ಹೈದರಾಬಾದ್: ಐಪಿಎಲ್ 2025ಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ದೀಪಾವಳಿ ವೇಳೆ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳಲ್ಲಿ ಉಳಿಸಿಕೊಂಡಿರುವ ಆಟಗಾರರ ರಿಟೈನ್ ಪಟ್ಟಿ ಬಿಡುಗಡೆ ಮಾಡಿವೆ. ಇದರ ನಡುವೆ ಸ್ಟಾರ್ ಆಲ್ರೌಂಡರ್ ಒಬ್ಬರು ಐಪಿಎಲ್ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ.
ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ 2025ರ ಐಪಿಎಲ್ ಸೀಸನ್ ಮೆಗಾ ಹರಾಜಿನಿಂದ ಹಿಂದೆ ಸರಿಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಹರಾಜಿನಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಮುಂಬರುವ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳ ಮೇಲೆ ಕೇಂದ್ರೀಕರಿಸಲು ಅವರು 2025ರ ಐಪಿಎಲ್ ಋತುವಿನ ಮೆಗಾ ಹರಾಜಿನಿಂದ ಹೊರಗುಳಿಯಲು ಯೋಜಿಸುತ್ತಿದ್ದಾರೆ. ಬೆನ್ ಸ್ಟೋಕ್ಸ್ ಕೊನೆಯ ಬಾರಿಗೆ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಈ ಆವೃತ್ತಿಯಲ್ಲಿ ಕೇವಲ ಎರಡು ಪಂದ್ಯವಾಡಿದ್ದ ಸ್ಟೋಕ್ಸ್, ಗಾಯದ ಸಮಸ್ಯೆಯಿಂದಾಗಿ ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ. ನಂತರ ಫಿಟ್ನೆಸ್ ಮತ್ತು ಕೆಲಸದ ಕಾರಣ 2024ರ ಐಪಿಎಲ್‌ನಲ್ಲಿ ಪಾಲ್ಗೊಂಡಿರಲಿಲ್ಲ.
ಮುಂದಿನ ವರ್ಷ ಜೂನ್‌ನಲ್ಲಿ ಭಾರತ 5 ಟೆಸ್ಟ್‌ಗಳ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯನ್ನು ಪೂರ್ಣಗೊಳಿಸಿದ ನಂತರ, ಇಂಗ್ಲೆಂಡ್ ತಂಡ 5 ಪಂದ್ಯಗಳ ಆ್ಯಶಸ್ ಟೆಸ್ಟ್ ಸರಣಿ ಆಡಲು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದೆ.
ಬೆನ್ ಸ್ಟೋಕ್ಸ್ ಐಪಿಎಲ್ ದಾಖಲೆ: ಸ್ಟೋಕ್ಸ್ ಇದುವರೆಗೂ ಒಟ್ಟು 45 ಐಪಿಎಲ್ ಪಂದ್ಯಗಳನ್ನು ಆಡಿದ್ದು 935 ರನ್ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಹಾಗು ಎರಡು ಶತಕಗಳು ಸೇರಿವೆ. 107 ಹೈ ಸ್ಕೋರ್ ಆಗಿದೆ.
ಬೌಲಿಂಗ್ ದಾಖಲೆ: ಐಪಿಎಲ್‌ನಲ್ಲಿ 38 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಸ್ಟೋಕ್ಸ್, 28 ವಿಕೆಟ್ ಪಡೆದಿದ್ದಾರೆ. 15ಕ್ಕೆ 3 ಇವರ ಅತ್ಯುತ್ತಮ ಬೌಲಿಂಗ್ ಆಗಿದೆ.
ಕೊನೆಯ ಸೀಸನ್: 2023 ಹರಾಜಿನಲ್ಲಿ ಬೆನ್ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ಕಿಂಗ್ಸ್ 16.25 ಕೋಟಿ ರೂ.ಗೆ ಖರೀದಿಸಿತ್ತು. ಈ ಬಾರಿಯೂ ಉತ್ತಮ ಮೊತ್ತಕ್ಕೆ ಬಿಕರಿಯಾಗುತ್ತಾರೆ ಎಂದೇ ಹೇಳಲಾಗಿತ್ತು.
ಇದನ್ನೂ ಓದಿ: ಆರ್ಸಿಬಿ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ