಕೆಟ್ ಆಡುವುದು ಕಷ್ಟಸಾಧ್ಯ. ಇಂತಹ ದುರ್ಗಮ ಪರಿಸ್ಥಿತಿಯಲ್ಲೂ ಈ ಯುವಕ ವೇಗದ ಬೌಲಿಂಗ್ ಮಾಡಿ ಮರಳಿನಲ್ಲೂ ಚೆಂಡನ್ನು ಚಿಮ್ಮಿಸಿ ವಿಕೆಟ್ ಎಗರಿಸುತ್ತಿದ್ದಾನೆ.
ಮರಳಿನ ಪಿಚ್ನಲ್ಲಿ ಚೆಂಡು ವೇಗವಾಗಿ ಚಲಿಸುವುದೇ ಕಷ್ಟ. ಅಂಥದ್ದರಲ್ಲಿ ಈ ಬಾಲಕ ವಿಕೆಟ್ಗಳನ್ನು ಪಟಪಟನೆ ಉರುಳಿಸುತ್ತಿದ್ದಾನೆ. ಇದರ 20 ಸೆಕೆಂಡುಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆಯುತ್ತಿದೆ. ಇದು ಈಗಾಗಲೇ ಸಾವಿರಾರು ವೀಕ್ಷಣೆಗಳು ಕಂಡಿದೆ. ಹಲವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲೇನಿದೆ: ಚಿಕ್ಕ ವಿಡಿಯೋದಲ್ಲಿ ಬಾಲಕ ಭಾರತ ಕ್ರಿಕೆಟ್ ತಂಡದ ಟ್ರಂಪ್ಕಾರ್ಡ್ ಬೌಲರ್ ಜಸ್ಪ್ರೀತ್ ಬೂಮ್ರಾರ ಶೈಲಿಯಲ್ಲಿ ಬೌಲಿಂಗ್ ಮಾಡುತ್ತಿದ್ದು, ವಿಕೆಟ್ಗಳಿಗೆ ಗುರಿಯಿಟ್ಟು ಎಸೆಯುತ್ತಿದ್ದಾರೆ. ಹಾಕಿದ ಪ್ರತಿ ಚೆಂಡು ವಿಕೆಟ್ಗೆ ಅಪ್ಪಳಿಸುತ್ತಿದೆ. ಮರಳಿನ ಪಿಚ್ನಲ್ಲಿ ತರಬೇತಿ ಪಡೆದ ಬೌಲರ್ನಂತೆ ಎಸೆತಗಳನ್ನು ಹಾಕುತ್ತಿದ್ದಾನೆ. ನಿಖರವಾದ ಲೈನ್ ಮತ್ತು ಲೆಂಗ್ತ್‌ನೊಂದಿಗೆ ಈತ ಬೌಲಿಂಗ್ ಮಾಡುತ್ತಿದ್ದಾನೆ.
ಈ ವಿಡಿಯೋವನ್ನು ರಾಜ್ಯದ ಮಾಜಿ ಸಚಿವ ಅಮೀನ್ ಖಾನ್ ಹಂಚಿಕೊಂಡಿದ್ದು, "ಈ ಮಗು ಭವಿಷ್ಯದ ಶ್ರೇಷ್ಠ ಆಟಗಾರನಾಗುತ್ತಾನೆ. ದೇಶ, ರಾಜ್ಯಕ್ಕೆ ಕೀರ್ತಿ ತರುತ್ತಾನೆ. ಅಬ್ಬಾಸ್, ನಿನಗೆ ನನ್ನ ಶುಭ ಹಾರೈಕೆಗಳು. ನಿನ್ನ ಶ್ರಮವನ್ನು ಮುಂದುವರಿಸು" ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅದೇ ರೀತಿ ಕಾಂಗ್ರೆಸ್ ಶಾಸಕ ಹರೀಶ್ ಚೌಧರಿ ಅವರೂ ವಿಡಿಯೋ ಹಂಚಿಕೊಂಡಿದ್ದು, "ಅಬ್ಬಾಸ್ ಅವರ ಪ್ರತಿಭೆಯ ವೀಡಿಯೊವನ್ನು ನೋಡಿ ನನಗೆ ಸಂತೋಷವಾಗಿದೆ. ಅಬ್ಬಾಸ್ರ ಉತ್ತಮ ಭವಿಷ್ಯಕ್ಕಾಗಿ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವ ಮೂಲಕ ಈ ಪ್ರತಿಭೆಯನ್ನು ಬೆಳೆಸುವ ಕೆಲಸ ಮಾಡುತ್ತೇವೆ" ಎಂದಿದ್ದಾರೆ.
ಅದಕ್ಕೆ ಹೇಳೋದು ಪ್ರತಿಭೆ ಎಂಬುದು ಯಾರ ಸ್ವತ್ತೂ ಅಲ್ಲ, ಅದಕ್ಕೆ ಬಡತನ, ಸಿರಿತನದ ಹಂಗಿಲ್ಲ. ಈಗಿನ ಸಾಮಾಜಿಕ ಮಾಧ್ಯಮ ಯುಗದಲ್ಲಿ ಎಲ್ಲಿ, ಯಾರು ಬೇಕಾದರೂ ತಮ್ಮಲ್ಲಿನ ಅಂತಃಸತ್ವವನ್ನು ಪ್ರಪಂಚಕ್ಕೆ ತೋರಿಸಬಹುದು.
ಇದನ್ನೂ ಓದಿ: ಚೆಪಾಕ್ನಲ್ಲಿ ಹೈದರಾಬಾದ್ಗೆ ಆಲೌಟ್ ಸೋಲಿನ ಮುಖಭಂಗ: ಗೆದ್ದು ಮೂರನೇ ಸ್ಥಾನಕ್ಕೇರಿದ ಸಿಎಸ್ಕೆ - CSK vs SRH match