ನಿಂಗ್ಬೋ (ಚೀನಾ): 2024ರ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಅಭಿಯಾನವು ಕೊನೆಗೊಂಡಿದೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತರಾದ ಪಿವಿ ಸಿಂಧು ಮತ್ತು ಎಚ್‌ಎಸ್ ಪ್ರಣಯ್ ಅವರನ್ನು ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ವಿಭಾಗಗಳ ಕೊನೆಯ 16 ರಲ್ಲಿ ಸೋಲಿಸುವುದರೊಂದಿಗೆ ತಮ್ಮ ಓಟ ಕೊನೆಗೊಳಿಸಿದರು.
ಚೀನಾದ ನಿಂಗ್ಬೋ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ 69 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು 18-21, 21-13, 17-21 ಅಂಕಗಳಿಂದ ವಿಶ್ವದ 7ನೇ ಶ್ರೇಯಾಂಕದ ಹಾನ್ ಯು ವಿರುದ್ಧ ಸೋತರು. ಇದು ಆರು ಪಂದ್ಯಗಳಲ್ಲಿ ಚೀನಾದ ಶಟ್ಲರ್ ವಿರುದ್ಧ ಸಿಂಧುಗೆ ಮೊದಲ ಸೋಲಾಗಿದೆ.
ಮೊದಲ ಗೇಮ್‌ನಲ್ಲಿ ಪ್ರಾಬಲ್ಯ ಮೆರೆದ ಸಿಂಧು ವಿರಾಮದ ವೇಳೆಗೆ ಆರು ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿದ್ದರು. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ 15-10 ಮುನ್ನಡೆಯಲ್ಲಿದ್ದರು, ಆದರೆ ಹಾನ್ ಯು ಸತತ ಆರು ಅಂಕಗಳನ್ನು ಗೆಲ್ಲುವ ಮೂಲಕ ಮುನ್ನಡೆ ಸಾಧಿಸಿದರು ಮತ್ತು ನಂತರ ಮೊದಲ ಗೇಮ್ ಅನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪ್ರಬಲವಾಗಿ ಪ್ರತ್ಯುತ್ತರ ನೀಡಿದರು ಮತ್ತು ಎರಡನೇ ಗೇಮ್ ಅನ್ನು ಸುಲಭವಾಗಿ ಗೆದ್ದು ಪಂದ್ಯವನ್ನು ಮೂರನೇ ಗೇಮ್‌ಗೆ ಕೊಂಡೊಯ್ದರು. ಆದರೆ, ಚೀನಾದ ಶಟ್ಲರ್ ಮೂರನೇ ಗೇಮ್ ಗೆದ್ದು ಸಿಂಧು ಅವರನ್ನು ಹೊರಹಾಕಿದರು. ಇದಕ್ಕೂ ಮುನ್ನ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಅವರು ಮಾಜಿ ಯೂತ್ ಒಲಿಂಪಿಕ್ಸ್ ವಿಜೇತ ಮಲೇಷ್ಯಾದ ಗೋ ಜಿನ್ ವೀ ಅವರನ್ನು ಸೋಲಿಸಿದ್ದರು.
ಪ್ರಣಯ್ಗೆ ಸೋಲು: ಇನ್ನೂ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ಒಂಬತ್ತನೇ ಶ್ರೇಯಾಂಕದ ಪ್ರಣಯ್ ಅವರು ಚೈನೀಸ್ ತೈಪೆಯ ಲಿನ್ ಚುನ್-ಯಿ ವಿರುದ್ಧ 18-21, 11-21 ಅಂತರದಲ್ಲಿ ಸೋಲನುಭವಿಸಿದ್ದರು.
ಪ್ರಣಯ್ ಮೊದಲ ಗೇಮ್‌ನಲ್ಲಿ ನಾಲ್ಕು ಪಾಯಿಂಟ್‌ಗಳಿಂದ ಹಿಂದೆ ಬಿದ್ದ ನಂತರ ಪುನರಾಗಮನ ಮಾಡಿ 15 ಪಾಯಿಂಟ್‌ಗಳಲ್ಲಿ ಗೇಮ್ ಸಮಬಲಗೊಳಿಸಿದರು. ಆದರೆ ಲಿನ್ ಚುನ್-ಯಿ ಮೊದಲ ಗೇಮ್ ಗೆದ್ದು ಎರಡನೇ ಗೇಮ್‌ನಲ್ಲಿ ಭಾರತದ ಷಟ್ಲರ್‌ಗೆ ಯಾವುದೇ ಅವಕಾಶ ನೀಡಲಿಲ್ಲ.
ಇದಕ್ಕೂ ಮುನ್ನ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಇಬ್ಬರೂ ಮಹಿಳೆಯರ ಡಬಲ್ಸ್ ಟೂರ್ನಿಯಿಂದ ಹೊರಬಿದ್ದರು. ವಿಶ್ವದ ನಂ.20 ರ ಭಾರತದ ಅತ್ಯುನ್ನತ ಶ್ರೇಯಾಂಕದ ಜೋಡಿ ಪೊನ್ನಪ್ಪ ಮತ್ತು ಕ್ರಾಸ್ಟೊ ಅವರನ್ನು ವಿಶ್ವದ ನಂ.3 ಜೋಡಿ ನಮಿ ಮತ್ಸುಯಾಮಾ ಮತ್ತು ಚಿಹಾರು ಶಿದಾ 21-17 ಮತ್ತು 21-12 ರಿಂದ 49 ನಿಮಿಷಗಳಲ್ಲಿ ಸೋಲಿಸಿದರು.
ಇನ್ನು ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್ ಮತ್ತು ಪ್ರಿಯಾಂಶು ಸೇರಿದಂತೆ ಅಂಕಣದಲ್ಲಿದ್ದ ಎಲ್ಲ ಭಾರತೀಯ ಆಟಗಾರರು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲೇ ತಮ್ಮ ಗುರಿಯನ್ನು ಕಳೆದುಕೊಂಡರು. ಮಂಗಳವಾರದಂದು ಲಕ್ಷ್ಯ ಅಗ್ರ ಶ್ರೇಯಾಂಕದ ಚೀನಾದ ಶಿ ಯು ವಿರುದ್ಧ 19-21, 15-21ರಿಂದ 53 ನಿಮಿಷಗಳಲ್ಲಿ ಸೋತರೆ, ಶ್ರೀಕಾಂತ್ 14-21, 13-21ರಲ್ಲಿ ಆಂಟನಿ ಸಿನಿಸುಕಾ ವಿರುದ್ಧ ಸೋತರು.
ರಾಜಾವತ್ ಅವರನ್ನು ಎಂಟನೇ ಶ್ರೇಯಾಂಕದ ಮಲೇಷ್ಯಾದ ಲೀ ಝಿ ಜಿಯಾ ಅವರು 21-9, 21-13 ರಿಂದ ಸೋಲಿಸಿದರು. ಡಬಲ್ಸ್‌ನಲ್ಲಿ ಎಂ.ಆರ್.ಅರ್ಜುನ್ ಮತ್ತು ಧ್ರುವ ಕಪಿಲ ಜೋಡಿ ಕೂಡ ಮೊದಲ ಪಂದ್ಯವನ್ನು ದಾಟಲು ಸಾಧ್ಯವಾಗಲಿಲ್ಲ. ಮಹಿಳೆಯರಲ್ಲಿ ಆಕರ್ಷಿ ಕಶ್ಯಪ್ ಅವರನ್ನು 21-10, 21-11 ರಲ್ಲಿ ಬುಸಾನನ್ ಮತ್ತು ಮಾಳವಿಕಾ ಬನ್ಸೋಡ್ ಅವರನ್ನು ದಕ್ಷಿಣ ಕೊರಿಯಾದ ಸಿಮ್ ಯು ಜಿನ್ ಅವರು 21-18, 21-19 ರಿಂದ ಸೋಲಿಸಿದರು. ಡಬಲ್ಸ್‌ನಲ್ಲಿ ರುತುಪರ್ಣ ಮತ್ತು ಶ್ವೇತಪರ್ಣ ಪಾಂಡಾ 8-21, 12-21 ರಲ್ಲಿ ಏಳನೇ ಶ್ರೇಯಾಂಕದ ಚೀನಾದ ಜಾಂಗ್ ಶು ಕ್ಸಿಯಾನ್ ಮತ್ತು ಜೆಂಗ್ ಯುಯೆ ಡಬ್ಲ್ಯೂ ವಿರುದ್ಧ ಪರಾಜಯ ಹೊಂದಿದರು.