ಬೈರುತ್(ಲೆಬನಾನ್): ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲೆಬನಾನ್ ತೊರೆಯುವಂತೆ ತನ್ನ ಎಲ್ಲ ಪ್ರಜೆಗಳಿಗೆ ಭಾರತ ಗುರುವಾರ ಸಲಹೆ ನೀಡಿದೆ.
"ಈ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಸಂಭಾವ್ಯ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆ ಬರುವವರೆಗೆ ಲೆಬನಾನ್ಗೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಬಲವಾಗಿ ಸೂಚಿಸಲಾಗಿದೆ" ಎಂದು ಬೈರುತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಇತ್ತೀಚಿನ ಸಲಹೆಯಲ್ಲಿ ತಿಳಿಸಲಾಗಿದೆ.
"ಲೆಬನಾನ್ ತೊರೆಯುವಂತೆ ಎಲ್ಲಾ ಭಾರತೀಯ ಪ್ರಜೆಗಳಿಗೆ ಬಲವಾಗಿ ಸೂಚಿಸಲಾಗಿದೆ. ಯಾವುದೇ ಕಾರಣಕ್ಕಾಗಿ ಅಲ್ಲಿಯೇ ಉಳಿದುಕೊಳ್ಳುವವರು ತೀವ್ರ ಎಚ್ಚರಿಕೆ ವಹಿಸುವಂತೆ, ಲೆಬನಾನ್ ಒಳಗಡೆ ಹೆಚ್ಚು ಪ್ರಯಾಣಿಸದಂತೆ ಮತ್ತು ಬೈರುತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ" ಎಂದು ಅದು ತಿಳಿಸಿದೆ.
ಈ ವಾರದ ಆರಂಭದಲ್ಲಿ, ಲೆಬನಾನ್ ಹಿಜ್ಬುಲ್ಲಾ ಜುಲೈ 27ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದಾಗ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ಮೊದಲ ಬಾರಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಿತ್ತು.
ಬೈರುತ್ನ ದಕ್ಷಿಣ ಉಪನಗರ ದಹಿಹ್ನಲ್ಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆಯ ಅತ್ಯಂತ ಹಿರಿಯ ಮಿಲಿಟರಿ ಕಮಾಂಡರ್ ಮತ್ತು ಸಂಘಟನೆಯ ವ್ಯೂಹಾತ್ಮಕ ವಿಭಾಗದ ಮುಖ್ಯಸ್ಥ ಫೌದ್ ಶುಕುರ್ ಅವರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಬುಧವಾರ ದೃಢಪಡಿಸಿದೆ.
ಫೌದ್ ಶುಕುರ್, 12 ಮಕ್ಕಳು ಸಾವಿಗೀಡಾದ ಇಸ್ರೇಲ್ ನ ಫುಟ್ ಬಾಲ್ ಮೈದಾನದ ಮೇಲೆ ನಡೆದ ಹಿಜ್ಬುಲ್ಲಾ ದಾಳಿಯ ಹಿಂದಿನ ಮಾಸ್ಟರ್ಮೈಂಡ್ ಎಂದು ಐಡಿಎಫ್ ಹೇಳಿದೆ. ಲೆಬನಾನ್ನ ಹಿಜ್ಬುಲ್ಲಾ ಇರಾನ್ನ ಛಾಯಾ ಸಂಘಟನೆಯಾಗಿ ಕೆಲಸ ಮಾಡುತ್ತಿದ್ದು, ಆಗಾಗ ಇಸ್ರೇಲ್ ಮೇಲೆ ದಾಳಿ ಮಾಡುತ್ತಿದೆ.
ಇದಲ್ಲದೆ, ಹಮಾಸ್ ಪಾಲಿಟ್ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರನ್ನು ಬುಧವಾರ ಮುಂಜಾನೆ ಟೆಹ್ರಾನ್ ನಲ್ಲಿರುವ ಅವರ ನಿವಾಸದ ಮೇಲೆ ಕ್ಷಿಪಣಿ ದಾಳಿ ನಡೆಸಿ ಕೊಲ್ಲಲಾಯಿತು. ಇರಾನ್ನ ನೂತನ ಅಧ್ಯಕ್ಷ ಮಸೂದ್ ಪೆಜೆಷ್ಕಿಯಾನ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಟೆಹ್ರಾನ್ಗೆ ಆಗಮಿಸಿದ್ದ ಹನಿಯೆಹ್ ಸಾವಿಗೀಡಾಗಿರುವುದು ಇರಾನ್ ಅನ್ನು ಕೆರಳಿಸಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಲೆಬನಾನ್ನಲ್ಲಿ ಯುದ್ಧ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಹೀಗಾಗಿ ಲೆಬನಾನ್ನಲ್ಲಿರುವ ಭಾರತೀಯರು ತಕ್ಷಣ ದೇಶ ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಇದನ್ನೂ ಓದಿ: ಇರಾನ್ನ ಸಂಭಾವ್ಯ ದಾಳಿ ಎದುರಿಸಲು ಐಡಿಎಫ್ ಸಕಲ ರೀತಿಯಲ್ಲೂ ಸಜ್ಜು: ಇಸ್ರೇಲ್ ಸೇನೆ - IDF gears up for Iran attack