ನವೆಂಬರ್ 5 ರಂದು ಅಮೆರಿಕದಲ್ಲಿ ಐತಿಹಾಸಿಕ ಚುನಾವಣೆ ನಡೆಯಲಿದೆ. ಅಮೆರಿಕನ್ನರು ದೇಶದ 47 ನೇ ಅಧ್ಯಕ್ಷರನ್ನು ಆಯ್ಕೆ ಮಾಡಲು ಮತ ಹಾಕಲಿದ್ದಾರೆ. ಪ್ರಸ್ತುತ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಹಾಗೂ ಡೊನಾಲ್ಡ್ ಟ್ರಂಪ್ ರಿಪಬ್ಲಿಕ್ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಇಬ್ಬರ ನಡುವೆ ತೀವ್ರ ಹಣಾಹಣಿ ನಡೆದಿದೆ. ಕಮಲಾ ಹ್ಯಾರಿಸ್ ಗೆದ್ದರೆ, ಅಮೆರಿಕದ ನಾಯಕಿಯಾಗಿ ಆಯ್ಕೆಯಾದ ಮೊದಲ ದಕ್ಷಿಣ ಏಷ್ಯಾ ಮತ್ತು ಕಪ್ಪು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಮಾಜಿ ಅಧ್ಯಕ್ಷ ಟ್ರಂಪ್ ಗೆದ್ದರೆ, 1892ರ ನಂತರ ಎರಡನೇ ಬಾರಿ ಗೆದ್ದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇಂತಹ ಗಮನಾರ್ಹ ಸಾಧನೆಯನ್ನು ಸಾಧಿಸಿದ ಕೊನೆಯ ಅಭ್ಯರ್ಥಿ ಗ್ರೋವರ್ ಕ್ಲೀವ್ಲ್ಯಾಂಡ್ ಆಗಿದ್ದಾರೆ. ಅವರು 1884 ರಲ್ಲಿ ಅಧ್ಯಕ್ಷರಾಗಿದ್ದರು, ಆದರೆ 1888 ರಲ್ಲಿ ಸೋತರು ಮತ್ತು 1892 ರಲ್ಲಿ ಗೆದ್ದು ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು.
ಅಮೆರಿಕ ಚುನಾವಣೆ ಭಿನ್ನ: ಅಮೆರಿಕದ ಚುನಾವಣೆಗಳು ಪ್ರಪಂಚದ ಎಲ್ಲಾ ದೇಶದ ಚುನಾವಣೆಗಳಿಗಿಂತ ಭಿನ್ನವಾಗಿವೆ. ಮೊದಲನೆಯದಾಗಿ, ಭಾರತ, ಯುನೈಟೆಡ್ ಕಿಂಗ್‌ಡಮ್ ಅಥವಾ ಕೆನಡಾದಂತಹ ದೇಶಗಳಲ್ಲಿನ ಪ್ರಕ್ರಿಯೆಗೆ ವಿರುದ್ಧವಾಗಿ ಅಧ್ಯಕ್ಷರು ಅಮೆರಿಕದಲ್ಲಿ ನೇರವಾಗಿ ಮತದಾರರಿಂದ ಚುನಾಯಿತರಾಗುತ್ತಾರೆ. ಭಾರತ, ಇಂಗ್ಲೆಂಡ್ ಮತ್ತು ಕೆನಡಾದಲ್ಲಿ ಮತದಾರರು ಸಂಸತ್ ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸಿ, ಅವರು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಯಾವ ಪಕ್ಷ ಬಹುಮತ ಪಡೆದ ಸಂಸದರ ಪಕ್ಷದ ನೇತಾರ ಪ್ರಧಾನ ಮಂತ್ರಿಯಾಗುತ್ತಾರೆ.
ಇಲ್ಲಿ ಜನರನ್ನು ಗೊಂದಲಕ್ಕೀಡುಮಾಡುವ ವಿಷಯವೆಂದರೆ ಅಮೆರಿಕದ ಅಧ್ಯಕ್ಷರು ದೇಶದಾದ್ಯಂತದ ಒಟ್ಟು ಮತಗಳ ಆಧಾರದ ಮೇಲೆ ಆಯ್ಕೆಯಾಗುವುದಿಲ್ಲ. ಅಮೆರಿಕದಲ್ಲಿ ಜನಪ್ರಿಯ ಮತ ಎಂದು ಕರೆಯಲ್ಪಡುವ ಒಂದು ಅರ್ಥಹೀನ ಅಂಕಿ- ಅಂಶ ಎಂದು ರಾಜಕೀಯ ವಿಶ್ಲೇಷಕರು ಬಣ್ಣಿಸುತ್ತಾರೆ. ಪ್ರತಿ ರಾಜ್ಯದಲ್ಲಿನ ಎಲೆಕ್ಟ್ರೋಲ್ ಕಾಲೇಜಿನ ಮತಗಳ ಆಧಾರದ ಮೇಲೆ ಇಲ್ಲಿ ಮತವನ್ನು ಲೆಕ್ಕ ಹಾಕಲಾಗುತ್ತದೆ. ವಾಸ್ತವವಾಗಿ, ಅಮೆರಿಕದ ಚುನಾವಣೆಗಳು ಯಾವುದೇ ರಾಷ್ಟ್ರೀಯ ಮತದಾರರ ಆಯ್ಕೆಯಾಗಿರುವುದಿಲ್ಲ; ಅವು 50 ರಾಜ್ಯವಾರು ಚುನಾವಣಾ ಸ್ಪರ್ಧೆಗಳ ಒಟ್ಟು ಮೊತ್ತವಾಗಿದೆ.
ಮ್ಯಾಜಿಕ್ ಸಂಖ್ಯೆ 270: ಎಲೆಕ್ಟೋರಲ್ ಕಾಲೇಜು ಮತಗಳ ಆಧಾರದ ಮೇಲೆ ಆಯ್ಕೆ ನಡೆಯುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ಏಳು ಪ್ರಮುಖ ರಾಜ್ಯಗಳಲ್ಲಿ ಪ್ರತಿ ಅಭ್ಯರ್ಥಿಯು ಹೇಗೆ ಮತಗಳನ್ನು ಪಡೆಯುತ್ತಾರೆ ಎಂಬುದನ್ನು ವೀಕ್ಷಿಸಿ ನಿರ್ಧರಿಸಲಾಗುತ್ತದೆ. ಅಂದರೆ ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್, ಮಿಚಿಗನ್, ಜಾರ್ಜಿಯಾ, ಅರಿಜೋನಾ, ನೆವಾಡಾ ಮತ್ತು ಉತ್ತರ ಕೆರೊಲಿನಾ ರಾಜ್ಯಗಳು ಅಮೆರಿಕ ಅಧ್ಯಕ್ಷರ ಆಯ್ಕೆ ಬಹುಮುಖ ಪಾತ್ರ ವಹಿಸುತ್ತವೆ. ನವೆಂಬರ್ 2 ರಂತೆ ವರದಿಯಂತೆ RealClearPolitics ನ ಮತದಾನದ ಸರಾಸರಿಗಳು ಈ ಕೆಳಗಿನ ಚಾರ್ಟ್ ಅನ್ನು ತೋರಿಸುತ್ತವೆ. ಚುನಾವಣಾ ದಿನದಂದು ಟ್ರಂಪ್ ಈ ಮುನ್ನಡೆ ಸಾಧಿಸಲು ಸಾಧ್ಯವಾದರೆ, ಅವರು 47 ನೇ ಅಧ್ಯಕ್ಷರಾಗುತ್ತಾರೆ.
ಈ ನಾಲ್ಕು ಮಹತ್ವದ ವಿಚಾರಗಳ ಮೇಲೆ ಅಮೆರಿಕ ಚುನಾವಣೆ: ಸಮೀಕ್ಷೆಯಲ್ಲಿ ಅಮೆರಿಕನ್ನರು ಹೇಳುವಂತೆ ನಾಲ್ಕು ಸಮಸ್ಯೆಗಳು ಅವರಿಗೆ ಹೆಚ್ಚು ಮುಖ್ಯವಾಗಿವೆ: ಆರ್ಥಿಕತೆ (ಹಣದುಬ್ಬರ, ಉದ್ಯೋಗಗಳು, ಸಂಬಳ); ಅಕ್ರಮ ವಲಸೆ (ಟ್ರಂಪ್ ಅಧಿಕಾರ ತೊರೆದ ನಂತರ ಸುಮಾರು 20 ಮಿಲಿಯನ್ ವಲಸಿಗರು ಗಡಿ ದಾಟಿದ್ದಾರೆ); ಮಹಿಳೆಯರ ಹಕ್ಕುಗಳು (ಗರ್ಭಪಾತ ಸೇರಿದಂತೆ); ಮತ್ತು ವಿದೇಶಿ ಯುದ್ಧಗಳು ಮತ್ತು ಜಗತ್ತಿನಲ್ಲಿ ಅಮೆರಿಕದ ಸ್ಥಾನ ದಂತಹ ವಿಚಾರಗಳು ಈ ಬಾರಿ ಚುನಾವಣೆಯಲ್ಲಿ ಪ್ರಮುಖ ವಿಷಯಗಳಾಗಿವೆ. ಈ ವಿಚಾರಗಳೇ ಅಂತಿಮವಾಗಿ ಚುನಾವಣೆಯ ಫಲಿತಾಂಶ ನಿರ್ಧರಿಸುತ್ತವೆ.
ಅಧ್ಯಕ್ಷ ಬೈಡನ್ ನೀತಿಗಳಿಂದ ದೂರವಿರುವುದೇ ಹ್ಯಾರಿಸ್ಗೆ ಸವಾಲು: ಇತ್ತೀಚಿನ ಉದ್ಯೋಗದ ವರದಿಯು ನಿರೀಕ್ಷೆಗಿಂತ ಕಡಿಮೆ ಉದ್ಯೋಗ ಸೃಷ್ಟಿಯನ್ನು ತೋರಿಸಿದೆ. ಅಮೆರಿಕ ಯುದ್ಧಕ್ಕಾಗಿ $200 ಶತಕೋಟಿ ಖರ್ಚು ಮಾಡಿದರೂ ಉಕ್ರೇನ್ ನಿರೀಕ್ಷಿತ ಫಲಿತಾಂಶ ನೀಡಲು ವಿಫಲವಾಗಿದೆ. ಅತ್ತ ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರವು ವಿಸ್ತರಿಸುತ್ತಲೇ ಇದೆ, ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಬೈಡನ್-ಹ್ಯಾರಿಸ್ ನೀತಿಗಳನ್ನು ಅಮೆರಿಕನ್ನರು ಪ್ರಶ್ನಿಸುತ್ತಿದ್ದಾರೆ. ಸರಿಸುಮಾರು ಶೇ 74ರಷ್ಟು ಅಮೆರಿಕನ್ನರು ಅಮೆರಿಕವು ತಪ್ಪು ಹಾದಿಯಲ್ಲಿ ಸಾಗುತ್ತಿದೆ ಎಂದು ಭಾವಿಸುತ್ತಾರೆ. ಇದು ನಿಜವಾದಲ್ಲಿ ಕಮಲಾ ಹ್ಯಾರಿಸ್ ಗೆಲುವು ಕಠಿಣವಾಗಲಿದೆ.
ಗೆಲ್ಲುವ ಅಭ್ಯರ್ಥಿಯ ಕೊನೆ ಕ್ಷಣದ ತಂತ್ರ ಫಲಿತಾಂಶ ನಿರ್ಧರಿಸುತ್ತದೆ: ಹ್ಯಾರಿಸ್ ಅವರ ಪರ ಮತ ಹಾಕಲು ಅನೇಕ ಮಹಿಳೆಯರು ಉತ್ಸುಕರಾಗಿದ್ದಾರೆ. ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಮತ ಚಲಾಯಿಸುವ ಕಾರಣ ಹ್ಯಾರಿಸ್ ಗೆಲುವಿಗೆ ಸಹಕಾರಿ ಆಗಬಹುದು. ಅಮೆರಿಕ ಚುನಾವಣೆ ಫಲಿತಾಂಶ ನಿರ್ಧರಿಸುವ ಪ್ರಮುಖ ರಾಜ್ಯಗಳಲ್ಲಿ ಮತ ಚಲಾಯಿಸಲು ಹ್ಯಾರಿಸ್ ಪ್ರಮುಖವಾಗಿ ಯಶಸ್ವಿಯಾದರೆ ಹ್ಯಾರಿಸ್ ಅವರು ಗೆಲ್ಲಬಹುದು. ಮಹಿಳೆಯರು ಆರ್ಥಿಕತೆ, ಉದ್ಯೋಗಗಳು ಮತ್ತು ಮನೆ ನಡೆಸಲು ಸಹಾಯ ಮಾಡುವ ಹಣದುಬ್ಬರದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬುದನ್ನು ಮರೆಯುವಂತಿಲ್ಲ.
ಮತ್ತೊಂದು ತೊಡಕು ಎಂದರೆ ಅಮೆರಿಕ ಮೂರು ರೀತಿಯಲ್ಲಿ ಮತ ಚಲಾಯಿಸುತ್ತದೆ: ಆರಂಭಿಕ ವ್ಯಕ್ತಿಗತ ಮತದಾನ, ಕೆಲವು ರಾಜ್ಯಗಳಲ್ಲಿ ಸೆಪ್ಟೆಂಬರ್ 11 ರಿಂದಲೇ ಮತದಾನ ಪ್ರಾರಂಭವಾಗಿದೆ. ನವೆಂಬರ್ 5 ರಂದು ವ್ಯಕ್ತಿಗತ ಮತದಾನ ನಡೆಯಲಿದೆ. ಇನ್ನು ಕೆಲವೆಡೆ ಮೇಲ್ ಮೂಲಕ ಮತದಾನ ನಡೆಯಲಿದೆ.. ಅಲಾಸ್ಕಾದಂತಹ ಅತಿ ದೊಡ್ಡ ಭೂ ಪ್ರದೇಶಗಳು ಹಾಗೂ ಕಡಿಮೆ ಜನಸಾಂದ್ರತೆ ಹೊಂದಿರುವ ಕೆಲವು ರಾಜ್ಯಗಳಲ್ಲಿ ಮತದಾನ ಅಂಚೆ ಮೂಲಕ ನಡೆಯುತ್ತದೆ.
ಕೊನೆ ಕ್ಷಣದ ವರೆಗೂ ಫಲಿತಾಂಶ ಘೋಷಣೆ ಕಷ್ಟ: ನಿರ್ಣಾಯಕ ರಾಜ್ಯಗಳಲ್ಲಿ, ಎಲ್ಲಾ ಮೇಲ್-ಇನ್ ಮತಪತ್ರಗಳನ್ನು ಎಣಿಸುವವರೆಗೂ ಚುನಾವಣೆ ವಿಜೇತರನ್ನು ಘೋಷಿಸುವುದು ಕಷ್ಟವಾಗಲಿದೆ. ವಾಸ್ತವವಾಗಿ, 2020 ರಲ್ಲಿ ಟ್ರಂಪ್ ಚುನಾವಣಾ ರಾತ್ರಿ ಪೆನ್ಸಿಲ್ವೇನಿಯಾದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದರು, ಆದರೆ ಅಸೋಸಿಯೇಟೆಡ್ ಪ್ರೆಸ್ ನಾಲ್ಕು ದೀರ್ಘ ದಿನಗಳ ನಂತರ ಸಾವಿರಾರು ಮೇಲ್-ಇನ್ ಮತಪತ್ರಗಳನ್ನು ಎಣಿಸಿದಾಗ ಬೈಡನ್ ಕೊನೆ ಕ್ಷಣದಲ್ಲಿ ಆಯ್ಕೆ ಆಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಆ ಬಳಿಕ ನಡೆದ ಹಂಗಾಮವನ್ನು ಇಡೀ ಜಗತ್ತೆ ನೋಡಿದ್ದು ಬೇರೆ ಮಾತು.
ಮೂರನೇ ಪಕ್ಷದ ಅಭ್ಯರ್ಥಿಗಳ ಸಮಸ್ಯೆಯೂ ಇದೆ: ಗಣನೀಯ ಪ್ರಮಾಣದ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಪ್ರಮುಖ ರಾಜ್ಯಗಳಲ್ಲಿ ಮಿಚಿಗನ್ ಒಂದು ಎಂದು ಪರಿಗಣಿಸಲಾಗಿದೆ. 40,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರನ್ನು ಕೊಲ್ಲಲು ಸಹಾಯ ಮಾಡಿದ ಇಸ್ರೇಲ್‌ನಲ್ಲಿ ಬೈಡನ್-ಹ್ಯಾರಿಸ್ ನೀತಿಗಳು ತುಂಬಾ ಕಠಿಣವಾಗಿವೆ ಎಂದು ಅಮೆರಿಕದ ಅನೇಕ ಅರಬ್ಬರು ಭಾವಿಸುತ್ತಾರೆ. ಈ ಸಾಂಪ್ರದಾಯಿಕ ಡೆಮಾಕ್ರಟಿಕ್ ಪಕ್ಷದ ಮತದಾರರು ಮೂರನೇ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜಿಲ್ ಸ್ಟೀನ್‌ಗೆ ಮತ ಚಲಾಯಿಸಲು ಸಿದ್ಧರಾಗಿದ್ದಾರೆ. ಈ ಸಂದರ್ಭದಲ್ಲಿ ನೆಕ್ -ಟು- ನೆಕ್ ಚುನಾವಣೆಯಲ್ಲಿ ಮುಸ್ಲಿಂ ಮತದಾರರ ನಿರ್ಧಾರ ಟ್ರಂಪ್ಗೆ ಅನುಕೂಲವನ್ನೂ ಮಾಡಿಕೊಡಬಹುದಾದ ಸಾಧ್ಯತೆ ತಳ್ಳಿಹಾಕುವಂತಿಲ್ಲ.