'ನಾವು ಇನ್ನಷ್ಟು ಹೆಚ್ಚು ಸುರಕ್ಷಿತವಾದ ಗಡಿಗಳನ್ನು ಹೊಂದಿದ್ದರೆ ಭಾರತದ ಆರ್ಥಿಕ ಪ್ರಗತಿಯು ಇನ್ನೂ ವೇಗವಾಗಿರುತ್ತಿತ್ತು' ಎಂದು ಕಳೆದ ವಾರ ಗಡಿ ಭದ್ರತಾ ಪಡೆ (ಬಿಎಸ್ಎಫ್) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದರು.
ಗುರುತಿಸದ ಅಂತಾರಾಷ್ಟ್ರೀಯ ಗಡಿಗಳನ್ನು ಶಾಶ್ವತವಾಗಿ ನಿರ್ವಹಿಸುತ್ತ ಮೇಲ್ವಿಚಾರಣೆ ಮಾಡಬೇಕಿರುವುದರಿಂದ ರಕ್ಷಣಾ ವೆಚ್ಚಗಳು ಹೆಚ್ಚಾಗುತ್ತವೆ ಎಂದು ಅವರು ಸೂಚ್ಯವಾಗಿ ಹೇಳಿದರು. ಗಡಿಗಳನ್ನು ಕಾಯುವ ಯೋಧರನ್ನು ಸಜ್ಜುಗೊಳಿಸುವುದು ಮತ್ತು ನಿರ್ವಹಿಸುವುದನ್ನು ಈ ವೆಚ್ಚಗಳು ಒಳಗೊಂಡಿದೆ. ಇದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ಯುರೋಪ್. ಅಲ್ಲಿ ಮುಕ್ತ ಗಡಿಗಳಿದ್ದು, ದೇಶಗಳ ನಡುವೆ ಯಾವುದೇ ಪ್ರಾದೇಶಿಕ ವಿವಾದವಿಲ್ಲದ ಕಾರಣ ಆ ದೇಶಗಳ ರಕ್ಷಣಾ ಬಜೆಟ್ ಕಡಿಮೆಯಾಗಿದೆ.
ನೆರೆಹೊರೆಯ ದೇಶಗಳೊಂದಿಗೆ ಪಾಕಿಸ್ತಾನದಂಥ ವಿವಾದಿತ ಗಡಿಗಳಿದ್ದಾಗ ವ್ಯಾಪಾರ ನಿರ್ಬಂಧಕ್ಕೆ ಕಾರಣವಾಗುತ್ತವೆ ಮತ್ತು ಇದು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ದೋವಲ್ ಸುಳಿವು ನೀಡಿದರು. ಭಾರತದೊಂದಿಗೆ ವ್ಯಾಪಾರ ಆರಂಭಿಸುವುದರಿಂದ ಪಾಕಿಸ್ತಾನಕ್ಕೆ ಹೆಚ್ಚಿನ ಲಾಭವಾಗುತ್ತದೆ. ಜೊತೆಗೆ ಭಾರತಕ್ಕೂ ಹೆಚ್ಚಿನ ಮಾರುಕಟ್ಟೆ ಸಿಗುತ್ತದೆ. ಆದರೆ ಪಾಕಿಸ್ತಾನ ಸರ್ಕಾರವು ತನ್ನ ದೂರದೃಷ್ಟಿಯ ಕೊರತೆಯಿಂದ ದೇಶಕ್ಕೆ ದೊಡ್ಡ ಪ್ರಮಾಣದ ಹಾನಿ ಮಾಡಿಕೊಳ್ಳುತ್ತಿದೆ. ಇದರಿಂದ ಭಾರತಕ್ಕೆ ಆಗುತ್ತಿರುವ ನಷ್ಟ ತುಂಬಾ ಸಣ್ಣ ಪ್ರಮಾಣದ್ದಾಗಿದೆ.
ಪಾಕಿಸ್ತಾನವು ತನ್ನ ಭೂ ಮಾರ್ಗಗಳನ್ನು ಬಳಸಲು ಭಾರತಕ್ಕೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ಭಾರತವು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಪರ್ಕವನ್ನು ಹೆಚ್ಚಿಸಲು ಇರಾನ್ನ ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿದೆ. ಈ ಬಂದರು ಸಜ್ಜಾಗಿ ಕಾರ್ಯರೂಪಕ್ಕೆ ಬಂದ ನಂತರ ಮುಂಬರುವ ವರ್ಷಗಳಲ್ಲಿ ಪಾಕಿಸ್ತಾನದ ಪ್ರಾಮುಖ್ಯತೆ ಕಡಿಮೆಯಾಗಲಿದೆ.
ದಕ್ಷಿಣ ಏಷ್ಯಾದ ಕೆಲ ರಾಷ್ಟ್ರಗಳಲ್ಲಿನ ರಾಜಕೀಯ ಮತ್ತು ಆರ್ಥಿಕ ಅಭದ್ರತೆಯ ಕಾರಣದಿಂದಾಗಿ ಅಲ್ಲಿನ ಜನ ಭಾರತಕ್ಕೆ ವಲಸೆ ಬರುತ್ತಿದ್ದಾರೆ. ಇದು ಜನಸಂಖ್ಯಾಶಾಸ್ತ್ರದ ಮೇಲೆ ಪರಿಣಾಮ ಬೀರುತ್ತದೆ. ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದ ಗಡಿ ಜಿಲ್ಲೆಗಳು, ಮಣಿಪುರ ಮತ್ತು ಮಿಜೋರಾಂನಲ್ಲಿ ಜನಸಂಖ್ಯಾ ಬದಲಾವಣೆಗಳು ದೊಡ್ಡ ಪ್ರಮಾಣದಲ್ಲಿ ಗೋಚರಿಸುತ್ತಿವೆ. ಇದು ಸ್ಥಳೀಯ ಜನರಲ್ಲಿ ಅಭದ್ರತೆಯ ಭಾವನೆಯನ್ನು ಹೆಚ್ಚಿಸುತ್ತದೆ.
ಈ ಬಗ್ಗೆ ಮಾತನಾಡಿದ ದೋವಲ್, "ಗಡಿ ಭದ್ರತೆ ಇಲ್ಲದಿದ್ದರೆ ಅದು ಮೂಲಭೂತವಾದವನ್ನು ಹೆಚ್ಚಿಸುವ ಮೂಲಕ ದೇಶದ ಸಾಮಾಜಿಕ-ಆರ್ಥಿಕ ಭದ್ರತೆಯ ಮೇಲೂ ಪರಿಣಾಮ ಬೀರುತ್ತದೆ. ಹೆಚ್ಚಿನ ಸಂಖ್ಯೆಯ ರೋಹಿಂಗ್ಯಾಗಳು ಮತ್ತು ಅರಾಕನ್ (ಮ್ಯಾನ್ಮಾರ್) ಪ್ರದೇಶದ ಜನರು ಇಲ್ಲಿಗೆ ಬರುತ್ತಿದ್ದಾರೆ. ಇವು ಸಾಮಾಜಿಕ-ರಾಜಕೀಯ ಪರಿಣಾಮಗಳನ್ನು ಹೊಂದಿವೆ." ಎಂದು ಹೇಳಿದರು. ಬಾಂಗ್ಲಾದೇಶದ ಗಡಿಯುದ್ದಕ್ಕೂ ವಲಸೆಯನ್ನು ತಡೆಗಟ್ಟುವ ಜವಾಬ್ದಾರಿ ಬಿಎಸ್ಎಫ್ ಮೇಲಿದ್ದರೆ, ಮ್ಯಾನ್ಮಾರ್ ಗಡಿಯಲ್ಲಿ ವಲಸೆ ತಡೆಗಟ್ಟುವ ಜವಾಬ್ದಾರಿ ಅಸ್ಸಾಂ ರೈಫಲ್ಸ್ ಮೇಲಿದೆ.
ಎಲ್ಲಾ ಗಡಿಗಳನ್ನು ಬೇಲಿ ಹಾಕಿ ಭದ್ರಪಡಿಸಲು ಸಾಧ್ಯವಿಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ. ನದಿ ಪಾತ್ರ, ಪರ್ವತಗಳು ಮತ್ತು ಕಣಿವೆಗಳಿರುವ ಗಡಿಗಳಲ್ಲಿ ಬೇಲಿ ಹಾಕುವುದು, ನಿರ್ವಹಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು ಕಷ್ಟ. ಇಲ್ಲಿ ತೆರೆದ ಗಡಿಗಳಿರುವುದರಿಂದ ಅವನ್ನು ಬಳಸಿ ಒಳಗೆ ಬರಲಾಗುತ್ತಿದೆ. ಅಂತಹ ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸುವ ಏಕೈಕ ವಿಧಾನವೆಂದರೆ ಭೌತಿಕ ಗಸ್ತು ಮತ್ತು ಮೇಲ್ವಿಚಾರಣೆಯ ಜೊತೆಗೆ ತಂತ್ರಜ್ಞಾನವನ್ನು ಬಳಸುವುದು. ಅತ್ಯಾಧುನಿಕ ತಾಂತ್ರಿಕ ಉಪಕರಣಗಳ ಬಳಕೆ ಬಹಳ ವೆಚ್ಚದಾಯಕವಾಗಿದ್ದರೂ ಅವನ್ನು ಬಳಸುವುದು ಅನಿವಾರ್ಯ.
ಇದೇ ಹಿನ್ನೆಲೆಯಲ್ಲಿ ಮಾತನಾಡಿದ ದೋವಲ್, "ನೀವು ಸಂಘಟಿತವಾಗಿರದಿದ್ದರೆ ನಿಮ್ಮ ರಕ್ಷಣಾ ಸಾಮರ್ಥ್ಯ ಕಡಿಮೆಯಾಗುತ್ತದೆ. ಹಾಗೆಯೇ ನೀವು ಉತ್ತಮ ಗುಣಮಟ್ಟದ ಸಂವೇದಕಗಳು, ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಇತ್ಯಾದಿಗಳನ್ನು ಹೊಂದಿದ್ದರೆ ಉತ್ತಮವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ." ಎಂದು ಹೇಳಿದರು. ಈ ಸಲಕರಣೆಗಳನ್ನು ಬಳಸಿಕೊಳ್ಳಲು ಸಿಬ್ಬಂದಿಗೆ ತರಬೇತಿ ನೀಡುವುದು ಅಷ್ಟೇ ಅವಶ್ಯಕ. ಆದಾಗ್ಯೂ, ತಂತ್ರಜ್ಞಾನವನ್ನು ವಾಸ್ತವದಲ್ಲಿ ಯೋಧರು ನಿಯಂತ್ರಿಸುವುದು ಕೂಡ ಅಗತ್ಯ.
ಕಳೆದ ವರ್ಷ ಅಕ್ಟೋಬರ್ 07 ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಇಸ್ರೇಲ್ನ ಎಲ್ಲಾ ರಕ್ಷಣಾ ವ್ಯವಸ್ಥೆಗಳನ್ನು ಹಾಳುಗೆಡವಿ ಹಮಾಸ್ ಉಗ್ರರು ಒಳಗೆ ನುಗ್ಗಿದ್ದರು. ಗಾಜಾ ಮತ್ತು ಇಸ್ರೇಲ್ ನಡುವಿನ ಬೇಲಿಯನ್ನು ವಿಶ್ವದ ಅತ್ಯಂತ ಅತ್ಯಾಧುನಿಕ ಮತ್ತು ತಂತ್ರಜ್ಞಾನ ಕೇಂದ್ರಿತ ಗಡಿ ಎಂದು ಪರಿಗಣಿಸಲಾಗಿದೆ. ಇದು ಸೆನ್ಸರ್ಗಳು, ಸಿಸಿಟಿವಿ ಕ್ಯಾಮೆರಾಗಳು, ವಿದ್ಯುದ್ದೀಕರಣ ಇತ್ಯಾದಿ ಸೌಲಭ್ಯಗಳನ್ನು ಹೊಂದಿತ್ತು. ಇವೆಲ್ಲವನ್ನೂ 24×7 ಅವಧಿಯಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಆದಾಗ್ಯೂ ಅತ್ಯಂತ ಸುಲಭವಾಗಿ ಈ ಎಲ್ಲವನ್ನೂ ನಾಶಗೊಳಿಸಿ ಹಮಾಸ್ ಉಗ್ರರು ಒಳಗೆ ಬಂದು ಸಾವಿರಾರು ಇಸ್ರೇಲಿಗರನ್ನು ಕೊಂದರು.
ಅಂತಿಮವಾಗಿ ಭಾರತದ ಬಹುತೇಕ ಗಡಿ ಪ್ರದೇಶಗಳು ದುರ್ಗಮ ಪ್ರದೇಶದಲ್ಲಿವೆ ಮತ್ತು ಇಲ್ಲಿಯವರೆಗೆ ಅಭಿವೃದ್ಧಿ ಹೊಂದಿಲ್ಲ. ವಿಶೇಷವಾಗಿ ಉತ್ತರ ವಲಯದಲ್ಲಿ ಈ ಸಮಸ್ಯೆ ಇದೆ. ಒಂದೊಮ್ಮೆ ಈ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದರೆ ಸಂಘರ್ಷದ ಸಂದರ್ಭದಲ್ಲಿ ಅವನ್ನು ಶತ್ರುಗಳು ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಗ್ರಹಿಕೆ ಇತ್ತು. ಇದು ಸ್ಥಳೀಯ ಜನರನ್ನು ಪ್ರತ್ಯೇಕಿಸಿತು ಮತ್ತು ಭದ್ರತಾ ಪಡೆಗಳ ಚಲನೆಯ ಮೇಲೂ ಪರಿಣಾಮ ಬೀರಿತು. ಹೀಗಾಗಿ ಪ್ರಸ್ತುತ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಗಡಿ ಮತ್ತು ದೂರದ ಪ್ರದೇಶಗಳು ಅಭಿವೃದ್ಧಿಯಾಗುವುದರಿಂದ ಅಲ್ಲಿನ ಜನತೆ ಮುಖ್ಯವಾಹಿನಿಗೆ ಸೇರುತ್ತಾರೆ. ಇದು ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹ ಅನುವು ಮಾಡಿಕೊಡುತ್ತದೆ. ಆದರೆ ಇಂಥ ಮೂಲಸೌಕರ್ಯ ಅಭಿವೃದ್ಧಿಯು ಸೇನಾ ಶಿಬಿರಗಳಿಗೆ ಮಾತ್ರ ಅನುಕೂಲವಾಗುವಂತೆ ಇರಬೇಕು. ಈ ಪ್ರದೇಶಗಳಲ್ಲಿ ಮೊಬೈಲ್ ಟವರ್ಗಳನ್ನು ನಿರ್ಮಾಣ ಮಾಡಬೇಕು. ಆದರೆ ಪ್ರತಿಯೊಂದು ಪ್ರದೇಶವು ವಿಭಿನ್ನವಾಗಿರುವುದನ್ನು ಗಣನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ದೋವಲ್ ಉಲ್ಲೇಖಿಸಿದರು.
ಗಡಿ ಗ್ರಾಮಗಳು 'ನಮ್ಮ ಕಣ್ಣುಗಳಿದ್ದಂತೆ' ಎಂದು ದೋವಲ್ ಹೇಳುತ್ತಾರೆ. ಅವರು ಗಡಿ ಗ್ರಾಮಗಳನ್ನು ಇಸ್ರೇಲ್ ಬಳಸಿದ ತಂತ್ರಜ್ಞಾನದೊಂದಿಗೆ ಹೋಲಿಸಿದರು. 'ಗಡಿಯಲ್ಲಿ ಇಸ್ರೇಲ್ನ ಅತ್ಯಾಧುನಿಕ ಗುಪ್ತಚರ ಮಾಹಿತಿ ಶೂನ್ಯವಾಗಿತ್ತು. ಸಾವಿರಾರು ಹಮಾಸ್ ಉಗ್ರರು ಒಳನುಸುಳಲಿದ್ದಾರೆ ಎಂಬುದನ್ನು ಅವರಿಗೆ ಗುರುತಿಸಲು ಸಾಧ್ಯವಾಗಲಿಲ್ಲ. ಅವರು ಎಲ್ಲಾ ಉನ್ನತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದರೂ ಎಲ್ಲವೂ ವಿಫಲವಾಯಿತು. ಆದರೆ ಗಡಿಯನ್ನು ಮೇಲ್ವಿಚಾರಣೆ ಮಾಡಬಲ್ಲ ಅನೇಕ ಕಣ್ಣುಗಳನ್ನು (ಗ್ರಾಮಸ್ಥರು) ನಾವು ಹೊಂದಿರುವುದು ನಮ್ಮ ಅದೃಷ್ಟ. ನಮ್ಮ ಹಳ್ಳಿಗಳೊಂದಿಗೆ ನಮಗೆ ಸಂಪರ್ಕವಿದೆ.' ಎಂದು ದೋವಲ್ ಹೇಳಿದರು.
ಭದ್ರತಾ ವ್ಯವಸ್ಥೆಯಲ್ಲಿ ಗ್ರಾಮಸ್ಥರನ್ನು ಸೇರಿಸಿಕೊಳ್ಳುವುದು ಮೋದಿ ನೇತೃತ್ವದ ಸರ್ಕಾರದ 'ಮೊದಲ ಗ್ರಾಮ' ಪರಿಕಲ್ಪನೆಯ ಭಾಗವಾಗಿದೆ. ಮಾನಾಗೆ ಭೇಟಿ ನೀಡಿದ ನಂತರ ಮಾತನಾಡಿದ ಪ್ರಧಾನಿ ಮೋದಿ, 'ಗಡಿಯಲ್ಲಿರುವ ಪ್ರತಿಯೊಂದು ಹಳ್ಳಿಯೂ ದೇಶದ ಮೊದಲ ಗ್ರಾಮವಾಗಿದೆ' ಎಂದು ಹೇಳಿದರು. ಇವುಗಳನ್ನು ಮೊದಲು 'ಕೊನೆಯ ಗ್ರಾಮಗಳು' ಎಂದು ಕರೆಯಲಾಗುತ್ತಿತ್ತು.
ಕೇಂದ್ರ ಸರ್ಕಾರದ 'ಮೊದಲ ಗ್ರಾಮ' ಯೋಜನೆಯು ಅರುಣಾಚಲ, ಸಿಕ್ಕಿಂ, ಹಿಮಾಚಲ, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನ ಗಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ. ಈ ಗ್ರಾಮದ ನಿವಾಸಿಗಳು ಭದ್ರತಾ ಪಡೆಗಳಿಗೆ 'ಕಣ್ಣು ಮತ್ತು ಕಿವಿ'ಗಳಾಗಿರುತ್ತಾರೆ. ಸ್ಥಳೀಯ ದನಗಾಹಿಗಳು ಯಾವಾಗಲೂ ಶತ್ರುಗಳ ಚಲನವಲನಗಳ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡಿರುವುದು ಗಮನಾರ್ಹ.
ದೋವಲ್ ಎತ್ತಿದ ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ ಸಿಎಪಿಎಫ್ (ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು) ನಡುವಿನ ಜಂಟಿ ಕೆಲಸ ಮತ್ತು ಪರಸ್ಪರ ಕಾರ್ಯಸಾಧ್ಯತೆ. "ನಮ್ಮ ಸಿಎಪಿಎಫ್ಗಳ ಪರಸ್ಪರ ಜಂಟಿ ಕಾರ್ಯಸಾಧ್ಯತೆಯ ಬಗ್ಗೆ ನಾವೀಗ ಮುಂದುವರಿಯಬೇಕಾ ಎಂಬ ಬಗ್ಗೆ ಚರ್ಚಿಸುವುದು ಈಗ ಪ್ರಮುಖವಾಗಿದೆ. ನಾವು ಈಗ ಒಟ್ಟಿಗೆ ಒಂದು ದೊಡ್ಡ ಶಕ್ತಿಯಾಗಿದ್ದೇವೆ. ಸಂಗ್ರಹಣೆ, ಸಂವಹನ, ತರಬೇತಿ, ಪ್ರಮಾಣೀಕರಣ ಸೇರಿದಂತೆ ಅನೇಕ ವಿಷಯಗಳಲ್ಲಿ ನಾವು ಒಂದೇ ರೀತಿಯ ಸಮಾನವಾದ ಕರ್ತವ್ಯಗಳನ್ನು ಹೊಂದಿದ್ದೇವೆ. ಸಿಎಪಿಎಫ್ ಗಳ ಸಂಯೋಜಿತ ಬಲವು ಪ್ರಸ್ತುತ ಸರಿಸುಮಾರು 10 ಲಕ್ಷವಾಗಿದೆ.
ಸಿಎಪಿಎಫ್ ಅಡಿಯಲ್ಲಿ ಭಾರತವು ಹಲವಾರು ಪಡೆಗಳನ್ನು ಹೊಂದಿದೆ. ಇವುಗಳಲ್ಲಿ ಬಿಎಸ್ಎಫ್, ಸಿಆರ್ ಪಿಎಫ್, ಎಸ್ಎಸ್ಬಿ, ಸಿಐಎಸ್ಎಫ್, ಅಸ್ಸಾಂ ರೈಫಲ್ಸ್ (ಇದು ಸೇನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ) ಮತ್ತು ಐಟಿಬಿಪಿ ಸೇರಿವೆ. ಎಲ್ಲಾ ಸಿಎಪಿಎಫ್ಗಳು ಗೃಹ ಸಚಿವಾಲಯದ (ಎಂಎಚ್ಎ) ಅಡಿಯಲ್ಲಿವೆ. ಈ ಯೋಧರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಅವರ ಜವಾಬ್ದಾರಿಗಳನ್ನು ಸಾಮಾನ್ಯವಾಗಿ ನಿಗದಿಪಡಿಸಲಾಗಿದ್ದರೂ, ಇವರು ಬಹುತೇಕ ಅತಿಕ್ರಮಣಗಳನ್ನು ನಿಯಂತ್ರಿಸುತ್ತಾರೆ. ಅಸ್ಸಾಂ ರೈಫಲ್ಸ್ ಮ್ಯಾನ್ಮಾರ್ ಗಡಿಯನ್ನು ನಿರ್ವಹಿಸುತ್ತದೆ ಮತ್ತು ಸೈನ್ಯದ ಜೊತೆಗೆ ಈಶಾನ್ಯದಲ್ಲಿ ಆಂತರಿಕ ಭದ್ರತಾ ಕರ್ತವ್ಯಗಳಲ್ಲಿ ಕೆಲಸ ಮಾಡುತ್ತದೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಂತರರಾಷ್ಟ್ರೀಯ ಗಡಿಗಳಲ್ಲಿ ಬಿಎಸ್ಎಫ್ ಅನ್ನು ನಿಯೋಜಿಸಲಾಗಿದ್ದರೆ, ಇನ್ನು ಕೆಲ ಬೆಟಾಲಿಯನ್ಗಳು ಎಲ್ಒಸಿಯಲ್ಲಿ ಇವೆ. ಐಟಿಬಿಪಿಯನ್ನು ಹೆಚ್ಚಾಗಿ ಉತ್ತರದ ಗಡಿಗಳಲ್ಲಿ ನಿಯೋಜಿಸಲಾಗಿದೆ. ಸಿಆರ್ಪಿಎಫ್ ಆಂತರಿಕ ಭದ್ರತೆಗೆ ಜವಾಬ್ದಾರನಾಗಿದೆ. ಹೀಗಾಗಿ ಇದು ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯದಲ್ಲಿ ಸೈನ್ಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಸಿಐಎಸ್ಎಫ್ ಬಂದರುಗಳು ಮತ್ತು ವಿಮಾನ ನಿಲ್ದಾಣಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳನ್ನು ರಕ್ಷಣೆ ಮಾಡುತ್ತದೆ. ನೇಪಾಳ ಮತ್ತು ಭೂತಾನ್ ನೊಂದಿಗಿನ ಗಡಿಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಎಸ್ ಎಸ್ ಬಿ ಹೊಂದಿದೆ. ಎಡಪಂಥೀಯ ಉಗ್ರವಾದದ ಪ್ರದೇಶಗಳಲ್ಲಿ ವಿವಿಧ ಸಿಎಪಿಎಫ್ ಗಳು ಕಾರ್ಯನಿರ್ವಹಿಸುತ್ತವೆ.
ಭಾರತವು 'ಒಂದು ಗಡಿ ಒಂದು ಪಡೆ' ಪರಿಕಲ್ಪನೆಯನ್ನು ಎಂದಿಗೂ ಪರಿಗಣಿಸಿಲ್ಲ. ಗಡಿಗಳನ್ನು ಗುರುತಿಸುವ ಜವಾಬ್ದಾರಿಯನ್ನು ಬಿಎಸ್ಎಫ್ ಹೊಂದಿದೆ ಮತ್ತು ಎಸ್ಎಸ್ಬಿ ನಿರ್ದಿಷ್ಟ ಗಡಿಗಳ ಜವಾಬ್ದಾರಿಯನ್ನು ಹೊಂದಿದೆ. ಪಾಕಿಸ್ತಾನದೊಂದಿಗಿನ ಎಲ್ಒಸಿ ಮತ್ತು ಚೀನಾದೊಂದಿಗಿನ ಎಲ್ಎಸಿಗಳಲ್ಲಿ ಸೈನ್ಯ, ಬಿಎಸ್ಎಫ್ ಮತ್ತು ಐಟಿಬಿಪಿ ಪಡೆಗಳನ್ನು ನಿಯೋಜಿಸಲಾಗಿದೆ. ಈ ಪ್ರದೇಶಗಳು ವಿವಾದಾತ್ಮಕವಾಗಿರುವುದರಿಂದ ಅವು ಅತ್ಯಂತ ನಿರ್ಣಾಯಕವಾಗಿವೆ. ತಾರ್ಕಿಕವಾಗಿ ಇವು ಸೈನ್ಯದ ಜವಾಬ್ದಾರಿಯಾಗಿರಬೇಕು ಮತ್ತು ಈ ಪ್ರದೇಶದಲ್ಲಿ ಇರಿಸಲಾದ ಎಲ್ಲಾ ಹೆಚ್ಚುವರಿ ಪಡೆಗಳು ಅದರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು.
ಆದಾಗ್ಯೂ, ಸಿಎಪಿಎಫ್ಗಳು ಗೃಹ ಸಚಿವಾಲಯದ ಅಡಿಯಲ್ಲಿ ಬರುವುದರಿಂದ ಅಂತಹ ಪರಿಕಲ್ಪನೆಯನ್ನು ಜಾರಿಗೆ ತರಲು ಹಿಂಜರಿಕೆ ಇದೆ. ಅದು ಈ ಘಟಕಗಳನ್ನು ತಾತ್ಕಾಲಿಕವಾಗಿ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಇಟ್ಟಿರುವುದು ಇದಕ್ಕೆ ಕಾರಣವಾಗಿದೆ.
ಸಿಎಪಿಎಫ್ಗಳನ್ನು ಜಂಟಿಯಾಗಿಸುವುದು ಮತ್ತು ಏಕೀಕರಣವನ್ನು ತರುವುದು ಪಾತ್ರಗಳನ್ನು ಬದಲಾಯಿಸಲು ಮತ್ತು ಕಾರ್ಯನಿರ್ವಹಣೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆಯಾದರೂ, ಉತ್ತಮ ಗಡಿ ನಿರ್ವಹಣೆಗಾಗಿ ಎಲ್ಒಸಿ ಮತ್ತು ಎಲ್ಎಸಿ ಉದ್ದಕ್ಕೂ ನಿಯೋಜಿಸಲ್ಪಟ್ಟವರಿಗೆ ಸೈನ್ಯದೊಂದಿಗೆ ಏಕೀಕರಣವನ್ನು ಪರಿಗಣಿಸುವ ಅವಶ್ಯಕತೆಯಿದೆ. ಬಹುಶಃ ಹೊಸ ಸರ್ಕಾರವು ಈ ಅಂಶವನ್ನು ಪರಿಗಣಿಸಬಹುದು.
ಲೇಖನ : ಹರ್ಷ ಕಾಕರ್, ಮೇಜರ್ ಜನರಲ್ (ನಿವೃತ್ತ)