ಹೈದರಾಬಾದ್: ಹವಾಮಾನ ಬದಲಾವಣೆಯ ಸೂಚಕಗಳು 2023ರಲ್ಲಿ ದಾಖಲೆ ಮಟ್ಟ ತಲುಪಿವೆ. 2023ರಲ್ಲಿ ಭೂ ಗ್ರಹದಲ್ಲಿ ಅತ್ಯಂತ ಗರಿಷ್ಠ ತಾಪಮಾನ ಕಂಡುಬಂದಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯೂಎಂಒ) ಎಚ್ಚರಿಸಿದೆ.
ಡಬ್ಲೂಎಂಒದ 2023ರ ಜಾಗತಿಕ ತಾಪಮಾನದ ವರದಿ ಪ್ರಕಾರ, 2023ರಲ್ಲಿ ಅತೀ ಹೆಚ್ಚು ತಾಪಮಾನದ ದಾಖಲೆ ಮುರಿದಿದೆ. ಹಸಿರು ಮನೆ ಪರಿಣಾಮದ ಮಟ್ಟದಲ್ಲಿ ಏರಿಕೆ, ಸಮುದ್ರದ ಶಾಖ ಮತ್ತು ಸಮುದ್ರ ಮಟ್ಟದಲ್ಲಿ ಏರಿಕೆ, ಅಂಟಾರ್ಕ್ಟಿಕ್ ಸಮುದ್ರ ಮಟ್ಟ ಏರಿಕೆ ಮತ್ತು ಹಿಮ ಕರಗುವಿಕೆ ದಾಖಲೆ ಮಟ್ಟದಲ್ಲಿ ವರದಿಯಾಗಿದೆ.
ಡಬ್ಲ್ಯೂಎಂಒ ಪ್ರಧಾನ ಕಾರ್ಯದರ್ಶಿ ಸೆಲೆಸ್ಟೆ ಸೌಲೊ ಪ್ರತಿಕ್ರಿಯಿಸಿ, ಹವಾಮಾನ ಬದಲಾವಣೆ ತಾಪಮಾನಕ್ಕಿಂತ ಹೆಚ್ಚಾಗಿದ್ದು, 2023ರಲ್ಲಿ ನಾವು ಅದಕ್ಕೆ ಸಾಕ್ಷಿಯಾಗಿದ್ದೇವೆ. ವಿಶೇಷವಾಗಿ, ಸಮುದ್ರ ಉಷ್ಣಾಂಶದ ಏರಿಕೆ, ಹಿಮ ಕರಗುವಿಕೆ, ಅಂಟಾರ್ಕ್ಟಿಕ್ ಹಿಮ ಕರಗುವಿಕೆ ಕಳವಳದಾಯಕವಾಗಿದೆ ಎಂದು ತಿಳಿಸಿದ್ದಾರೆ.
ಆಹಾರ ಅಭದ್ರತೆ ದುಪ್ಪಟ್ಟು: ಇನ್ನು, ಜಾಗತಿಕವಾಗಿ ಆಹಾರದ ಅಭದ್ರತೆಯು ದುಪ್ಪಟ್ಟಾಗಿದೆ. ಕೋವಿಡ್ ಸಾಂಕ್ರಾಮಿಕಕ್ಕೂ ಮೊದಲು 149 ಮಿಲಿಯನ್ ಜನರು ಆಹಾರದ ಅಭದ್ರತೆ ಅನುಭವಿಸಿದರೆ, 2023ರಲ್ಲಿ ಈ ಸಂಖ್ಯೆ 333 ಮಿಲಿಯನ್ ಆಗಿದೆ. ಹವಾಮಾನ ವೈಪರೀತ್ಯ ಇದಕ್ಕೆ ನೇರ ಕಾರಣವಲ್ಲವಾದರೂ, ಇದು ಸಮಸ್ಯೆಗೆ ಪ್ರಚೋದನೆ ನೀಡುವ ಅಂಶವಾಗಿದೆ.
ಹಸಿರು ಮನೆ ಅನಿಲ ಪರಿಣಾಮ: ಇಂಗಾಲದ ಡೈ ಆಕ್ಸೈಡ್, ಮಿಥೇನ್ ಮತ್ತು ನೈಟ್ರಸ್ ಆಕ್ಸೈಡ್ ಮೂರು ಹಸಿರುಮನೆ ಅನಿಲಗಳಾಗಿದ್ದು, ಇವು 2022ರಲ್ಲಿ ದಾಖಲೆ ಮಟ್ಟ ತಲುಪಿದ್ದವು. 2023ರಲ್ಲಿ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಇದು ನಿರಂತರವಾಗಿ ಹೆಚ್ಚುತ್ತಿದೆ ಎಂದು ಗಮನಿಸಲಾಗಿದೆ. ಕೈಗಾರಿಕಾ ಪೂರ್ವ ಕಾಲಕ್ಕೆ ಹೋಲಿಕೆ ಮಾಡಿದಾಗ ಇಂಗಾಲದ ಡೈ ಆಕ್ಸೈಡ್ ಮಟ್ಟ ಶೇ.50ರಷ್ಟು ಹೆಚ್ಚಾಗಿದೆ. ತಾಪಮಾನವು ಮುಂಬರುವ ಹಲವು ವರ್ಷಗಳವರೆಗೆ ಏರುತ್ತಲೇ ಇರುತ್ತದೆ ಎಂದು ವರದಿ ತಿಳಿಸಿದೆ.
ತಾಪಮಾನ: ವಾತಾವರಣದಲ್ಲಿ ಹಸಿರುಮನೆ ಅನಿಲಗಳು ಹೆಚ್ಚಿನ ಮಟ್ಟದಲ್ಲಿರುವುದರಿಂದ ಜಾಗತಿಕ ತಾಪಮಾನದಲ್ಲಿ ದೀರ್ಘಾವಧಿಯವರೆಗೆ ಹೆಚ್ಚಳವಾಗಲಿದೆ. 2022ರಿಂದ 2023ರವರೆಗೆ ತಾಪಮಾನದ ಏರಿಕೆಯೂ 2023ರ ಮಧ್ಯದಲ್ಲಿ ಲಾ ನಿನಾದಿಂದ ಎಲ್ ನಿನೋ ಪರಿಸ್ಥಿತಿಗಳಿಗೆ ಕಾರಣವಾಯಿತು.
ಸಾಗರದ ಶಾಖ: 2023ರ ಸಾಗರದ ಶಾಖವು ಅಧಿಕ ಮಟ್ಟ ತಲುಪಿದೆ. ಕಳೆದ ಎರಡು ದಶಕಗಳಲ್ಲಿ ತಾಪಮಾನದ ದರಗಳು ಬಲವಾದ ಏರಿಕೆ ತೋರಿಸಿದೆ. ತಾಪಮಾನ ಏರಿಕೆ ಇನ್ನೂ ಮುಂದುವರೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಕಣ್ಮರೆಯಾಗುತ್ತಿರುವ ವಸಂತ ಕಾಲ, ಭಾರತದಲ್ಲಿ ಚಳಿಗಾಲದಲ್ಲೂ ತಾಪಮಾನ ಏರಿಕೆ: ಅಮೆರಿಕ ವಿಜ್ಞಾನಿಗಳ ಎಚ್ಚರಿಕೆ