ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಬ್ಯಾಡ್ಮಿಂಟನ್ ಕ್ರೀಡಾಪಟುಗಳು ನಿರಾಶದಾಯಕ ಪ್ರದರ್ಶನದಿಂದ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಇದರ ನಡುವೆಯೇ ಸುದ್ಧಿಸಂಸ್ಥೆಯೊಂದು ಪ್ಯಾರಿಸ್ ಒಲಿಂಪಿಕ್ಸ್ಗಾಗಿ ಬ್ಯಾಡ್ಮಿಂಟನ್ ಆಟಗಾರರ ತರಬೇತಿಗಾಗಿ ಕೇಂದ್ರ ಸರ್ಕಾರ ಎಷ್ಟು ಖರ್ಚು ಮಾಡಿದೆ ಎಂದು ವರದಿ ಮಾಡಿತ್ತು. ಇದರಲ್ಲಿ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ಅವರಿಗೆ ಕೇಂದ್ರ ತಲಾ 1.5 ಕೋಟಿ ರೂ ವ್ಯಯಿಸಿದೆ ಎಂದು ಹೇಳಲಾಗಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಶ್ವಿನಿ ಪೊನ್ನಪ್ಪ, ಒಲಿಂಪಿಕ್ಸ್ ತಯಾರಿಗಾಗಿ ನಾವು ಯಾವುದೇ ಹಣ ಸ್ವೀಕರಿಸಿಲ್ಲ ಎಂದು ತಿಳಿಸಿ ವರದಿಯನ್ನು ತಳ್ಳಿಹಾಕಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅಶ್ವಿನಿ, 'ನಾವು 1.50 ಕೋಟಿ ಹಣ ಯಾರಿಂದ ಪಡೆದಿದ್ದೇವೆ ಎಂದು ಪ್ರಶ್ನಿಸಿದ್ದಾರೆ. ನಾನು ಯಾವುದೇ ಸಂಸ್ಥೆಯಿಂದಾಗಲಿ ಅಥವಾ ಕೇಂದ್ರ ಕ್ರೀಡಾ ಇಲಾಖೆ, ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಫಿನಿಶ್ ಸ್ಕೀಮ್ನಡಿಯಾಗಲಿ ತರಬೇತಿಗಾಗಿ ಹಣ ಪಡೆದಿಲ್ಲ. ಸತ್ಯಾಂಶ ತಿಳಿಯದೇ ಈ ರೀತಿಯ ಸುದ್ದಿಗಳನ್ನು ಹೇಗೆ ಬರೆಯಲಾಗುತ್ತದೆ? ಕಳೆದ ವರ್ಷ ನವೆಂಬರ್‌ವರೆಗೆ ನನ್ನ ಸ್ವಂತ ಖರ್ಚಿನಿಂದಲೇ ತಯಾರಿ ನಡೆಸಿದ್ದೇನೆ' ಎಂದು ತಿಳಿಸಿದ್ದಾರೆ.
How can an article be written without getting facts right? How can this lie be written? Received 1.5 CR each? From whom? For what ? I haven't received this money.
— Ashwini Ponnappa (@P9Ashwini) August 13, 2024
I was not even part of any organisation or TOPS for funding.https://t.co/l7gb1C36Tf @PTI_News
'ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆಗಳನ್ನು ಪೂರ್ಣಗೊಳಿಸಿದ ನಂತರವೇ ನಮ್ಮನ್ನು ಒಲಿಂಪಿಕ್ಸ್ಗಾಗಿ ಕಳುಹಿಸಿಕೊಡಲಾಗಿದೆ. ಈ ವೇಳೆ ನಮ್ಮ ಡಬಲ್ಸ್ ತಂಡದ ಭಾಗವಾಗಿರುವ ತರಬೇತುದಾರರನ್ನು ಮಾತ್ರ ನಮ್ಮೊಂದಿಗೆ ಕಳುಹಿಸಲು ನಾವು ಕೇಳಿದ್ದೇವೆ, ಆದ್ರೆ ಅದನ್ನೂ ತಿರಸ್ಕರಿಸಲಾಗಿತ್ತು' ಎಂದು ಕಿಡಿಕಾರಿದ್ದಾರೆ.
ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್) ಯೋಜನೆಯಡಿ 13 ರಾಷ್ಟ್ರೀಯ ತರಬೇತಿ ಶಿಬಿರಗಳು ಮತ್ತು 81 ವಿದೇಶಿ ಪ್ರವಾಸಗಳಿಗಾಗಿ ಕೇಂದ್ರ ಧನಸಹಾಯ ಮಾಡಿದೆ ಎಂದು ಸುದ್ದಿಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿತ್ತು. ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮಿಷನ್ ಒಲಿಂಪಿಕ್ಸ್ ಸೆಲ್, ಪ್ಯಾರಿಸ್ ಒಲಿಂಪಿಕ್ಸ್ ಸಿದ್ಧತೆಗಾಗಿ 16 ಕ್ರೀಡೆಗಳಿಗೆ ಒಟ್ಟು 470 ಕೋಟಿ ರೂ. ಖರ್ಚು ಮಾಡಿದೆ.
ಇದರಲ್ಲಿ 72.03 ಕೋಟಿ ರೂ.ವನ್ನು ಬ್ಯಾಡ್ಮಿಂಟನ್ಗಾಗಿ ವಹಿಸಲಾಗಿದೆ. ಈ ಪೈಕಿ ಪಿ.ವಿ.ಸಿಂಧುಗಾಗಿ 3.13 ಕೋಟಿ ರೂ ಖರ್ಚು ಮಾಡಿದರೆ, ಸಾತ್ವಿಕ್-ಚಿರಾಗ್ ಜೋಡಿಗೆ 5.62 ಕೋಟಿ ರೂ, ಪ್ರಣಯ್‌ಗೆ 1.8 ಕೋಟಿ ರೂ., ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊಗೆ 3 ಕೋಟಿ ರೂ, ಲಕ್ಷ್ಯ ಸೇನ್ಗೆ 9.33 ಲಕ್ಷ ರೂ ವ್ಯಯಿಸಲಾಗಿದೆ. ಆದ್ರೂ ಪದಕ ಮಾತ್ರ ಶೂನ್ಯ ಎಂದು ವರದಿ ಮಾಡಿತ್ತು.
ಇದನ್ನೂ ಓದಿ: ಡೋಪಿಂಗ್ ನಿಯಮ ಉಲ್ಲಂಘನೆ: ಪ್ಯಾರಾಲಿಂಪಿಕ್ಸ್ನಿಂದ ಪ್ರಮೋದ್ ಭಗತ್ ಅಮಾನತು - Pramod Bhagat Suspended