Cricket Cap Auction: ಕ್ರಿಕೆಟಿಗರಿಗೆ ಸಂಬಂಧಿಸಿದ ಜೆರ್ಸಿ, ಹೆಲ್ಮೆಟ್, ಬ್ಯಾಟ್, ಕ್ಯಾಪ್ ಇತ್ಯಾದಿಗಳನ್ನು ಹರಾಜು ಹಾಕುವುದನ್ನು ಆಗಾಗ್ಗೆ ನೋಡುತ್ತೇವೆ. ಹೀಗೆ ಹರಾಜಿಗಿಟ್ಟ ವಸ್ತುಗಳನ್ನು ಅವರ ಅಭಿಮಾನಿಗಳು ಕೋಟಿ ಬೆಲೆಗೆ ಖರೀದಿಸುತ್ತಾರೆ. ಇದೀಗ ಅಂಥದ್ದೇ ಬೆಳವಣಿಗೆಯೊಂದು ನಡೆದಿದೆ. ಆಸ್ಟ್ರೇಲಿಯಾದ ಪ್ರಸಿದ್ಧ ಬ್ಯಾಟರ್ ಸರ್ ಡಾನ್ ಬ್ಯಾಡ್ಮನ್ ಧರಿಸಿದ್ದ 80 ವರ್ಷ ಹಳೆಯ ಕ್ಯಾಪ್ ಸಿಡ್ನಿಯಲ್ಲಿ ಭಾರೀ ಮೊತ್ತಕ್ಕೆ ಇತ್ತೀಚೆಗೆ ಹರಾಜಾಯಿತು.
ಭಾರತ ಕ್ರಿಕೆಟ್ ತಂಡ 1947-48ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿತ್ತು. ಸ್ವಾತಂತ್ರ ಸಿಕ್ಕ ಬಳಿಕ ವಿದೇಶಿ ನೆಲದಲ್ಲಿ ಭಾರತಕ್ಕಿದು ಮೊದಲ ಟೆಸ್ಟ್ ಸರಣಿಯಾಗಿತ್ತು. ಉಭಯ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್ ಪಂದ್ಯಗಳು ನಡೆದಿದ್ದವು. ಇದರಲ್ಲಿ ಆಸ್ಟ್ರೇಲಿಯಾ 4-0 ಅಂತರದಿಂದ ಭಾರತ ತಂಡವನ್ನು ಮಣಿಸಿ ಸರಣಿ ವಶಪಡಿಸಿಕೊಂಡಿತ್ತು. ಈ ಸರಣಿಯಲ್ಲಿ ಡಾನ್ ಬ್ರಾಡ್ಮನ್ 178.75ರ ಸರಾಸರಿಯಲ್ಲಿ 715 ರನ್ ಗಳಿಸಿದ್ದರು. ಇದರಲ್ಲಿ ಒಂದು ದ್ವಿಶತಕ, 4 ಶತಕ ಮತ್ತು 1 ಅರ್ಧಶತಕ ಸೇರಿತ್ತು.
ಅಲ್ಲದೇ ಬ್ರಾಡ್ಮನ್ ತಮ್ಮ ವೃತ್ತಿಜೀವನದಲ್ಲಿ ಭಾರತದ ವಿರುದ್ಧ ಆಡಿದ್ದ ಏಕೈಕ ಸರಣಿಯೂ ಇದಾಗಿತ್ತು. ಸರಣಿಯಲ್ಲಿ ಬ್ರಾಡ್ಮನ್ ಧರಿಸಿದ್ದ 'ಬ್ಯಾಗಿ ಗ್ರೀನ್' ಕ್ಯಾಪ್ ಇದೀಗ ಹರಾಜಾಗಿದೆ. ಹರಾಜಿನಲ್ಲಿ ಇದಕ್ಕೆ 2 ಲಕ್ಷ 50 ಸಾವಿರ ಡಾಲರ್ (2.11 ಕೋಟಿ ರೂ.) ಕೊಟ್ಟು ಖರೀದಿ ಮಾಡಲಾಗಿದೆ. ಟೆಸ್ಟ್ ಕ್ರಿಕೆಟ್ ವೇಳೆ ಆಸ್ಟ್ರೇಲಿಯಾದ ಕ್ರಿಕೆಟಿಗರು ಈ ರೀತಿಯ ಹಸಿರು ಬಣ್ಣದ ಬ್ಯಾಗಿ ಗ್ರೀನ್ಸ್ ಕ್ಯಾಪ್ ಬಳಸುತ್ತಾರೆ.
Sir Don Bradman's baggy green cap has been sold at an auction in Sydney for £245,000 🏏
— Sky Sports Cricket (@SkyCricket) December 3, 2024
The Aussie cricket legend wore the cap during the 1947-48 home Test series against India, when he scored his 100th ton. pic.twitter.com/OEEMMhfcsx
ಡಾನ್ ಬ್ರಾಡ್ಮನ್ ತಮ್ಮ ಸುದೀರ್ಘ ಟೆಸ್ಟ್ ವೃತ್ತಿಜೀವನದಲ್ಲಿ ಈ ಕ್ಯಾಪ್ ಧರಿಸಿದ್ದರು. ಇಪ್ಪತ್ತು ವರ್ಷಗಳ ವೃತ್ತಿಜೀವನದಲ್ಲಿ 52 ಟೆಸ್ಟ್ ಪಂದ್ಯಗಳನ್ನಾಡಿದ್ದ ಇವರು, 99.94ರ ಸರಾಸರಿಯಲ್ಲಿ 6,996 ರನ್ ಗಳಿಸಿದ್ದಾರೆ. 12 ದ್ವಿಶತಕ, 29 ಶತಕ ಮತ್ತು 13 ಅರ್ಧಶತಕಗಳು ಇದರಲ್ಲಿ ಸೇರಿವೆ. 2001ರಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಇದನ್ನೂ ಓದಿ: ₹16 ಕೋಟಿಗೆ ರಿಟೇನ್ ಆದ, IPL ಕಪ್ ಗೆದ್ದಿದ್ದ ನಾಯಕ ಮೊದಲ ಪಂದ್ಯದಿಂದಲೇ BAN!