ನವದೆಹಲಿ: ಆಸ್ಟ್ರೇಲಿಯಾ ಪರ ಮೂರು ಟಿ20 ವಿಶ್ವಕಪ್ ಆಡಿದ್ದ ಸ್ಟಾರ್ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2021ರಲ್ಲಿ ಮೊದಲ ಬಾರಿಗೆ ತಂಡವನ್ನು ಟಿ-20 ವಿಶ್ವಕಪ್ ವಿಜೇತರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಡ್ ಮಂಗಳವಾರ ವಿದಾಯ ಹೇಳಿದ್ದಾರೆ. ಆದರೇ ದೇಶಿ ಲೀಗ್ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ವೇಡ್ ವೃತ್ತಿಜೀವನ: ಈ ಎಡಗೈ ಬ್ಯಾಟರ್ ಆಸ್ಟ್ರೇಲಿಯಾ ಪರ 13 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದು 225ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 92 ಟಿ20 ಪಂದ್ಯ, 97 ಏಕದಿನ ಪಂದ್ಯಗಳು, 36 ಟೆಸ್ಟ್ ಪಂದ್ಯಗಳ ಸೇರಿವೆ. ಟಿ20 ಸ್ವರೂಪದಲ್ಲಿ 1202 ರನ್ ಗಳಿಸಿದ್ದ ಅವರು, ಏಕದಿನದಲ್ಲಿ 1867 ರನ್ ಕಲೆ ಹಾಕಿದ್ದಾರೆ. ಫೆಬ್ರವರಿ 2012ರಲ್ಲಿ ಆಸ್ಟ್ರೇಲಿಯಾ ಪರ ಮೊದಲ ಏಕದಿನ ಆಡಿದ ವೇಡ್, ಜುಲೈ 2021ರಲ್ಲಿ ತಮ್ಮ ಕೊನೆಯ ODI ಪಂದ್ಯವನ್ನಾಡಿದ್ದರು. 36ರ ಹರೆಯದ ಈ ಕ್ರಿಕೆಟಿಗ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ.
36 Test matches. 97 ODIs. 92 T20 Internationals.
— Cricket Australia (@CricketAus) October 29, 2024
Congratulations to Matthew Wade on an outstanding international cricket career! pic.twitter.com/SDWl1OhqZC
3 ಟಿ20 ವಿಶ್ವಕಪ್: ವೇಡ್ ಆಸ್ಟ್ರೇಲಿಯಾ ಪರ ಮೂರು ಟಿ20 ವಿಶ್ವಕಪ್ ಆಡಿದ್ದಾರೆ. ಅದರಲ್ಲಿ 2021ರಲ್ಲಿ ಆಸೀಸ್ ಟಿ20 ವಿಶ್ವಕಪ್ ಗೆದ್ದಿತ್ತು. ಈ ವೇಳೆ ವೇಡ್ ತಂಡದ ಉಪನಾಯಕರಾಗಿದ್ದರು. ಸೆಮಿಫೈನಲ್‌ನಲ್ಲಿ, ಅವರು ಪಾಕಿಸ್ತಾನದ ವಿರುದ್ಧ 17 ಎಸೆತಗಳಲ್ಲಿ ಅಜೇಯ 41ರನ್ ಗಳಿಸಿದರು ಮತ್ತು ತಂಡವನ್ನು ಫೈನಲ್ಗೆ ಕಂಡೊಯ್ಯುವಲ್ಲಿ ಮುಖ್ಯಪಾತ್ರ ವಹಿಸಿದ್ದರು. ಮ್ಯಾಥ್ಯೂ ವೇಡ್ ಆಸ್ಟ್ರೇಲಿಯ ಪರ ಒಟ್ಟು 36 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 117ರನ್ ಆಗಿತ್ತು, ಆ್ಯಶಸ್ ಸರಣಿಯಲ್ಲಿ ಈ ಸಾಧನೆ ಮಾಡಿದ್ದರು.
ಕೋಚ್ ಸ್ಟಾಫ್: ಅಂತಾರಾಷ್ಟ್ರೀಯ ಪಂದ್ಯಕ್ಕೆ ನಿವೃತ್ತಿ ಘೋಷಿಸಿರುವ ವೇಡ್ ಆಸ್ಟ್ರೇಲಿಯಾ ಕೋಚಿಂಗ್ ಸ್ಟಾಫ್ನಲ್ಲಿ ಸ್ಥಾನ ಪಡೆದಿದ್ದಾರೆ. ಮುಂದಿನ ತಿಂಗಳು ಪಾಕಿಸ್ತಾನ ವಿರುದ್ಧ ನಡೆಯಲಿರುವ ಟಿ-20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಕೋಚಿಂಗ್ ಸ್ಟಾಫ್ನಲ್ಲಿರಲಿದ್ದಾರೆ. "ಕಳೆದ ಟಿ20 ವಿಶ್ವಕಪ್ನಂತರ ನನ್ನ ಅಂತಾರಾಷ್ಟ್ರೀಯ ದಿನಗಳು ಮುಗಿದಿವೆ ಎಂದು ನನಗೆ ಸಂಪೂರ್ಣವಾಗಿ ತಿಳಿದಿತ್ತು. ತಂಡದಲ್ಲಿ ಉತ್ತಮ ಅವಕಾಶಗಳು ಸಿಕ್ಕಿವೆ ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ, ದೇಶಿ ಲೀಗ್ಗಳಲ್ಲಿ ತಮ್ಮ ಆಟವನ್ನು ಮುಂದುವರೆಸಲಿದ್ದೇನೆ. ತಂಡದ ಎಲ್ಲ ಸದಸ್ಯರಿಗೆ, ಸಿಬ್ಬಂದಿ ಮತ್ತು ತರಬೇತುದಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ನಿವೃತ್ತಿ ಘೋಷಿಸಿದ್ದಾರೆ.
2ನೇ ನಿವೃತ್ತಿ: 8 ತಿಂಗಳ ಅವಧಿಯಲ್ಲಿ ಇದು ವೇಡ್ ಅವರ ಎರಡನೇ ನಿವೃತ್ತಿಯಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ, ಅವರು ಶೆಫೀಲ್ಡ್ ಶೀಲ್ಡ್‌ನ ಫೈನಲ್‌ನಲ್ಲಿ ಆಡಿದ ನಂತರ ಪ್ರಥಮ ದರ್ಜೆ ಅಂದರೆ ರೆಡ್ ಬಾಲ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು.
ಇದನ್ನೂ ಓದಿ: ಮುಂಬೈ ರೀಟೈನ್ ಲಿಸ್ಟ್‌ನಲ್ಲಿ ಆ ಮೂವರು ಫಿಕ್ಸ್ - ಆದ್ರೆ ರೋಹಿತ್ ಶರ್ಮಾ?: ಬಿಗ್ ಅಪ್ಡೇಟ್ ನೀಡಿದ ಭಜ್ಜಿ