ಕಳೆದ ಕೆಲ ತಿಂಗಳುಗಳಿಂದ ಜಮ್ಮು ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ಕಳವಳವನ್ನುಂಟು ಮಾಡಿದೆ. ಭಯೋತ್ಪಾದಕರ ದಾಳಿಗಳಿಂದ ಯೋಧರು ಸಾವಿಗೀಡಾಗುವುದು ಹೆಚ್ಚಾಗುತ್ತಿದೆ. ಇದರಿಂದ ರಾಜಕೀಯ ವಲಯ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಸರ್ಕಾರ ಹಾಗೂ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಮಟ್ಟ ಹಾಕುವ ಒತ್ತಡದಲ್ಲಿ ಸಿಲುಕಿವೆ.
ಇದೇ ಸಮಯದಲ್ಲಿ ಕಾಶ್ಮೀರ ಕಣಿವೆಯಲ್ಲಿ ಉಗ್ರ ದಾಳಿಗಳು ಕಡಿಮೆ ಆಗಿರುವುದು ಗಮನಾರ್ಹ. ಆದರೆ, ಹಾಗಂತ ಕಣಿವೆಯಲ್ಲಿ ಭಯೋತ್ಪಾದನೆ ಸಂಪೂರ್ಣವಾಗಿ ನಿರ್ನಾಮವಾಗಿದೆ ಎಂದರ್ಥವಲ್ಲ, ಕನಿಷ್ಠ ಅದನ್ನು ತೀರಾ ಕಡಿಮೆ ಮಟ್ಟದಲ್ಲಿ ನಿಯಂತ್ರಿಸಲಾಗಿರುವುದು ವಾಸ್ತವ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಗೆ ದೊಡ್ಡ ಮಟ್ಟದ ಏಟು ಕೊಡದ ಹೊರತು ಅದು ಕಡಿಮೆಯಾಗಲಾರದು. ಇನ್ನು ಎರಡೂ ದೇಶಗಳ ಮಧ್ಯೆ ಈ ವಿಷಯದಲ್ಲಿ ಯಾವುದೇ ಸಾಮಾನ್ಯ ಸಹಮತವಿಲ್ಲದ ಕಾರಣದಿಂದ ಮಾತುಕತೆಗಳು ಕೂಡ ಯಾವುದೇ ಪ್ರಯೋಜನಕ್ಕೆ ಬರಲಾರವು.
ಭಯೋತ್ಪಾದನೆ ಹೆಚ್ಚಿನ ಭದ್ರತೆ ಇರುವ ಪ್ರದೇಶಗಳಿಂದ ಕಡಿಮೆ ಭದ್ರತೆ ಹೊಂದಿರುವ ಪ್ರದೇಶಗಳಿಗೆ ಚಲಿಸುತ್ತದೆ. ಇದು ನೈಸರ್ಗಿಕ ಪ್ರಕ್ರಿಯೆ ಮತ್ತು ಜಮ್ಮು ವಲಯದಲ್ಲಿ ಹೆಚ್ಚಿದ ಭಯೋತ್ಪಾದನೆಗೆ ಇದೂ ಒಂದು ಕಾರಣವಾಗಿದೆ. ಅಲ್ಲದೇ ಭಯೋತ್ಪಾದಕರು ತಮಗೆ ಗರಿಷ್ಠ ಅನುಕೂಲ ನೀಡುವ ಭೂಪ್ರದೇಶವನ್ನು ಸಹ ಆಯ್ಕೆ ಮಾಡುತ್ತಾರೆ.
ಜಮ್ಮು ವಿಷಯದಲ್ಲಿ ನೋಡುವುದಾದರೆ - ಅಲ್ಲಿನ ದಟ್ಟ ಕಾಡುಗಳು, ಅಡಗುತಾಣಗಳಾಗಿ ಬಳಸಬಹುದಾದ ಗುಹೆಗಳು ಮತ್ತು ಪಾಕಿಸ್ತಾನದ ಗಡಿ ಹತ್ತಿರವಾಗಿರುವುದು ಭಯೋತ್ಪಾದಕರಿಗೆ ಅನುಕೂಲಕರವಾಗಿವೆ. ಇಂಥ ಭೂಪ್ರದೇಶಗಳಲ್ಲಿ ಲೈವ್ ಆಗಿ ಮಾಹಿತಿ ನೀಡಬಲ್ಲ ಡ್ರೋನ್ ತಂತ್ರಜ್ಞಾನವು ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಇದಲ್ಲದೇ ಈ ಪ್ರದೇಶದಲ್ಲಿರಬಹುದಾದ ಭಯೋತ್ಪಾದಕರನ್ನು ಬೆಂಬಲಿಸುವ ಜನ ಇರಬಹುದು. ಹಣಕ್ಕಾಗಿ ಅಥವಾ ಸಿದ್ಧಾಂತಕ್ಕಾಗಿ ಇವರು ಭಯೋತ್ಪಾದಕರನ್ನು ಬೆಂಬಲಿಸುತ್ತಿರಬಹುದು. ಇಂಥ ಬೆಂಬಲಿಗರು ಭದ್ರತಾ ಪಡೆಗಳ ಚಲನೆ, ಲಾಜಿಸ್ಟಿಕ್ಸ್ ಮುಂತಾದ ಮಾಹಿತಿಗಳನ್ನು ಅವರಿಗೆ ನೀಡುತ್ತಿರಬಹುದು. ಇವೆಲ್ಲ ಕಾರಣಗಳಿಂದ ಭಯೋತ್ಪಾದಕರನ್ನು ಪ್ರತ್ಯೇಕಿಸುವುದು ಕಷ್ಟವಾಗುತ್ತದೆ ಮತ್ತು ಭದ್ರತಾ ಪಡೆಗಳ ಕಾರ್ಯಾಚರಣೆಗೆ ಸವಾಲು ಎದುರಾಗುತ್ತವೆ.
ಕೆಲ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಎಎಫ್ಎಸ್ಪಿಎ (ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ) ತೆಗೆದುಹಾಕಲು ಸರ್ಕಾರ ಯೋಚಿಸುತ್ತಿರುವ ಮಟ್ಟಕ್ಕೆ ಸನ್ನಿವೇಶ ಸುಧಾರಿಸಿದೆ ಎಂಬ ಮಾತುಗಳು ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಗಳ ಸಂದರ್ಭಗಳಲ್ಲಿ ಕೇಳಿ ಬಂದಿದ್ದವು. ಭದ್ರತಾ ಪಡೆಗಳ ಸಂಖ್ಯೆಯನ್ನು ಸೂಕ್ತ ಮಟ್ಟಕ್ಕೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ರೈಫಲ್ ಬೆಟಾಲಿಯನ್ ಗಳಲ್ಲಿನ ಕೆಲ ತುಕಡಿಗಳನ್ನು ಕಡಿಮೆ ಮಾಡಬಹುದು ಎಂಬ ವದಂತಿ ಇತ್ತು. ಆದರೆ ಇವು ಅವಸರದ ಮೌಲ್ಯಮಾಪನಗಳಾಗಿದ್ದವು. ಲಡಾಖ್ನಲ್ಲಿ ಚೀನಾ ಒಳನುಸುಳಿತ್ತು. ಆಗ ಜಮ್ಮು ವಲಯದಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ ಎಂಬ ಊಹೆಯ ಮೇಲೆ ಅಲ್ಲಿನ ಯೋಧರನ್ನು ಲಡಾಖ್ಗೆ ನಿಯೋಜನೆ ಮಾಡಲಾಗಿತ್ತು. ಆದರೆ, ಇದು ಅಲ್ಪಾವಧಿಯ ಮೌಲ್ಯಮಾಪನದ ಆಧಾರದ ಮೇಲೆ ಕೈಗೊಂಡ ಅವಸರದ ಕ್ರಮವಾಗಿತ್ತು.
ಕಾಶ್ಮೀರ ಭಯೋತ್ಪಾದನೆ ವಿಶಾಲ ದೃಷ್ಟಿಯಿಂದ ನೋಡಬೇಕಾಗಿದೆ: ಯೋಧರನ್ನು ಸ್ಥಳಾಂತರಿಸಿದ್ದು ಜಮ್ಮು ಭಾಗದಲ್ಲಿ ಭದ್ರತಾ ವಿಷಯದಲ್ಲಿ ಒಂದು ರೀತಿಯ ಖಾಲಿತನ ಉಂಟಾಗುವಂತಾಯಿತು. ಬಹುಶಃ ಉಗ್ರಗಾಮಿಗಳು ಇದೇ ಅವಕಾಶವನ್ನು ಬಳಸಿಕೊಂಡರು. ಸ್ಥಳಾಂತರಗೊಂಡ ಯೋಧರನ್ನು ಮರಳಿ ಕರೆತರಲಿಲ್ಲವಾದರೂ, ಅಲ್ಲಿ ಈಗ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ವಿಶಾಲ ದೃಷ್ಟಿಕೋನದಿಂದ ನೋಡುವ ಅಗತ್ಯವೂ ಇದೆ. ಸನ್ನಿವೇಶಗಳು ಕೆಟ್ಟದಾಗಿವೆ ಮತ್ತು ಹಳೆಯ ಪರಿಸ್ಥಿತಿಗಳು ಮರುಕಳಿಸುತ್ತಿವೆ. ಆದಾಗ್ಯೂ ಇಲ್ಲಿ ಏನೇ ಮಾಡಿದರೂ ತಾಳ್ಮೆಯಿಂದ ಮಾಡಬೇಕಾಗುತ್ತದೆ. ಅವಸರದಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಮತ್ತು ಮಾಡಕೂಡದು. ಪರಿಸ್ಥಿತಿಗಳು ನಿಧಾನವಾಗಿ ಸುಧಾರಿಸಬಹುದಾದರೂ, ಆ ಅವಧಿಯಲ್ಲಿ ಯೋಧರು ಸಾವು ನೋವು ಎದುರಿಸಬೇಕಾಗುತ್ತದೆ. ಯೋಧರ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಮಾತ್ರವೇ ಭಯೋತ್ಪಾದನೆಯನ್ನು ಪರಿಹರಿಸಲಾಗುವುದಿಲ್ಲ.
ಗುಪ್ತಚರ ಗ್ರಿಡ್ ಸ್ಥಾಪಿಸುವುದು, ಭೂಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುವುದು ಮತ್ತು ನಿರಂತರ ಕಾರ್ಯಾಚರಣೆಯಿಂದ ಪರಿಸ್ಥಿತಿಗಳನ್ನು ಹತೋಟಿಗೆ ತರಬಹುದು. ಈ ಪ್ರದೇಶದಲ್ಲಿ ನಿಯೋಜನೆಗೊಂಡ ಪಡೆಗಳಿಗೆ ತರಬೇತಿ ನೀಡಲು ಮತ್ತು ಆ ಪ್ರದೇಶಗಳ ಬಗ್ಗೆ ಅವರು ಪರಿಚಿತರಾಗಲು ಸಮಯ ಬೇಕಾಗುತ್ತದೆ. ಇದರಿಂದ ಸಾವುನೋವುಗಳು ಅತ್ಯಂತ ಕನಿಷ್ಠ ಮಟ್ಟದಲ್ಲಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಗುಪ್ತಚರ ಗ್ರಿಡ್ಗಳನ್ನು ಪುನಃ ಸಕ್ರಿಯಗೊಳಿಸಬೇಕಾಗಿದೆ. ಭೂಪ್ರದೇಶ ಮತ್ತು ಕಾರ್ಯಾಚರಣೆಯ ನಿರೀಕ್ಷಿತ ಸ್ವರೂಪದ ಬಗ್ಗೆ ಸಾಕಷ್ಟು ಪರಿಚಿತವಾಗಿರುವ ವಿಶೇಷ ಪಡೆಗಳ ನಿಯೋಜನೆಯನ್ನು ವರದಿಗಳು ಉಲ್ಲೇಖಿಸುತ್ತವೆ. ಅವು ಬಲ-ಗುಣಕಗಳಾಗಿರುತ್ತವೆ. ಸಂಭಾವ್ಯ ಅಡಗುತಾಣಗಳು ಸೇರಿದಂತೆ ಭೂಪ್ರದೇಶದ ಬಗ್ಗೆ ಚೆನ್ನಾಗಿ ತಿಳಿದಿರುವ ಸ್ಥಳೀಯ ಗ್ರಾಮ ರಕ್ಷಣಾ ಕಾವಲುಗಾರರನ್ನು ಸಂಯೋಜಿಸಲಾಗುತ್ತಿದೆ.
ಭಯೋತ್ಪಾದಕರು ಹೊಸ ತಂತ್ರಜ್ಞಾನಗಳನ್ನು ಬಳಸುತ್ತಿದ್ದರೂ, ಎಲೆಕ್ಟ್ರಾನಿಕ್ ಮೇಲ್ವಿಚಾರಣೆ ಪ್ರಯೋಜನಕಾರಿಯಾಗಿದೆ. ಸಂಭಾವ್ಯ ಒಳನುಸುಳುವಿಕೆ ಪ್ರಯತ್ನಗಳನ್ನು ಕಡಿಮೆ ಮಾಡಲು ಭಯೋತ್ಪಾದನಾ ವಿರೋಧಿ ಗ್ರಿಡ್ ಅನ್ನು ಬಲಪಡಿಸಬೇಕಿದೆ. ಇದರಿಂದ ಭಯೋತ್ಪಾದಕರ ಬೆಂಬಲಿಗರನ್ನು ಕೂಡ ದೂರ ಮಾಡಬಹುದು. ಆಡಳಿತದ ಎಲ್ಲಾ ಅಂಶಗಳನ್ನು ಒಳಗೊಂಡ ಯೋಜನೆಯ ಆಧಾರದ ಮೇಲೆ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂಬುದನ್ನು ಇದರಿಂದ ಖಚಿತಪಡಿಸಿಕೊಳ್ಳಬಹುದು. ಅದೇ ಸಮಯದಲ್ಲಿ ನಮ್ಮ ನಾಗರಿಕರು ಬಲಿಯಾಗದಂತೆ ಕೂಡ ನೋಡಿಕೊಳ್ಳುವ ಅವಶ್ಯಕತೆಯಿದೆ.
2003-04ರಲ್ಲಿ ಈ ವಲಯದಲ್ಲಿ ನಡೆದ ಹಿಂದಿನ ಕಾರ್ಯಾಚರಣೆಗಳಲ್ಲಿ, ಸ್ಥಳೀಯ ದನಗಾಹಿಗಳು ಬೆಟ್ಟಗಳಿಗೆ ಹೋಗದಂತೆ ತಡೆಯಲಾಗಿತ್ತು. ಇದು ಭಯೋತ್ಪಾದಕರನ್ನು ಮತ್ತಷ್ಟು ಪ್ರತ್ಯೇಕಿಸಲು ಸಹಾಯ ಮಾಡಿತು. ಪ್ರಸ್ತುತ ಅದೇ ಮಾದರಿಯನ್ನು ಅಳವಡಿಸಿಕೊಳ್ಳಬಹುದಾ ಎಂಬುದನ್ನು ಚಿಂತಿಸಬೇಕಿದೆ. ಸ್ಥಳೀಯರಿಗೆ ಯಾವುದೇ ಅನಾನುಕೂಲತೆಯನ್ನುಂಟು ಮಾಡದಿರುವುದು ಸರ್ಕಾರದ ಬಯಕೆಯಾಗಿದೆ. ಮತ್ತೊಂದು ಕಡೆ ಇದೇ ಸಮಯದಲ್ಲಿ ಅಮರನಾಥ ಯಾತ್ರೆ ಕೂಡ ನಡೆಯುತ್ತಿದೆ. ಅದರ ಭದ್ರತೆಗೆ ಒತ್ತು ನೀಡುವುದು ಮತ್ತೊಂದು ಆದ್ಯತೆಯ ಕೆಲಸವಾಗಿದೆ. ಯಾತ್ರಾ ಮಾರ್ಗದಲ್ಲಿ ಭದ್ರತೆಗೆ ಬೇರೆ ಯೋಧರನ್ನು ನೇಮಿಸಲಾಗಿದೆ.
ಅಮರನಾಥ ಯಾತ್ರೆಯು ಈ ಪ್ರದೇಶದ ಜನರಿಗೆ ಜೀವನಾಡಿಯಾಗಿದ್ದು, ರಾಜ್ಯದ ಎಲ್ಲಾ ಕಡೆಯಿಂದ ಬರುವ ಜನ ಯಾತ್ರಾರ್ಥಿಗಳಿಗೆ ಸಹಾಯ ಮಾಡುವವರು. ಈ ಜನರ ವಾರ್ಷಿಕ ಜೀವನೋಪಾಯವು ಯಾತ್ರೆಯು ಸುಗಮವಾಗಿ ನಡೆಯುವುದನ್ನು ಅವಲಂಬಿಸಿದೆ. ಭಯೋತ್ಪಾದಕರ ಕೈಯಲ್ಲಿ ಭದ್ರತಾ ಪಡೆಗಳ ಸಾವುನೋವುಗಳು ರಾಷ್ಟ್ರಕ್ಕೆ ಹಾನಿಯನ್ನುಂಟು ಮಾಡುತ್ತವೆ. ಆದಾಗ್ಯೂ, ಇದು ಪಡೆಗಳನ್ನು ಟೀಕಿಸುವ ಅಥವಾ ಒತ್ತಡ ಹೇರುವ ಸಮಯವಲ್ಲ. ರಾಷ್ಟ್ರವು ಪವಾಡಗಳನ್ನು ನಿರೀಕ್ಷಿಸಬಾರದು. ಈ ಕಾರ್ಯಾಚರಣೆಗಳು ತಾಳ್ಮೆ ಮತ್ತು ವಿವರವಾದ ಯೋಜನೆ ಒಳಗೊಂಡಿರುತ್ತವೆ.
ಪಾಕಿಸ್ತಾನದಿಂದ ಒಳನುಸುಳುವ ಭಯೋತ್ಪಾದಕರು ವಾಪಸು ಹೋಗುವುದಿಲ್ಲ. ಅವರು ತಾವು ಸಾಯುವವರೆಗೂ ಉಗ್ರ ಕೃತ್ಯ ನಡೆಸುತ್ತಲೇ ಇರುತ್ತಾರೆ. ಅವರದು ಒನ್ ವೇ ಟಿಕೆಟ್. ರಾಷ್ಟ್ರೀಯ ಮಟ್ಟದಲ್ಲಿ, ನಾವು ನಮ್ಮ ಸಹನೆಯ ಮಿತಿಯನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ. ಗಡಿಯಾಚೆಗಿನ ಮತ್ತು ಬಾಲಕೋಟ್ ದಾಳಿಗಳು ರಾಷ್ಟ್ರದ ದೃಢನಿಶ್ಚಯವನ್ನು ತಿಳಿಸಿದೆ. ಆದರೆ ಅವುಗಳ ಪರಿಣಾಮವು ಆ ಸಮಯದೊಂದಿಗೆ ಕೊನೆಗೊಂಡಿತು. ಹೀಗಾಗಿ ಮತ್ತೊಮ್ಮೆ ಸ್ಪಷ್ಟ ಸಂದೇಶ ರವಾನಿಸುವ ಅಗತ್ಯವಿದೆ.
ಒಂದು ಅಂತಿಮ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ: ಹಿಂದಿನ ಕಾರ್ಯಾಚರಣೆಗಳಿಂದ ರಾಜಕೀಯ ಲಾಭ ಪಡೆಯುವುದು ಮತ್ತು ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರತಿದಾಳಿ ನಡೆಸುವುದಾಗಿ ಬೆದರಿಕೆ ಹಾಕುವುದು ಪರಿಹಾರವಲ್ಲ. ಇವನ್ನು ಪದೇ ಪದೇ ಮಾಡಲಾಗದಿದ್ದರೆ ಅವು ಕೇವಲ ರಾಜಕೀಯ ಘೋಷಣೆಗಳಾಗಿ ಉಳಿಯುತ್ತವೆ. ನಾವು ಪಾಕಿಸ್ತಾನದ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದನ್ನು ಎದುರಿಸಬೇಕು. ಪ್ರಸ್ತುತ, ಸಿಪಿಇಸಿಗೆ ಭಯೋತ್ಪಾದಕ ಬೆದರಿಕೆಗಳನ್ನು ನಿರ್ಮೂಲನೆ ಮಾಡುವ ಚೀನಾದ ಬೇಡಿಕೆಗಳನ್ನು ಪೂರೈಸಲು ಪಾಕಿಸ್ತಾನವು ತನ್ನ ಪಶ್ಚಿಮ ಪ್ರಾಂತ್ಯಗಳ ಮೇಲೆ ಕೇಂದ್ರೀಕರಿಸಲು ಒತ್ತಾಯಿಸಲ್ಪಟ್ಟಿದೆ.
ಹೀಗಾಗಿ, ಪಾಕಿಸ್ತಾನವು ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಲಭ್ಯವಿರುವ ಪಡೆಗಳನ್ನು ನಿಯೋಜಿಸಿದೆ. ಅಲ್ಲಿ ಕಾರ್ಯಾಚರಣೆಗಳು ಯೋಜನೆಯ ಪ್ರಕಾರ ನಡೆಯುತ್ತಿಲ್ಲ, ಪಾಕಿಸ್ತಾನ ಪಡೆಗಳಿಗೆ ಸಾವುನೋವುಗಳು ಹೆಚ್ಚುತ್ತಿವೆ. ಅಫ್ಘಾನಿಸ್ತಾನದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿದೆ ಮತ್ತು ಯುದ್ಧವು ಸನ್ನಿಹಿತವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿದ ಭಯೋತ್ಪಾದನೆಯು ಭಾರತವನ್ನು ಆಂತರಿಕವಾಗಿ ತೊಡಗಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಈ ಮೂಲಕ ಪಾಕಿಸ್ತಾನವು ತನ್ನ ಕಾರ್ಯಾಚರಣೆಗಳನ್ನು ಹಸ್ತಕ್ಷೇಪವಿಲ್ಲದೆ ನಡೆಸುವ ಉದ್ದೇಶಗಳನ್ನು ಹೊಂದಿದೆ.
ಚೀನಾದೊಂದಿಗಿನ ಉದ್ವಿಗ್ನತೆ ಬಳಸಿಕೊಳ್ಳುತ್ತಿರುವ ಪಾಕ್: ಎಲ್ಎಸಿ ಉದ್ದಕ್ಕೂ ಚೀನಾದೊಂದಿಗಿನ ಭಾರತದ ಉದ್ವಿಗ್ನತೆಯನ್ನು ಕೂಡ ಪಾಕಿಸ್ತಾನ ಬಳಸಿಕೊಳ್ಳುತ್ತಿದೆ. ಇದು ಪ್ರತೀಕಾರ ತೀರಿಸಿಕೊಳ್ಳುವುದನ್ನು ತಡೆಯುತ್ತದೆ ಎಂದು ಅದು ನಂಬಿದೆ. ಚೀನಾ ಮತ್ತು ಪಾಕಿಸ್ತಾನ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನೇ ಭಾರತ ಎದುರಿಸಬೇಕು. ಸರ್ಕಾರದ ಮುಂದೆ ಕೆಲವೊಂದು ಆಯ್ಕೆಗಳಿವೆ. ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮವನ್ನು ನಿರ್ಲಕ್ಷಿಸುವುದು ಮತ್ತು ಪಾಕಿಸ್ತಾನದ ಪೋಸ್ಟ್ಗಳ ಮೇಲೆ ದಾಳಿ ಮಾಡುವುದು, ಭಯೋತ್ಪಾದಕ ಶಿಬಿರಗಳು ಹಳ್ಳಿಗಳಲ್ಲಿದ್ದರೂ ಸಹ ಅವುಗಳ ಮೇಲೆ ದಾಳಿ ಮಾಡುವುದು ಒಂದು ಆಯ್ಕೆಯಾಗಿದೆ.
ಆದರೆ ಇದು ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತದೆಯೇ ಎಂಬುದು ಪ್ರಶ್ನೆಯಾಗಿದೆ. ಎಲ್ಎಸಿಯನ್ನು ಸಕ್ರಿಯಗೊಳಿಸುವ ಮೂಲಕ ಚೀನಾ ಪಾಕಿಸ್ತಾನವನ್ನು ಬೆಂಬಲಿಸಲು ಪ್ರಯತ್ನಿಸಬಹುದೇ ಎಂಬುದು ಒಂದು ಸಾಧ್ಯತೆಯಾಘಿದೆ. ಇದು ಸರ್ಕಾರ ಮಾಡಬೇಕಾದ ಮೌಲ್ಯಮಾಪನವಾಗಿದೆ. ಮುಂದಿನ ಆಯ್ಕೆಯೆಂದರೆ ಗಡಿಯಾಚೆಗಿನ ದಾಳಿ. ಇಲ್ಲಿಯೂ ಸರ್ಕಾರವು ಯುದ್ಧಕ್ಕೆ ಸಿದ್ಧವಾಗಿರಬೇಕು. ಒಟ್ಟಾರೆಯಾಗಿ ಪಾಕಿಸ್ತಾನಕ್ಕೆ ಕಠಿಣ ಸಂದೇಶವನ್ನು ರವಾನಿಸಬೇಕೆಂಬುದು ಸತ್ಯ. ಅದನ್ನು ರವಾನಿಸಲಾಗುತ್ತದೆ ಎಂಬುದನ್ನು ಸರ್ಕಾರ ತೀರ್ಮಾನಿಸಬೇಕಿದೆ.
ಲೇಖನ : ಹರ್ಷ ಕಾಕರ್, ನಿವೃತ್ತ ಮೇಜರ್ ಜನರಲ್
ಇದನ್ನೂ ಓದಿ : ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಯಾಗಲಿದ್ದಾರಾ ಕಮಲಾ ಹ್ಯಾರಿಸ್? ಕುಗ್ಗುತ್ತಿದೆಯಾ ಬೈಡನ್ ವರ್ಚಸ್ಸು? - US Elections