15 ರಾಜ್ಯಗಳಲ್ಲಿ 56 ನಿವೃತ್ತ ಸದಸ್ಯರ ಸ್ಥಾನಕ್ಕೆ ರಾಜ್ಯಸಭೆಗೆ 2024ರ ಫೆಬ್ರವರಿ 27 ರಂದು ದ್ವೈವಾರ್ಷಿಕ ಚುನಾವಣೆಗಳು ನಡೆಯಲಿವೆ. ರಾಜ್ಯಸಭೆಯ ಪ್ರತಿಯೊಬ್ಬ ಸದಸ್ಯರನ್ನು ಆರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಭಾರತ ಸಂವಿಧಾನದ ಅನುಚ್ಛೇದ 83 ರ ಕಲಂ (1) ರ ಪ್ರಕಾರ, ರಾಜ್ಯಗಳ ಪರಿಷತ್ತು (ಅಂದರೆ ರಾಜ್ಯಸಭೆ) ವಿಸರ್ಜನೆಗೆ ಒಳಪಡುವುದಿಲ್ಲ. ಆದರೆ ಅದರ ಮೂರನೇ ಒಂದು ಭಾಗದಷ್ಟು ಸದಸ್ಯರು ಪ್ರತಿ ಎರಡನೇ ವರ್ಷಕ್ಕೆ ನಿವೃತ್ತರಾಗುತ್ತಾರೆ.
ಈ ಯೋಜನೆಯನ್ನು ಗಣನೀಯವಾಗಿ ಬದಲಾಯಿಸಲಾಗಿದೆ ಮತ್ತು ಆರು ವರ್ಷಗಳ ಅವಧಿಯಲ್ಲಿ ರಾಜ್ಯಸಭೆಗೆ ಮೂರು ಬಾರಿ ಚುನಾವಣೆಗಳು ನಡೆಯುತ್ತಿವೆ. ಕಳೆದ ಹಲವಾರು ವರ್ಷಗಳಿಂದ, ಕಾಲಕಾಲಕ್ಕೆ ಅವುಗಳ ಐದು ವರ್ಷಗಳ ಅವಧಿ ಪೂರ್ಣಗೊಳ್ಳುವ ಮೊದಲು ವಿವಿಧ ಕಾರಣಗಳಿಗಾಗಿ ರಾಷ್ಟ್ರಪತಿ ಆಡಳಿತವನ್ನು ಹೇರಿದ್ದರಿಂದ ಮತ್ತು ಅಥವಾ ರಾಜ್ಯ ವಿಧಾನಸಭೆಗಳನ್ನು ವಿಸರ್ಜಿಸಿದ ಕಾರಣದಿಂದಾಗಿ ಹೀಗಾಗುತ್ತಿದೆ.
ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆಗಳು ನಡೆಯುವ ಸಮಯದಲ್ಲಿ ಕೆಲ ರಾಜ್ಯಗಳ ವಿಧಾನಸಭೆಗಳು ವಿಸರ್ಜನೆಯ ಹಂತದಲ್ಲಿದ್ದವು. ಹೀಗಾಗಿ ಆ ರಾಜ್ಯಗಳ ರಾಜ್ಯಸಭಾ ಸ್ಥಾನಗಳಿಗೆ ನಂತರ ಚುನಾವಣೆಗಳು ನಡೆದವು. ಈ ಗೊಂದಲದಿಂದಾಗಿ ದ್ವೈವಾರ್ಷಿಕ ಚುನಾವಣಾ ವೇಳಾಪಟ್ಟಿಗೆ ಅಡ್ಡಿಯುಂಟಾಗಿದೆ.
ಭಾರತದ ಸಂವಿಧಾನದ 80 ನೇ ವಿಧಿಯ ಪ್ರಕಾರ ಭಾರತದ ರಾಷ್ಟ್ರಪತಿಗಳಿಂದ ನಾಮನಿರ್ದೇಶನಗೊಂಡ 12 ಸದಸ್ಯರು ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 238 ಕ್ಕಿಂತ ಹೆಚ್ಚು ಪ್ರತಿನಿಧಿಗಳನ್ನು ರಾಜ್ಯಸಭೆ ಒಳಗೊಂಡಿರುತ್ತದೆ. ಈ ಮಂಜೂರಾದ 250 ಸದಸ್ಯರ ಬಲಕ್ಕೆ ಪ್ರತಿಯಾಗಿ ರಾಜ್ಯಸಭೆಯಲ್ಲಿ ಪ್ರಸ್ತುತ 245 ಸದಸ್ಯರಿದ್ದಾರೆ. ಸಂವಿಧಾನದ 4 ನೇ ಅನುಸೂಚಿಯಲ್ಲಿ ವಿವರಿಸಿದಂತೆ ಚುನಾಯಿತ ಸದಸ್ಯರ ಸಂಖ್ಯೆಯನ್ನು 233 ಕ್ಕೆ ಸೀಮಿತಗೊಳಿಸಲಾಗಿದೆ. ವಿವಿಧ ರಾಜ್ಯಗಳಿಗೆ ಹಂಚಿಕೆಯಾದ ರಾಜ್ಯಸಭಾ ಸ್ಥಾನಗಳ ಸಂಖ್ಯೆ ಮತ್ತು ಆಯಾ ಜನಸಂಖ್ಯೆಯ ನಡುವೆ ಸಾಮ್ಯತೆಯಿದೆ.
ಚುನಾವಣಾ ವ್ಯವಸ್ಥೆ: ಅನುಚ್ಛೇದ 80 ರ ಕಲಂ (4) ರ ಪ್ರಕಾರ, ರಾಜ್ಯಸಭೆಯಲ್ಲಿ ಪ್ರತಿ ರಾಜ್ಯದ ಪ್ರತಿನಿಧಿಗಳನ್ನು ರಾಜ್ಯದ ವಿಧಾನಸಭೆಯ ಚುನಾಯಿತ ಸದಸ್ಯರು "ಏಕ ವರ್ಗಾವಣೆಯ ಮತದ ಮೂಲಕ ಅನುಪಾತದ ಪ್ರಾತಿನಿಧ್ಯ" ವ್ಯವಸ್ಥೆಗೆ ಅನುಗುಣವಾಗಿ ಆಯ್ಕೆ ಮಾಡುತ್ತಾರೆ. ಸರಳವಾಗಿ ಹೇಳುವುದಾದರೆ, "ಅನುಪಾತದ ಪ್ರಾತಿನಿಧ್ಯ" ಎಂದರೆ ಒಂದು ರಾಜಕೀಯ ಪಕ್ಷವು ರಾಜ್ಯ ವಿಧಾನಸಭೆಯಲ್ಲಿ ತನ್ನ ಸದಸ್ಯರ ಸಂಖ್ಯೆಯ ಅನುಪಾತದಲ್ಲಿ ರಾಜ್ಯಸಭೆಗೆ ಒಂದು ಅಥವಾ ಹೆಚ್ಚು ಸದಸ್ಯರನ್ನು ಆಯ್ಕೆ ಮಾಡುವುದಾಗಿದೆ.
ರಾಜ್ಯ ವಿಧಾನಸಭೆಯ ಪ್ರತಿಯೊಬ್ಬ ಸದಸ್ಯರ ಮತವು "ಒಂದು" ಆಗಿರುತ್ತದೆ, ಆದರೆ ಅದನ್ನು ವರ್ಗಾಯಿಸಬಹುದಾಗಿರುತ್ತದೆ. ಹೀಗಾಗಿ, ಬ್ಯಾಲೆಟ್ ಪೇಪರ್ ನಲ್ಲಿ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳ ಹೆಸರುಗಳನ್ನು ಪಟ್ಟಿ ಮಾಡಲಾಗಿರುತ್ತದೆ ಮತ್ತು ಮತದಾರರು ಅವರ ಹೆಸರಿನ ಮುಂದೆ ತಮ್ಮ ಆದ್ಯತೆಯ ಕ್ರಮವನ್ನು ಸೂಚಿಸಬೇಕಾಗುತ್ತದೆ. ಮತದಾರ ಶಾಸಕನು ಅಭ್ಯರ್ಥಿಗಳಲ್ಲಿ ಒಬ್ಬರಿಗೆ ಕನಿಷ್ಠ "1" ಸಂಖ್ಯೆಯನ್ನು ಹಾಕಬೇಕು. ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆ ಆ ರಾಜ್ಯದಲ್ಲಿ ಪ್ರಸ್ತುತ ಖಾಲಿ ಇರುವ ಹುದ್ದೆಗಳಿಗಿಂತ ಹೆಚ್ಚಿದ್ದರೆ ಮತ್ತು ಮೊದಲ ಸುತ್ತಿನ ಎಣಿಕೆಯಲ್ಲಿ, ಒಂದು ಅಥವಾ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಲು ಅಗತ್ಯ ಸಂಖ್ಯೆಯ ಮತಗಳನ್ನು ಪಡೆಯದಿದ್ದರೆ ಮಾತ್ರ ಅವರ ಇತರ ಆದ್ಯತೆಗಳು ಕಾರ್ಯರೂಪಕ್ಕೆ ಬರುತ್ತವೆ.
ಒಬ್ಬ ಅಭ್ಯರ್ಥಿಯು ಆಯ್ಕೆಯಾಗಲು ಅಗತ್ಯವಿರುವ ಕನಿಷ್ಠ ಮತಗಳ ಸಂಖ್ಯೆಯನ್ನು ನಿರ್ಧರಿಸುವ ಸೂತ್ರವು ಈ ಕೆಳಗಿನಂತಿದೆ:
ಒಟ್ಟು ಶಾಸಕರ ಸಂಖ್ಯೆ +1
ಖಾಲಿ ಹುದ್ದೆಗಳ ಸಂಖ್ಯೆ+1
ಉದಾಹರಣೆಗೆ, ಮುಂಬರುವ ಚುನಾವಣೆಯಲ್ಲಿ ಉತ್ತರ ಪ್ರದೇಶ ರಾಜ್ಯದ ಸನ್ನಿವೇಶವನ್ನು ನೋಡೋಣ.
1. ಗೆಲ್ಲಲು ಅಗತ್ಯವಿರುವ ಮತಗಳ ಸಂಖ್ಯೆ 37. ಒಟ್ಟು 403 ಸ್ಥಾನಗಳಲ್ಲಿ 4 ಸ್ಥಾನಗಳು ಖಾಲಿ ಇವೆ.
2. ಇದರ ಆಧಾರದ ಮೇಲೆ, ಬಿಜೆಪಿ ಯುಪಿಯಲ್ಲಿ ಮೂರು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಸುಲಭವಾಗಿ 7 ಸ್ಥಾನಗಳನ್ನು ಗೆಲ್ಲುತ್ತದೆ. ಅಪ್ನಾ ದಳ (ಸೋನೆಲಾಲ್)ದ 13 ಶಾಸಕರು, ಸುಹೇಲ್ ದೇವ್ ಅವರ ಭಾರತೀಯ ಸಮಾಜ ಪಕ್ಷದ 6 ಮತ್ತು ನಿಷಾದ್ ಪಾರ್ಟಿಯ 6 ಶಾಸಕರನ್ನು ಬಿಜೆಪಿ ಮೈತ್ರಿ ಒಳಗೊಂಡಿದೆ. ಇದರೊಂದಿಗೆ ಬಿಜೆಪಿ ಬಲ 277 ಕ್ಕೆ ಏರಿದೆ. ಈಗ ಆರ್ಎಲ್ಡಿ ಕೂಡ 9 ಶಾಸಕರೊಂದಿಗೆ ಬಿಜೆಪಿಯೊಂದಿಗೆ ಸೇರಿದ್ದು, ಅಂತಿಮ ಸಂಖ್ಯೆ 286 ಆಗಿರುತ್ತದೆ. ಅಂದರೆ 7 ರಾಜ್ಯಸಭಾ ಸ್ಥಾನಗಳನ್ನು ಗೆಲ್ಲಲು ಪಕ್ಷಕ್ಕೆ ಕೇವಲ 259 ಶಾಸಕರ ಅಗತ್ಯವಿದೆ.
ಹಾಗೆಯೇ ಎಸ್ಪಿ ಕೇವಲ 2 ಸ್ಥಾನಗಳನ್ನು ಗೆಲ್ಲಬಹುದು. ಆದರೆ ಅಖಿಲೇಶ್ ಮೂರನೆಯ ಸ್ಥಾನ ಗೆಲ್ಲಲು ಲೆಕ್ಕಾಚಾರ ಹಾಕಬಹುದು. 108 ಶಾಸಕರನ್ನು ಹೊಂದಿರುವ ಎಸ್ಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಅಲ್ಲಿಗೆ ಇವರ ಬಲ ನೂರಕ್ಕೆ ಏರಿಕೆಯಾಗುತ್ತದೆ. ಮೂರನೇ ಅಭ್ಯರ್ಥಿಗೆ ಇನ್ನೂ 11 ಮತಗಳು ಬೇಕಾಗುತ್ತವೆ. ಅದೇ ಸಮಯದಲ್ಲಿ ಬಿಜೆಪಿಗೆ 8 ನೇ ಅಭ್ಯರ್ಥಿಗೆ ಇನ್ನೂ 19 ಮತಗಳು ಬೇಕಾಗುತ್ತವೆ. ಬಿಎಸ್ಪಿಯ ಓರ್ವ ಶಾಸಕ ಮತ್ತು ಇತರ ಪಕ್ಷದ 5 ಶಾಸಕರು ಎರಡೂ ಪಕ್ಷಗಳಿಗೆ ಸ್ವಲ್ಪ ಸಹಾಯ ಮಾಡಬಹುದು. ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದ್ದು, ಬಿಜೆಪಿ 8ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ಅಡ್ಡ ಮತದಾನ ಅಥವಾ ಹಣದ ಪ್ರಭಾವವಿಲ್ಲದೆ ಬಿಜೆಪಿ 8 ನೇ ಸ್ಥಾನವನ್ನು ಅಥವಾ ಎಸ್ಪಿ ಮೂರನೇ ಸ್ಥಾನವನ್ನು ಗೆಲ್ಲಲು ಸಾಧ್ಯವಿಲ್ಲ.
ದುರ್ಬಲವಾಗುತ್ತಿದೆಯಾ ಎರಡನೇ ಸದನ?: ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳ ಸಮಯದಲ್ಲಿ, ಲೋಕನಾಥ್ ಮಿಶ್ರಾ ಅವರು ಕೌನ್ಸಿಲ್ ಆಫ್ ಸೇಟ್ಸ್ ಅಥವಾ ರಾಜ್ಯಸಭೆಯನ್ನು "ಶಾಂತ ಸದನ, ಪರಿಶೀಲನಾ ಸದನ, ಗುಣಮಟ್ಟಕ್ಕಾಗಿ ಸ್ಥಾಪಿತವಾದ ಸದನ ಮತ್ತು ಸದಸ್ಯರು ತಮ್ಮ ಸಂಯಮ ಮತ್ತು ವಿಶೇಷ ಸಮಸ್ಯೆಗಳ ಜ್ಞಾನದಿಂದ ಹಕ್ಕನ್ನು ಚಲಾಯಿಸುವ ಸದನ" ಎಂದು ಪರಿಕಲ್ಪನೆ ಮಾಡಿದ್ದರು. ಎಂ. ಅನಂತಶಯನಂ ಅಯ್ಯಂಗಾರ್ ಅವರು ಇಂತಹ ಚಿಂತನಶೀಲ ಚಿಂತನೆಯ ವೇದಿಕೆಯಲ್ಲಿ ಜನರ ಜನಾದೇಶವು ಪೂರ್ಣ ಪಾತ್ರವನ್ನು ಹೊಂದಿರಬಹುದು ಮತ್ತು ಅದು ಜನಪ್ರಿಯ ಜನಾದೇಶವನ್ನು ಗೆಲ್ಲಲು ಸಾಧ್ಯವಾಗದ ಜನರಿಗೆ ಸ್ಥಾನ ನೀಡಬಹುದು ಎಂದು ಭಾವಿಸಿದ್ದರು.
ಆದಾಗ್ಯೂ ನಾವು ರಾಜ್ಯಸಭೆಯ ಮೂಲ ದೃಷ್ಟಿಕೋನ ಮತ್ತು ವಿನ್ಯಾಸದಿಂದ ಅಕ್ಷರಶಃ ದೂರ ಸರಿದಿದ್ದೇವೆ. ಸಂವಿಧಾನದ ರಚನಾಕಾರರು ಕಲ್ಪಿಸಿದಂತೆ ರಾಜ್ಯಸಭೆಯನ್ನು 1951 ರ ಜನ ಪ್ರಾತಿನಿಧ್ಯ ಕಾಯ್ದೆಯಿಂದ ಮೂಲತಃ ಕಡ್ಡಾಯಗೊಳಿಸಲಾದ ವಾಸಸ್ಥಳದ ಅವಶ್ಯಕತೆಯನ್ನು ತೆಗೆದುಹಾಕುವ ಮೂಲಕ 'ಮೂಲಭೂತವಾಗಿ' ಮಾರ್ಪಡಿಸಲಾಗಿದೆ. ವಾಸಸ್ಥಳವನ್ನು ಲೆಕ್ಕಿಸದೆ ರಾಜ್ಯಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರಿಗಾದರೂ ಅವಕಾಶ ನೀಡುವ ಮೂಲಕ ಮೇಲ್ಮನೆಯ ಹೆಗ್ಗುರುತಾಗಿದ್ದ ವೈವಿಧ್ಯತೆಯು ನೀರಸವಾಗಿದೆ ಮತ್ತು ಅದು ಸ್ವಲ್ಪ ಮಟ್ಟಿಗೆ ಲೋಕಸಭೆಗೆ ಹೋಲುವ ಸದನವಾಗಿ ಮಾರ್ಪಟ್ಟಿದೆ.
ರಾಜ್ಯಸಭೆಯು ಇನ್ನು ಮುಂದೆ ರಾಜ್ಯಗಳ ಪರಿಷತ್ತು ಆಗಿ ಉಳಿದಿಲ್ಲ ಮತ್ತು ಪ್ರಸ್ತುತ ಅದು ರಾಜಕಾರಣಿಗಳು ಅಥವಾ 'ನಾಮನಿರ್ದೇಶಿತರ' ಮಂಡಳಿಯಾಗಿದೆ. ಇದಲ್ಲದೆ, ರಾಜ್ಯಸಭೆಗೆ ಆಯ್ಕೆಯಾದ ಎಲ್ಲಾ ವ್ಯಕ್ತಿಗಳು ಏಕರೂಪವಾಗಿ ಸಂಸದೀಯ ಕಾರ್ಯಕಲಾಪಗಳಿಗೆ ಮೌಲ್ಯವನ್ನು ಸೇರಿಸಬಲ್ಲ ಅನುಭವಿ ವ್ಯಕ್ತಿಗಳಲ್ಲ. ಹೀಗೆ ಸಂವಿಧಾನದ ಯೋಜನೆಯಲ್ಲಿ ಹಸ್ತಕ್ಷೇಪ ಮಾಡಿದ ನಂತರ, ರಾಜ್ಯಸಭೆಯು ತನ್ನ ಮೂಲ ಜನಾದೇಶವನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ಇದು ಆಲೋಚಿಸಬೇಕಾದ ವಿಷಯವಾಗಿದೆ ಮತ್ತು ಸಂಬಂಧಿಸಿದ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯವಾಗಿದೆ.
ಭಾರತೀಯ ಸಂಸತ್ತಿನ ಕಾರ್ಯವಿಧಾನದ ಬಗ್ಗೆಯೇ ವಿಮರ್ಶಕರು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಎಲ್ಲಾ ಸಂಸದೀಯ ಅಡೆತಡೆಗಳಿಗೆ ಮತ್ತು ಶಾಸಕಾಂಗದ ಕೆಲಸಗಳು ಕ್ಷೀಣಿಸಲು ರಾಜ್ಯಸಭೆಯನ್ನೇ ದೂಷಿಸುವುದು ತಪ್ಪಾಗುತ್ತದೆ. ಭಾರತೀಯ ಸಂಸತ್ತು ನಿಜವಾದ ಭಾರತೀಯ ಸಂಪ್ರದಾಯದಂತೆ ನಿರಂತರತೆ (ರಾಜ್ಯಸಭೆ) ಮತ್ತು ಬದಲಾವಣೆ (ಲೋಕಸಭೆ) ಯ ಅದ್ಭುತ ಮಿಶ್ರಣವಾಗಿದೆ.
(ಲೇಖನ: ವಿವೇಕ್ ಕೆ ಅಗ್ನಿಹೋತ್ರಿ, ಐಎಎಸ್ (ನಿವೃತ್ತ), ಮಾಜಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ಭಾರತದ ಸಂಸತ್ತು)
ಇದನ್ನೂ ಓದಿ : ರಾಜ್ಯಸಭೆ ಚುನಾವಣೆ: ಕರ್ನಾಟಕದಿಂದ ಚಂದ್ರಶೇಖರ್, ನಾಸೀರ್, ಮಾಕೇನ್ಗೆ ಕಾಂಗ್ರೆಸ್ ಟಿಕೆಟ್