ನವದೆಹಲಿ: ಈ ವರ್ಷ ಭಾರತ 17 ವರ್ಷಗಳ ಬಳಿಕ ವಿಶ್ವಕಪ್ ಗೆದ್ದಿರುವ ಖುಷಿಯಲ್ಲಿದ್ದರೆ ಮತ್ತೊಂದೆಡೆ ಭಾರತದ ಹಲವು ಸ್ಟಾರ್ ಕ್ರಿಕೆಟಿಗರು ಕೂಡ ಇದೇ ವರ್ಷ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಶಿಖರ್ ಧವನ್ ಸೇರಿದಂತೆ ಈ ವರ್ಷ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತೀಯ ಕ್ರಿಕೆಟಿಗರ ಯಾರು ಎಂಬುದರ ಕುರಿತು ಈ ಸುದ್ದಿಯಲ್ಲಿ ತಿಳಿಯಿರಿ.
- ಶಿಖರ್ ಧವನ್: ಭಾರತದ ಸ್ಟಾರ್ ಓಪನಿಂಗ್ ಬ್ಯಾಟ್ಸ್‌ಮನ್ ಶಿಖರ್ ಧವನ್ 24 ಆಗಸ್ಟ್ 2024 ರಂದು ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಟೆಸ್ಟ್, ಏಕದಿನ ಮತ್ತು T20 ಸೇರಿದಂತೆ ಎಲ್ಲ ಮಾದರಿಗಳಲ್ಲಿ ಅವರು ಭಾರತಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ದೇಶಕ್ಕಾಗಿ ವಿಶ್ವಕಪ್ ಸೇರಿದಂತೆ ಹಲವು ಐಸಿಸಿ ಟೂರ್ನಿಗಳಲ್ಲೂ ಭಾಗವಹಿಸಿದ್ದಾರೆ.
- ದಿನೇಶ್ ಕಾರ್ತಿಕ್: ಭಾರತ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಕೂಡ ಈ ವರ್ಷ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಾರ್ತಿಕ್ ಜೂನ್ 1 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಕಾರ್ತಿಕ್ ಅನೇಕ ಸಂದರ್ಭಗಳಲ್ಲಿ ಭಾರತಕ್ಕಾಗಿ ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಅವರು 26 ಟೆಸ್ಟ್ ಮತ್ತು 92 ಏಕದಿನ ಪಂದ್ಯಗಳೊಂದಿಗೆ 60 ಟಿ20 ಪಂದ್ಯಗಳನ್ನು ಆಡಿದ್ದಾರೆ.
- ಕೇದಾರ್ ಜಾಧವ್: ಟೀಂ ಇಂಡಿಯಾ ಪರ ಫಿನಿಶರ್ ಪಾತ್ರ ವಹಿಸಿದ್ದ ಕೇದಾರ್ ಜಾಧವ್ ಸಹ ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಕೇದಾರ್ ಜೂನ್ 3 ರಂದು ವಿದಾಯ ಹೇಳಿದರು. ಜಾಧವ್ ಭಾರತದ ಪರ 73 ಏಕದಿನ ಮತ್ತು 9 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಇವರು ಏಕದಿನದಲ್ಲಿ 1389 ರನ್ ಮತ್ತು ಟಿ20ಯಲ್ಲಿ 122 ರನ್ ಗಳಿಸಿದ್ದಾರೆ. ಇದಲ್ಲದೇ, ಏಕದಿನ ಕ್ರಿಕೆಟ್‌ನಲ್ಲಿ ಅವರ 27 ವಿಕೆಟ್‌ಗಳನ್ನು ಪಡೆದಿದ್ದಾರೆ.
- ವರುಣ್ ಆರೋನ್: ವೇಗದ ಬೌಲರ್ ವರುಣ್ ಆರೋನ್ ಅವರು ಇದೇ ವರ್ಷ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅರೋನ್ ಫೆಬ್ರವರಿಯಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕ್ರಿಕೆಟ್ ವೇಳೆ ಹಲವಾರು ಬಾರಿ ಗಂಭೀರವಾದ ಗಾಯಗಳಿಗೆ ತುತ್ತಾಗಿದ್ದ ಇವರು ದೀರ್ಘಕಾಲದ ವರೆಗೆ ತಂಡದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಲಿಲ್ಲ. ವರುಣ್ ಭಾರತದ ಪರ 9 ಟೆಸ್ಟ್ ಪಂದ್ಯಗಳನ್ನ ಆಡಿದ್ದು, ಇದರಲ್ಲಿ 18 ವಿಕೆಟ್ ಹಾಗೂ 9 ಏಕದಿನ ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ.
- ಸೌರಭ್ ತಿವಾರಿ: ಐಪಿಎಲ್‌ನಲ್ಲಿ ಗಮನ ಸೆಳೆದಿದ್ದ ಸೌರಭ್ ತಿವಾರಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಕಾಣಿಸಿಕೊಂಡಿದ್ದರು. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ. ಭಾರತ ಪರ 3 ಏಕದಿನ ಪಂದ್ಯಗಳನ್ನು ಆಡಿದ ತಿವಾರಿ 49 ರನ್ ಗಳಿಸಿದ್ದರು. ಅಕ್ಟೋಬರ್ 2010 ರಲ್ಲಿ ವಿಶಾಖಪಟ್ಟಣಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಏಕದಿನ ಚೊಚ್ಚಲ ಪಂದ್ಯವನ್ನು ಆಡಿದ್ದರು. ಈ ವರ್ಷ ಫೆಬ್ರವರಿ 12 ರಂದು ಅವರು ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು.
ಇದರೊಂದಿಗೆ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಟಿ 20 ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ರೋಹಿತ್ ಮತ್ತು ಕೊಹ್ಲಿ ಜೂನ್ 29 ರಂದು ಚುಟುಕು ಕ್ರಿಕೆಟ್‌ಗೆ ವಿದಾಯ ಘೋಷಿಸಿದರೆ, ರವೀಂದ್ರ ಜಡೇಜಾ ಜೂನ್ 30 ರಂದು ನಿವೃತ್ತಿ ಘೋಷಿಸಿದರು. ಭಾರತ ಈ ವರ್ಷ T20 ವಿಶ್ವಕಪ್ ಗೆಲ್ಲುತ್ತಿದ್ದಂತೆ ಈ ಮೂವರು ವಿದಾಯ ಹೇಳಿದ್ದಾರೆ.