ವೇದವ್ಯಾಸರು ರಚಿಸಿದ ಸ್ಕಂದ ಪುರಾಣದ ಪ್ರಕಾರ, ವೇದಗಳಲ್ಲಿ ನಾಗಪೂಜೆಯ ಉಲ್ಲೇಖವಿಲ್ಲದಿದ್ದರೂ, ಸಂಹಿತೆ ಮತ್ತು ಬ್ರಾಹ್ಮಣಗಳಲ್ಲಿ ನಾಗಪೂಜೆ ಪ್ರಸ್ತಾಪ ಇದೆ. ನಾಗರಹಾವನ್ನು ನಾಗ ರಾಜ ಮತ್ತು ನಾಗ ದೇವತೆ ಎಂದು ಪೂಜಿಸಲಾಗುತ್ತದೆ. ಮುಖ್ಯವಾಗಿ ದೀಪಾವಳಿಯ ಅಮಾವಾಸ್ಯೆಯ ನಂತರ ಬರುವ ಕಾರ್ತಿಕ ಶುದ್ಧ ಚಥುರ್ತಿಯ ದಿನದಂದು ನಾಗಪೂಜೆ ಮಾಡುವುದು ತಲತಲಾಂತರಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ಏನಿದು ಸಂಪ್ರದಾಯ: ಪ್ರಾಣಿಗಳನ್ನು ಪೂಜಿಸುವುದು ಏಕೆ ಸಂಪ್ರದಾಯವಾಯಿತೆಂದರೆ, ಭಾರತೀಯ ಸನಾತನ ಸಾಂಪ್ರದಾಯಿಕ ನಂಬಿಕೆ ಪ್ರಕಾರ ಎಲ್ಲಾ ಜೀವಿಗಳಲ್ಲಿ ಈಶ್ವರ ಇದ್ದಾನೆ. ಪ್ರಕೃತಿಯ ಆರಾಧನೆಯ ಭಾಗವಾಗಿ ಸರ್ಪಗಳನ್ನೂ ಕೂಡ ಪೂಜಿಸುವುದು ಸಂಪ್ರದಾಯವಾಗಿ ಬದಲಾಯಿತು. ಕಾರ್ತಿಕ ಶುದ್ಧ ಚವಿತಿ(ಚಥುರ್ತಿ)ಯಂದು ವಿಶೇಷವಾಗಿ ಆಚರಿಸಲಾಗುವ ನಾಗ ಚತುರ್ಥಿ ಅಥವಾ ನಾಗರ ಚೌತಿ ದಕ್ಷಿಣ ಭಾಋತದ ರಾಜ್ಯಗಳಲ್ಲಿ ದೊಡ್ಡ ಹಬ್ಬವಾಗಿದೆ.
ಕುಜ ದೋಷ ಹೋಗಲಾಡಿಸುವ ನಾಗರ ಚೌತಿ: ಕಾರ್ತಿಕ ಶುದ್ಧ ಚಥುರ್ತಿಯ ದಿನದಂದು ನಾಗರ ಚೌತಿ ಹಬ್ಬದಂದು ನಾಗದೇವತೆಗಳನ್ನು ಪೂಜಿಸುವುದರಿಂದ ಕುಜ ದೋಷ ಸೇರಿದಂತೆ ಕಾಳಸರ್ಪ ದೋಷ ನಿವಾರಣೆಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಪಂಚಾಂಗದ ಪ್ರಕಾರ, ಕಾರ್ತಿಕ ಶುದ್ಧ ಚಥುರ್ತಿಯಾದ ನ.5 ಅಂದರೆ ಇಂದು ನಾಗರ ಚೌತಿ ಹಬ್ಬ ಆಚರಿಸಬೇಕೆಂದು ತಿಳಿಸುತ್ತದೆ. ಮಂಗಳವಾರ ಮುಂಜಾನೆ 5 ರಿಂದ 9ರ ವರೆಗೆ ಪೂಜೆಗೆ ಶುಭ ಸಮಯವಾಗಿದೆ. ಮಂಗಳವಾರ ನಾಗರ ಚೌತಿ ಬರುತ್ತಿರುವುದು ವಿಶೇಷ ಎನ್ನುತ್ತಾರೆ ಪಂಡಿತರು. ನಾಗರ ಚೌತಿ ದಿನದಂದು ದೇವಸ್ಥಾನಗಳಲ್ಲಿ ಸುಬ್ರಹ್ಮಣ್ಯನ ರೂಪವಾದ ನಾಗರಮೂರ್ತಿಗೆ ಸಾಧ್ಯವಾದರೆ ಕ್ಷೀರಾಭಿಷೇಕ ಮಾಡುವುದು ಒಳ್ಳೆಯದು.
ಹುತ್ತಕ್ಕೆ ಹಾಲೆರೆಯುವ ಪದ್ಧತಿ ಬಂದಿದ್ದೇಕೆ: ನಾಗರ ಚೌತಿ ವಿಶೇಷತೆ ಹುತ್ತಕ್ಕೆ ಹಾಲೆರೆಯುವುದರಲ್ಲಿದೆ. ಹುತ್ತಕ್ಕೆ ಹಾಲೆರೆಯುವ ಆಚರಣೆ ಅನಾದಿ ಕಾಲದ ಸಂಪ್ರದಾಯವಾಗಿದೆ. ಚೌತಿಯಂದು ಸರ್ಪಗಳನ್ನು ಪೂಜಿಸಿದರೆ ವೈವಾಹಿಕ ಜೀವನ, ಸರ್ವರೋಗ ಸೇರಿದಂತೆ ಗರ್ಭದೋಷ ನಿವಾರಣೆಯಾಗಿ ಆರೋಗ್ಯವಂತರಾಗುತ್ತಾರೆಂಬುದು ಭಕ್ತರ ನಂಬಿಕೆ.
ಪುರಾಣಗಳಲ್ಲಿ ನಾಗರ ಚೌತಿ ಉಲ್ಲೇಖ: ನಮ್ಮ ಪುರಾಣಗಳಲ್ಲಿ ನಾಗರ ಚೌತಿ ಬಗ್ಗೆ ಅನೇಕ ಕಥೆಗಳಿವೆ. ದೇಶಾದ್ಯಂತ ಅನೇಕ ದೇವಾಲಯಗಳಲ್ಲಿ ನಾಗೇಂದ್ರನ ವಿಗ್ರಹಗಳು ಕಂಡುಬರುತ್ತವೆ. ಈ ನಾಗರ ಚೌತಿಯಂದು ನಾಗೇಂದ್ರನು ಶಿವನಿಗೆ ವಾಸುಕಿಯಾಗಿ ಮತ್ತು ವಿಷ್ಣುವಿನ ಆದಿಶೇಷನಾಗಿದ್ದಾನೆ. ಹಾಗಾಗಿ ಈ ಚೌತಿಯಂದು ಭಕ್ತರು ಪೂಜೆ ಮತ್ತು ನೈವೇದ್ಯಗಳನ್ನು ಅರ್ಪಿಸುತ್ತಾರೆ.
ಹೀಗೆ ಮಾಡುವುದರಿಂದ ಎಲ್ಲಾ ಕಾಯಿಲೆಗಳು ದೂರವಾಗುತ್ತವೆ ಮತ್ತು ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಸುಬ್ರಹ್ಮಣ್ಯ ಸ್ವಾಮಿಯು ಕುಜ ದೋಷ ಮತ್ತು ಕಾಳಸರ್ಪ ದೋಷಕ್ಕೆ ಆದಿದೇವರಾಗಿರುವುದರಿಂದ ಹುತ್ತಕ್ಕೆ ಪೂಜೆ ಮಾಡಿದರೆ ದೋಷಗಳು ನಿವಾರಣೆಯಾಗುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ.
ನಾಗರ ಚೌತಿ ಉಪವಾಸ ಮಾಡುವುದು ಹೇಗೆ: ನಾಗರ ಚೌತಿ ಮುಖ್ಯವಾಗಿ ಉಪವಾಸದ ಹಬ್ಬ. ಈ ದಿನ, ಭಕ್ತರು ಉಪವಾಸ ಮಾಡುತ್ತಾರೆ ಮತ್ತು ಬೆಳಗ್ಗೆ ಹುತ್ತಕ್ಕೆ ಹಾಲೆರೆಯುತ್ತಾರೆ. ನಾಗ ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ ಮತ್ತು ನಂತರ ಮನೆಗೆ ಹಿಂದಿರುಗಿ ಇಡೀ ದಿನ ಉಪವಾಸ ಮಾಡುತ್ತಾರೆ. ವಿಶೇಷವಾಗಿ ಈ ದಿನ ಬೇಯಿಸಿದ ಮತ್ತು ಬಿಸಿಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಹಸಿ ತರಕಾರಿಗಳು, ಬಿಸಿ ಮಾಡದ ಹಾಲು, ಹಣ್ಣುಗಳು ಮತ್ತು ಹಣ್ಣಿನ ರಸವನ್ನು ಮಾತ್ರ ಸೇವಿಸಬೇಕು.
ನಾಗರ ಚೌತಿ ದಿನ ಪೂರ್ತಿ ಉಪವಾಸ ಮಾಡಿ ಮರು ದಿನ ಮುಂಜಾನೆಯೇ ಸ್ನಾನ ಮಾಡಿ ಮತ್ತೆ ಹುತ್ತಕ್ಕೆ ಹಾಲೆರೆದು ಮನೆಗೆ ಬಂದು ಉಪವಾಸ ಮುಗಿಸಬೇಕು. ಕೆಲ ಭಕ್ತರು ಹುತ್ತದ ಮಣ್ಣನ್ನು ಮನೆಗೆ ಪ್ರಸಾದವಾಗಿ ತರುತ್ತಾರೆ. ಈ ಮಣ್ಣನ್ನು ಹಣೆಯ ಮೇಲೆ ವಿಭೂತಿಯಂತೆ ಹಚ್ಚಿಕೊಳ್ಳುವುದರಿಂದ ಗ್ರಹದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ಪೂಜೆಗಳು ಮತ್ತು ವ್ರತಗಳು ನಮ್ಮ ಸಂಪ್ರದಾಯದ ಭಾಗವಾಗಿವೆ. ನಾವೆಲ್ಲರೂ ಇವುಗಳನ್ನು ತಪ್ಪದೆ ಅನುಸರಿಸಬೇಕು. ಆದರೆ ಇಲ್ಲಿ ಒಂದು ವಿಷಯವನ್ನು ನೆನಪಿನಲ್ಲಿಡಬೇಕು. ಅದೇನೆಂದರೆ, ನಾವು ವಿಜ್ಞಾನದ ಪ್ರಕಾರ ನಾವು ಹುತ್ತಕ್ಕೆ ಹಾಲೆರೆಯಬಾರದು ಏಕೆಂದರೆ ಹಾವಿಗೆ ಹಾಲನ್ನು ಕುಡಿದು ಜೀರ್ಣಿಸಿಕೊಳ್ಳುವ ಶಕ್ತಿ ಇಲ್ಲ. ಹೀಗಾಗಿ ಹುತ್ತದ ಬಳಿ ಮಣ್ಣಿನ ಪಾತ್ರೆ ಇಟ್ಟು ಅದರಲ್ಲಿ ಹಾಲು ಸುರಿಯಬೇಕು. ದೇವಾಲಯಗಳಲ್ಲಿನ ನಾಗಮೂರ್ತಿಗಳಿಗೆ ಹಾಲಿನ ಅಭಿಷೇಕ ಮಾಡಬಹುದು.
ತಿರುಮಲದಲ್ಲಿ ನಾಗರ ಚೌತಿ: ಪ್ರಸಿದ್ಧ ಪುಣ್ಯಕ್ಷೇತ್ರವಾದ ತಿರುಮಲದಲ್ಲಿ ಶ್ರೀ ವೆಂಕಟೇಶ್ವರಸ್ವಾಮಿಯನ್ನು ಈ ದಿನ ಶೇಷ ವಾಹನದ ಮೇಲೆ ಮೆರವಣಿಗೆ ಮಾಡಲಾಗುತ್ತದೆ.
ನಾಗರ ಚೌತಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಮೂಲಕ ಸುಬ್ರಹ್ಮಣ್ಯ ಸ್ವಾಮಿಯ ಕೃಪೆಗೆ ಪಾತ್ರರಾಗೋಣ.
ಇದನ್ನೂ ಓದಿ: ಕಾರ್ತಿಕ ಮಾಸದಲ್ಲಿ "ದೀಪ ದಾನ"; ಇದರಿಂದ ಸಿಗುವ ಲಾಭಗಳೇನು?