ಮಂಗಳೂರು: ಮುಂದಿನ ಒಲಿಂಪಿಕ್ನಲ್ಲಿ ಪಾಲ್ಗೊಳ್ಳುವ ಬಗ್ಗೆ ಚಿಂತಿಸಿಲ್ಲ. ಆದರೆ ಪಾಲ್ಗೊಳ್ಳಬಹುದು, ಇಲ್ಲದೆಯೂ ಇರಬಹುದು ಎಂದು ಖ್ಯಾತ ಅಥ್ಲೀಟ್ ಎಂ ಆರ್ ಪೂವಮ್ಮ ತಿಳಿಸಿದರು.
ಒಲಿಂಪಿಕ್ ಕ್ರೀಡೆಯಲ್ಲಿ ಪಾಲ್ಗೊಂಡು ಹಿಂದಿರುಗಿದ ಬಳಿಕ ಮಂಗಳೂರಿನಲ್ಲಿಂದು ಪ್ರೆಸ್ಕ್ಲಬ್ ಆಯೋಜಿಸಿದ್ದ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಮುಂದಿನ ಲಾಸ್ ಏಂಜಲೀಸ್ ಒಲಿಂಪಿಕ್ನಲ್ಲಿ ಸ್ಪರ್ಧಿಸುವ ಬಗ್ಗೆ ಚಿಂತಿಸಿಲ್ಲ. ಇದೀಗ ಕುಟುಂಬದೊಂದಿಗೆ ಸಮಯ ಮೀಸಲಿರಿಸಿದ್ದೇನೆ ಎಂದು ಹೇಳಿದರು. ಮಂಗಳೂರಿನಲ್ಲಿ ಕ್ರೀಡಾ ಅಕಾಡೆಮಿ ಮಾಡುವ ಆಲೋಚನೆ ಹಿಂದಿನಿಂದ ಹೊಂದಿದ್ದು, ಕ್ರೀಡೆಯಿಂದ ನಿವೃತ್ತಿಯಾದ ಬಳಿಕ ಅದರ ಬಗ್ಗೆ ಯೋಜಿಸಲಾಗುವುದು. ಸದ್ಯಕ್ಕೆ ಕ್ರೀಡೆಯಲ್ಲಿ ಮುಂದುವರಿಯುತ್ತಿದ್ದೇನೆ. ಕ್ರೀಡಾ ಅಕಾಡೆಮಿ ಆರಂಭಿಸಿದ ಬಳಿಕ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಆದ ಕಾರಣ ಕ್ರೀಡಾ ಅಕಾಡೆಮಿ ಮಾಡುವ ಯೋಚನೆ ಸದ್ಯಕ್ಕಿಲ್ಲ ಎಂದರು.
ಮೂರನೇ ಬಾರಿಗೆ ಒಲಿಂಪಿಕ್ನಲ್ಲಿ ಭಾಗವಹಿಸಿದ್ದೇನೆ. ಅದರೆ ಈ ಬಾರಿಯ ಒಲಿಂಪಿಕ್ನಲ್ಲಿ ಫೈನಲ್ಗೆ ಓಡಬೇಕೆಂದು ನಾವು ಯೋಜಿಸಿದ್ದೆವು. ಆದರೆ ಆ ದಿನ ನಮ್ಮದಾಗಲಿಲ್ಲ ಎಂದರು. ಸದ್ಯ ಮುಂದಿನ ಯೋಜನೆಗಳ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ಸದ್ಯ ಒಲಿಂಪಿಕ್ಗೆ ಹೋಗಿ ಬಂದಿದ್ದೇನೆ. ಈಗ ಮನೆಯವರಿಗೆ ಸಮಯ ಕೊಡಬೇಕು ಎಂದು ತಿಳಿಸಿದರು.
ಇತೀಚಿನ ದಿನಗಳಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ತಳಮಟ್ಟದಿಂದ ಗುರುತಿಸುವ ಕಾರ್ಯ ನಡೆಯುತ್ತಿದೆ. ನಮ್ಮ ಸಮಯದಲ್ಲಿ ಆ ರೀತಿಯ ಪ್ರೋತ್ಸಾಹ ಇರಲಿಲ್ಲ. ಮುಂದಿನ ಅಥ್ಲೆಟಿಕ್ಸ್ಗಳಿಂದ ಉತ್ತಮ ನಿರೀಕ್ಷೆಯೂ ಇದೆ ಎಂದರು. 2021ರಲ್ಲಿ ನಿಷೇಧದ ತೂಗುಗತ್ತಿ ಬಂದ ಸಂದರ್ಭದಲ್ಲಿ ನನ್ನ ಕುಟುಂಬದವರು ನನಗೆ ಬೆಂಬಲಕ್ಕೆ ನಿಂತರು. ಸರ್ಕಾರವೇ ಬೆಂಬಲಿಸಬೇಕೆಂದು ಇಲ್ಲ. ಕುಟುಂಬದವರ ಬೆಂಬಲ ಸಿಕ್ಕಿದರೂ ಸಾಕು. ತುಂಬಾ ಕಷ್ಟ ಇತ್ತು. ಅದನ್ನು ನಾನು ಸರಿ ಮಾಡಿದೆ ಎಂದು ಹಿಂದಿನ ಘಟನೆಯನ್ನು ಪೂವಮ್ಮ ನೆನೆದರು.
ಬಳಿಕ ಕುಸ್ತಿಪಟು ವಿನೇಶ್ ಪೊಗಟ್ ಕುರಿತು ಪ್ರತಿಕ್ರಿಯಿಸಿ, ವಿನೇಶ್ಗೆ ಆ ರೀತಿ ಆಗಬಾರದಿತ್ತು, ಇದಕ್ಕೆ ಬೇಸರ ಇದೆ. ಆದ್ರೆ ಕುಸ್ತಿ ಕ್ರೀಡೆಯ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಇಲ್ಲ ಎಂದರು. ನನ್ನ ಕ್ರೀಡಾ ಜೀವನದಲ್ಲಿ ಕುಟುಂಬದ ಸಹಕಾರ ದೊಡ್ಡದಿದೆ. ತಾಲೂಕು ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗಿನ ಕ್ರೀಡೆಗಳಿಗೆ ನನ್ನ ಜೊತೆಗೆ ತಾಯಿ ಬಂದಿದ್ದಾರೆ. ತಂದೆ ಏರ್ ಪೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದಾಗ ಸರಿಯಾದ ಮೈದಾನ ಇಲ್ಲ ಎಂದು ಮಂಗಳೂರು ನಗರಕ್ಕೆ ಮನೆ ಶಿಫ್ಟ್ ಮಾಡಿದ್ದರು. ಮದುವೆಯವರೆಗೆ ಮನೆಯವರ ಸಹಕಾರ ಸಿಕ್ಕಿದೆ. ಮದುವೆ ಬಳಿಕ ಗಂಡನ ಸಹಕಾರ ಸಿಕ್ಕಿದೆ ಎಂದು ಅಥ್ಲೀಟ್ ಪೂವಮ್ಮ ವಿವರಿಸಿದರು.
ಇದನ್ನೂ ಓದಿ: ಕ್ರಿಕೆಟ್ನಲ್ಲಿ ದಾಖಲೆಗಳ ಶಿಖರ ಕಟ್ಟಿರುವ ಧವನ್: ಈ ಐದು ರೆಕಾರ್ಡ್ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ! - Shikhar Dhawan