ಮಿಯಾಮಿ: ಐಷಾರಾಮಿ ಸೌಲಭ್ಯಗಳೊಂದಿಗೆ ಸಮುದ್ರದಲ್ಲಿ ಪ್ರಯಾಣಿಸಲು ಇಚ್ಚಿಸುವವರಿಗೆ ಇದು ಸಿಹಿ ಸುದ್ದಿ. ವಿಶ್ವದ ಅತಿ ದೊಡ್ಡ ಕ್ರೂಸ್ ಹಡಗು, ರಾಯಲ್ ಕೆರಿಬಿಯನ್‌ನ 'ಐಕಾನ್ ಆಫ್ ದಿ ಸೀಸ್' ತನ್ನ ಮೊದಲ ಪ್ರಯಾಣ ಪ್ರಾರಂಭಿಸಿದೆ. ಸ್ಥಳೀಯ ಕಾಲಮಾನ ಶನಿವಾರ ಸಂಜೆ ಯುನೈಟೆಡ್ ಸ್ಟೇಟ್ಸ್ ಆಪ್ ಅಮೆರಿಕದ ಫ್ಲೋರಿಡಾದ ಮಿಯಾಮಿ ಬಂದರಿನಿಂದ ಬೃಹತ್ ಹಡಗು ಪ್ರಯಾಣ ಬೆಳೆಸಿದೆ. ಒಂದು ವಾರದವರೆಗೆ ವಿವಿಧ ದ್ವೀಪಗಳನ್ನು ಇದು ಸುತ್ತಲಿದೆ.
"365 ಮೀಟರ್ ಉದ್ದದ ಕ್ರೂಸ್ ಹಡಗಿನಲ್ಲಿ 6 ವಾಟರ್ ಸ್ಲೈಡ್‌ಗಳು, 7 ಈಜುಕೊಳಗಳು, ಐಸ್ ಸ್ಕೇಟಿಂಗ್ ರಿಂಕ್, ಸಿನಿಮಾ ಥಿಯೇಟರ್ ಮತ್ತು 40ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಿವೆ. ಪ್ರಯಾಣಿಸುವ ಕುಟುಂಬಗಳಿಗೆ ಅತ್ಯುತ್ತಮ ಅನುಭವ ಒದಗಿಸಲು ಹಡಗು ಸಿದ್ಧವಾಗಿದೆ" ಎಂದು ರಾಯಲ್ ಕೆರಿಬಿಯನ್ ಸಿಇಒ ಜೇಸನ್ ಲಿಬರ್ಟಿ ಮಾಹಿತಿ ನೀಡಿದ್ದಾರೆ. ಹಡಗು 2,350 ಸಿಬ್ಬಂದಿ ಮತ್ತು 7,600 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ.
ಐಕಾನ್ ಆಫ್ ದಿ ಸೀಸ್ ಜೂನ್ 22ರಂದು ಫಿನ್‌ಲ್ಯಾಂಡ್‌ನ ಟರ್ಕು ಎಂಬಲ್ಲಿ ತನ್ನ ಮೊದಲ ಸಮುದ್ರ ಪ್ರಯೋಗಗಳನ್ನು ಪೂರ್ಣಗೊಳಿಸಿತ್ತು. ನಂತರ ಅಧಿಕೃತವಾಗಿ ಮೊದಲ ಬಾರಿಗೆ ಸಮುದ್ರದಲ್ಲಿ ಪ್ರಯಾಣಿಸಿದೆ. 450 ತಜ್ಞರು ಹಡಗಿನ ಮುಖ್ಯ ಎಂಜಿನ್‌ಗಳು ಮತ್ತು ಪ್ರೊಪೆಲ್ಲರ್‌ಗಳ ಮೇಲೆ ನಾಲ್ಕು ದಿನಗಳ ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಿದ್ದರು. ಶಬ್ದ ಮತ್ತು ಕಂಪನ ಮಟ್ಟ ಪರಿಶೀಲಿಸಲಾಗಿತ್ತು. ಪ್ರಾಥಮಿಕ ಪರೀಕ್ಷೆಗಳ ನಂತರ ಐಕಾನ್ ಮೇಯರ್ ಟರ್ಕು ಹಡಗು ಬಂದರಿಗೆ ಬಂದಿತ್ತು. 2024 ಜನವರಿಯಲ್ಲಿ ದಕ್ಷಿಣ ಫ್ಲೋರಿಡಾದಿಂದ ಹೊರಬರಲು ನಿರ್ಧರಿಸಲಾಗಿತ್ತು.
ಆಕ್ವಾ ಪಾರ್ಕ್, ಈಜು-ಅಪ್ ಬಾರ್, ಅನನ್ಯ ಊಟದ ಅನುಭವಗಳು, ಆರ್ಕೇಡ್‌ಗಳು, ಲೈವ್ ಸಂಗೀತ ಮತ್ತು ಪ್ರದರ್ಶನಗಳು ಈ ಹಡಗಿನಲ್ಲಿವೆ. ಬಹಾಮಾಸ್, ಮೆಕ್ಸಿಕೋ, ಹೊಂಡುರಾಸ್, ಸೇಂಟ್ ಮಾರ್ಟೆನ್ ಮತ್ತು ಸೇಂಟ್ ಥಾಮಸ್‌ನಂತಹ ಬಂದರುಗಳೊಂದಿಗೆ ಪೂರ್ವ ಅಥವಾ ಪಶ್ಚಿಮ ಕೆರಿಬಿಯನ್ ಮೂಲಕ ಈ ಹಡಗಿನಲ್ಲಿ ಏಳು ರಾತ್ರಿಗಳನ್ನು ಪ್ರವಾಸಿಗರು ಕಳೆಯಬಹುದಾಗಿದೆ. ಪ್ರಯಾಣಿಕರು ಹಡಗಿಗೆ ಹತ್ತಿದ ಕ್ಷಣದಿಂದ ಅತ್ಯುತ್ತಮ ರಜಾ ಮೋಜಿನ ಅನುಭವವನ್ನು ಒದಗಿಸಲು ಅನನ್ಯವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಐಕಾನ್ ಆಫ್ ದಿ ಸೀಸ್‌ನೊಂದಿಗೆ ನಾವು ಇದನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತೇವೆ ಎಂದು ರಾಯಲ್ ಕೆರಿಬಿಯನ್ ಗ್ರೂಪ್ ಅಧ್ಯಕ್ಷ ಮತ್ತು ಸಿಇಒ ಜೇಸನ್ ಲಿಬರ್ಟಿ ಹೇಳಿದ್ದಾರೆ.
ಹಡಗು 6 ಡ್ಯುಯಲ್-ಇಂಧನ ಇಂಜಿನ್ ಹೊಂದಿದೆ. ಕ್ರೂಸ್ ಲೈನ್ಸ್ ಇಂಟರ್‌ನ್ಯಾಷನಲ್ ಅಸೋಸಿಯೇಷನ್‌ನ ಇಂಧನ ಪರ್ಯಾಯವಾದ ದ್ರವೀಕೃತ ನೈಸರ್ಗಿಕ ಅನಿಲದಿಂದ (ಎಲ್‌ಎನ್‌ಜಿ) ಚಾಲಿತವಾಗಿದೆ. ಸಲ್ಫರ್ ಮತ್ತು ಗ್ರೀನ್ಹೌಸ್ ಗ್ಯಾಸ್ ಹೊರಸೂಸುವಿಕೆ ಕಡಿಮೆ ಮಾಡುತ್ತದೆ. ಕೆಲವು ಪರಿಸರವಾದಿಗಳು ಎಲ್‌ಎನ್‌ಜಿ-ಚಾಲಿತ ಹಡಗುಗಳು ಮಿಥೇನ್ ಹೊರಸೂಸುವಿಕೆ ಹೆಚ್ಚಿಸುತ್ತವೆ ಎಂದು ದೂರಿದ್ದಾರೆ.
ಇದನ್ನೂ ಓದಿ: ಇರಾನ್‌ನಲ್ಲಿ ಬಂದೂಕುಧಾರಿಗಳಿಂದ 9 ಪಾಕಿಸ್ತಾನಿಗಳ ಹತ್ಯೆ