ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರು ರಾಜ್‌ಕೋಟ್‌ನಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯದಲ್ಲಿ ದಾಖಲೆ ಬರೆಯಲಿದ್ದಾರೆ. ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳು ಈಗಾಗಲೇ ಪೂರ್ಣಗೊಂಡಿವೆ. ಇತ್ತಂಡಗಳು 1-1ರಲ್ಲಿ ಸಮಬಲ ಸಾಧಿಸಿವೆ.
ಮೂರನೇ ಟೆಸ್ಟ್ ಫೆಬ್ರವರಿ 15ರಿಂದ ನಡೆಯಲಿದೆ. ಈ ಪಂದ್ಯದಲ್ಲಿ ಇಬ್ಬರು ಆಟಗಾರರು ಗಳಿಸುವ ಪ್ರತಿ ವಿಕೆಟ್ಗಳ ಮೇಲೆ ಹೊಸ ದಾಖಲೆ ನಿರ್ಮಾಣವಾಗಲಿದೆ. 500 ವಿಕೆಟ್ ಸಾಧನೆಗೆ ಅಶ್ವಿನ್ ಅವರಿಗೆ ಬೇಕಿರುವುದು ಕೇವಲ 1 ವಿಕೆಟ್. ಈ ಮೂಲಕ ಅವರು ಇಷ್ಟು ವಿಕೆಟ್ ಉರುಳಿಸಿದ ಎರಡನೇ ಭಾರತೀಯ ಬೌಲರ್ ಆಗಲಿದ್ದಾರೆ.
ಇದೇ ಪಂದ್ಯದಲ್ಲಿ ಜೇಮ್ಸ್ ಆ್ಯಂಡರ್ಸನ್ ಐದು ವಿಕೆಟ್‌ಗಳನ್ನು ಪಡೆದರೆ ಟೆಸ್ಟ್ ವೃತ್ತಿಜೀವನದಲ್ಲಿ 700 ವಿಕೆಟ್ ತಲುಪಿದ ಅಗ್ರ ಬೌಲರ್ ಆಗಿ ಹೊರಹೊಮ್ಮುವರು. ಹಾಗಾಗಿ ಈ ಟೆಸ್ಟ್ ಪಂದ್ಯ ಅಶ್ವಿನ್ ಮತ್ತು ಜೇಮ್ಸ್ ಆ್ಯಂಡರ್ಸನ್ ಇಬ್ಬರಿಗೂ ಅತ್ಯಂತ ಮಹತ್ವದ್ದು.
ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ ಅಶ್ವಿನ್ 499 ವಿಕೆಟ್ ಸಾಧನೆ ಮಾಡಿದ್ದಾರೆ. 1,236 ಇನಿಂಗ್ಸ್ ಮೂಲಕ 619 ವಿಕೆಟ್‌ಗಳನ್ನು ಪಡೆದಿರುವ ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದಾರೆ. ಸದ್ಯ ಹಾಲಿ ಆಟಗಾರರ ಪೈಕಿ ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ನಾಥನ್ ಲಯಾನ್ ಅಶ್ವಿನ್‌ಗಿಂತ ಮುಂದಿದ್ದಾರೆ. ನಾಥನ್ 238 ಇನಿಂಗ್ಸ್‌ಗಳಲ್ಲಿ 517 ವಿಕೆಟ್ ಪಡೆದಿದ್ದರೆ, ಅಶ್ವಿನ್ 97 ಪಂದ್ಯಗಳಲ್ಲಿ 499 ವಿಕೆಟ್ ಪಡೆದಿದ್ದಾರೆ.
ಇನ್ನು ಜೇಮ್ಸ್ ಆ್ಯಂಡರ್ಸನ್ ಇದುವರೆಗೆ 184 ಟೆಸ್ಟ್ ಪಂದ್ಯಗಳಲ್ಲಿ 695 ವಿಕೆಟ್ ಪಡೆದಿದ್ದಾರೆ. 7/42 ಇವರ ಅತ್ಯುತ್ತಮ ಬೌಲಿಂಗ್ ಸಾಧನೆ. 604 ವಿಕೆಟ್ ಪಡೆದಿರುವ ಇಂಗ್ಲೆಂಡ್ನ ಮತ್ತೊಬ್ಬ ವೇಗಿ ಸ್ಟುವರ್ಟ್ ಬ್ರಾಡ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಈ ಪಟ್ಟಿಯಲ್ಲಿ 133 ಪಂದ್ಯಗಳಲ್ಲಿ ಒಟ್ಟು 800 ವಿಕೆಟ್ ಉರುಳಿಸಿರುವ ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನದಲ್ಲಿದ್ದಾರೆ. 9/51 ಇವರ ಅತ್ಯುತ್ತಮ ಬೌಲಿಂಗ್ ದಾಳಿ. ಆಸ್ಟ್ರೇಲಿಯಾದ ಮಾಜಿ ಆಟಗಾರ ದಿ.ಶೇನ್ ವಾರ್ನ್ 708 ವಿಕೆಟ್ ಉರುಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. 8/71 ಇವರ ಅತ್ಯುತ್ತಮ ಬೌಲಿಂಗ್ ದಾಳಿ ಆಗಿದೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಪಡೆದ ಆಟಗಾರರು ಯಾರೆಲ್ಲಾ?