How to Make Peanut Rice Recipe: ಅನೇಕ ತಾಯಂದಿರಿಗೆ ತಮ್ಮ ಮಕ್ಕಳಿಗೆ ಬೆಳಗ್ಗೆ ಊಟದ ಬಾಕ್ಸ್ ಏನ್ ಕಟ್ಟೋದಪ್ಪಾ ಅಂತಾ ಚಿಂತೆ ಇರುತ್ತೆ. ಏಕೆಂದರೆ ಮನೆಗೆಲಸ ಮುಗಿಸಿ ಅಡುಗೆ ಮಾಡಲು ಹೆಚ್ಚು ಸಮಯ ಇರುವುದಿಲ್ಲ. ಅಷ್ಟೊತ್ತಿಗಾಗಲೇ ಸ್ಕೂಲ್ ಬಸ್ ಬರುತ್ತೆ ಅಥವಾ ತುಂಬಾ ಅರ್ಜೆಂಟ್ ಇರುತ್ತೆ. ಈ ಉದ್ವೇಗದಿಂದ ಮುಕ್ತಿ ಪಡೆಯಲು ನಾವು ನಿಮಗಾಗಿ ಸೂಪರ್ ಲಂಚ್ ಬಾಕ್ಸ್ ರೆಸಿಪಿಯೊಂದನ್ನು ನಿಮ್ಮ ಮುಂದೆ ತಂದಿದ್ದೇವೆ.
ಅದು ಕೇವಲ ಹತ್ತು ನಿಮಿಷಗಳಲ್ಲಿ ಈ ಅಡುಗೆ ಸಿದ್ಧಮಾಡಬಹುದು. ಅದುವೇ "ಶೇಂಗಾ ಇಲ್ಲವೇ ಕಡಲೆಕಾಯಿ ರೈಸ್". ಈ ಅನ್ನವನ್ನು ರೆಡಿ ಮಾಡಿ ಮಕ್ಕಳ ಲಂಚ್ ಬಾಕ್ಸ್ಗೆ ಹಾಕಿ ಕಳುಹಿಸಿದರೆ ಒಂದೇ ಒಂದು ಅಗಳು ಬಿಡದೇ ತಿಂದು ಬರುತ್ತಾರೆ. ಅಲ್ಲದೇ ಈ ರೈಸ್ ಆರೋಗ್ಯಕ್ಕೂ ಉತ್ತಮ. ಮನೆಯಲ್ಲಿ ಅನ್ನ ಉಳಿದಾಗಲೂ ಶೇಂಗಾ ರೈಸ್ ಮಾಡಬಹುದು. ಮತ್ತು ತಡಮಾಡದೇ ರುಚಿಕರವಾದ ಕಡಲೇಕಾಯಿ ರೈಸ್ ಮಾಡುವುದು ಹೇಗೆಂದು ಓದಿ ತಿಳಿದುಕೊಳ್ಳಿ.
ಬೇಕಾಗುವ ಸಾಮಾಗ್ರಿಗಳು..
- ಅಕ್ಕಿ - ಒಂದು ದೊಡ್ಡ ಕಪ್
- ಶೇಂಗಾ - ಕಾಲು ಕಪ್
- ಕರಿಮೆಣಸು - 6
- ಹಸಿ ತೆಂಗಿನಕಾಯಿ - ಅರ್ಧ ಕಪ್
- ಎಳ್ಳು - ಕಾಲು ಕಪ್
- ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ:
- ಎಣ್ಣೆ - 2 ಟೀಸ್ಪೂನ್
- ಸಾಸಿವೆ - ಒಂದು ಟೀಚಮಚ
- ಕಡ್ಲೆ ಬೇಳೆ - ಟೀ ಚಮಚ
- ಕರಿಬೇವಿನ ಎಲೆಗಳು-2
ತಯಾರಿಕೆಯ ವಿಧಾನ:
- ಮೊದಲು ಒಲೆಯ ಮೇಲೆ ಕಡಾಯಿ ಇಟ್ಟು ಕಡೆಲೆಕಾಯಿ ಹುರಿಯಿರಿ. ತಣ್ಣಗಾದ ನಂತರ, ಸಿಪ್ಪೆ ತೆಗೆದು ಪಕ್ಕಕ್ಕೆ ಇರಿಸಿ.
- ಅದೇ ಕಡಾಯಿಯಲ್ಲಿ ಕರಿಮೆಣಸು ಹಾಕಿ ಹುರಿದು ಪಕ್ಕಕ್ಕೆ ಇಡಿ. ಜೊತೆಗೆ ಹಸಿ ಕೊಬ್ಬರಿ ತುಂಡುಗಳನ್ನು ಹಾಕಿ ಡೀಪ್ ಫ್ರೈ ಮಾಡಿ. ಸ್ವಲ್ಪ ಸಮಯದ ನಂತರ ಎಳ್ಳನ್ನು ಹಾಕಿ ಸ್ವಲ್ಪ ಹುರಿಯಿರಿ.
- ಇವೆಲ್ಲ ತಣ್ಣಗಾದ ನಂತರ ಮಿಕ್ಸಿ ಜಾರ್‌ನಲ್ಲಿ ಹುರಿದ ಸಾಮಗ್ರಿ, ಹುರಿದ ಮೆಣಸಿನಕಾಯಿ, ತೆಂಗಿನಕಾಯಿ ಮತ್ತು ಎಳ್ಳು ಮಿಶ್ರಣವನ್ನು ಹಾಕಿ ಸ್ವಲ್ಪ ರುಬ್ಬಿಕೊಳ್ಳಿ.
- ಈಗ ಅದಕ್ಕೆ ಒಗ್ಗರಣೆ ಕೊಡಬೇಕಿದೆ. ಅದಕ್ಕಾಗಿ ಕಡಾಯಿಯಲ್ಲಿ ಎಣ್ಣೆಯನ್ನು ಸುರಿಯಿರಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ, ಕಡಲೆಬೇಳೆ ಮತ್ತು ಉದ್ದಿನಬೇಳೆ ಹಾಕಿ ಹುರಿಯಿರಿ. ಅವು ಹುರಿದ ನಂತರ ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ಕಲಸಿದ ನಂತರ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ರುಬ್ಬಿದ ಕಡೆಲೇಕಾಯಿ ಪುಡಿ ಹಾಕಿ ಚೆನ್ನಾಗಿ ಕಲಸಿ.
- ಒಂದು ಅಥವಾ ಎರಡು ನಿಮಿಷಗಳ ನಂತರ ನೀವು ಸ್ಟೌ ಆಫ್ ಮಾಡಿದರೆ, ಕಡಲೆಕಾಯಿ ರೈಸ್ ರೆಡಿ ಆಗುತ್ತೆ. ಬಿಸಿ ಬಿಸಿಯಾಗಿ ತುಂಬಾ ರುಚಿಯಾಗಿರುತ್ತದೆ. ಅನ್ನ ರೆಡಿಯಾದ ಬಳಿಕ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿ ಚೆನ್ನಾಗಿರುತ್ತದೆ. ಮೇಲಾಗಿ ಕಡೆಲೆಕಾಯಿಯನ್ನು ಎಣ್ಣೆಯಲ್ಲಿ ಕರಿದು ಈ ಅನ್ನಕ್ಕೆ ಸೇರಿಸಬಹುದು.
- ಇಷ್ಟವಾದಲ್ಲಿ ನೀವೂ ಈ ರೀತಿ ಕಡಲೆಕಾಯಿ ರೈಸ್ ಟ್ರೈ ಮಾಡಬಹುದು.