ವಾಷಿಂಗ್ಟನ್(ಅಮೆರಿಕ): ಭಾರತ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೆ ತರಲು ನಿಯಮಗಳನ್ನು ತಿಳಿಸುತ್ತಿರುವುದಕ್ಕೆ ಅಮೆರಿಕ ಸೆನೆಟರ್ ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಕಳೆದ ವಾರ ಪೌರತ್ವ (ತಿದ್ದುಪಡಿ) ಕಾಯಿದೆ 2019 ಅನ್ನು ಘೋಷಿಸಿತು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಮುಸ್ಲಿಮೇತರ ವಲಸಿಗರಿಗೆ ದಾಖಲೆಗಳಿಲ್ಲದ ಮತ್ತು ಡಿಸೆಂಬರ್ 31, 2014ರ ಮೊದಲು ಭಾರತಕ್ಕೆ ಬಂದವರಿಗೆ ಭಾರತೀಯ ಪೌರತ್ವ ಪಡೆಯಲು ಈ ಕಾಯ್ದೆ ದಾರಿ ಮಾಡಿಕೊಡುತ್ತಿದೆ. ಸಿಎಎ ಭಾರತೀಯ ಮುಸ್ಲಿಮರ ಪೌರತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.
ಅಮೆರಿಕ ಸೆನೆಟರ್ ಬೆನ್ ಕಾರ್ಡಿನ್ ಹೇಳಿಕೆ: ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ನ ಸೆನೆಟರ್ ಬೆನ್ ಕಾರ್ಡಿನ್ ಪ್ರತಿಕ್ರಿಯಿಸಿ, "ಭಾರತ ಸರ್ಕಾರ ಜಾರಿಗೊಳಿಸಿದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಳವಳಗೊಂಡಿದ್ದೇನೆ. ವಿಶೇಷವಾಗಿ ಭಾರತದ ಮುಸ್ಲಿಂ ಸಮುದಾಯದ ಮೇಲೆ ಈ ಕಾನೂನು ಸಂಭಾವ್ಯ ಪರಿಣಾಮ ಬೀರಲಿದೆ'' ಎಂದು ಹೇಳಿದ್ದಾರೆ.
''ಅಮೆರಿಕ-ಭಾರತದ ಸಂಬಂಧಗಳು ಗಾಢವಾಗಿವೆ. ನಮ್ಮ ಸಹಕಾರವು ಧರ್ಮವನ್ನು ಲೆಕ್ಕಿಸದೇ, ಎಲ್ಲಾ ವ್ಯಕ್ತಿಗಳ ಮಾನವ ಹಕ್ಕುಗಳನ್ನು ರಕ್ಷಿಸುವುದನ್ನು ಆಧರಿಸಿದೆ. ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಕೂಡ ಸಿಎಎ ನಿಯಮಗಳ ಅಧಿಸೂಚನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಧಾರ್ಮಿಕ ಸ್ವಾತಂತ್ರ್ಯದ ಗೌರವ ನೀಡಬೇಕು. ಎಲ್ಲಾ ಸಮುದಾಯಗಳಿಗೆ ಕಾನೂನಿನಡಿಯಲ್ಲಿ ಸಮಾನತೆಯನ್ನು ಕಲ್ಪಿಸುವುದು ಮೂಲಭೂತ ಪ್ರಜಾಪ್ರಭುತ್ವದ ತತ್ವಗಳಾಗಿವೆ'' ಎಂದು ತಿಳಿಸಿದ್ದಾರೆ.
''ಈ ಕಾನೂನು ಭಾರತದ ನೆರೆ ರಾಷ್ಟ್ರಗಳಲ್ಲಿ ಕಿರುಕುಳಕ್ಕೊಳಗಾದ ಹಿಂದೂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್ ಮತ್ತು ಪಾರ್ಸಿ ಅಲ್ಪಸಂಖ್ಯಾತರಿಗೆ ತ್ವರಿತ ಪೌರತ್ವ ಒದಗಿಸುವ ಅವಕಾಶ ಹೊಂದಿದೆ. ಜಾಗತಿಕ ಮಾನವೀಯ ತತ್ವಗಳಿಗೆ ಅನುಗುಣವಾಗಿ ಧಾರ್ಮಿಕ ಕಿರುಕುಳದ ವಿರುದ್ಧ ವ್ಯಕ್ತಿಗಳು ಮತ್ತು ಕುಟುಂಬಗಳ ರಕ್ಷಣೆಗೆ ಭಾರತ ಬದ್ಧವಿದೆ" ಎಂದು ಭಾರತ ಪರ ಅಮೆರಿಕದಲ್ಲಿರುವ ಸಂಘಟನೆಗಳು ತಿಳಿಸಿವೆ.
'ಹಿಂದೂ ಪ್ಯಾಕ್ಟ್' ಸಂಸ್ಥಾಪಕ ಮತ್ತು ಸಹ ಸಂಚಾಲಕ ಅಜಯ್ ಶಾ ಪ್ರತಿಕ್ರಿಯಿಸಿ, ''ಸಿಎಎ ಭಾರತದ ಯಾವುದೇ ನಾಗರಿಕರ ಮೇಲೆ ಪರಿಣಾಮ ಬೀರುವುದಿಲ್ಲ. ಈ ಕಾನೂನನ್ನು ನಾನ್ ಸೆಕ್ಯುಲರ್ ಎಂದು ಕರೆಯುವುದು ನಿರಾಧಾರ. ಭಾರತದ ನೆರೆಯ ರಾಷ್ಟ್ರಗಳಲ್ಲಿ ಹಿಂದೂ ಅಲ್ಪಸಂಖ್ಯಾತರಿಗೆ ತಾರತಮ್ಯವಿದೆ. ಆದರೆ, ಅಮೆರಿಕನ್ನರು, ಅಮೆರಿಕದ ಮೌಲ್ಯಗಳು ಮತ್ತು ತುಳಿತಕ್ಕೊಳಗಾದ ಜನರ ಮಾನವ ಹಕ್ಕುಗಳ ಪರವಾಗಿ ನಿಲ್ಲುವ ಬದಲು, ನಮ್ಮ ಕೇಂದ್ರ ಸರ್ಕಾರದ ಈ ಮಾನವೀಯ ಪ್ರಯತ್ನವನ್ನು ವಿರೋಧಿಸಿರುವುದು ಸರಿಯಲ್ಲ'' ಎಂದಿದ್ದಾರೆ.
'ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಶನ್'ನ ವಿ.ಎಸ್.ನೈಪಾಲ್ ಮಾತನಾಡಿ, ''2019ರ ಪೌರತ್ವ (ತಿದ್ದುಪಡಿ) ಕಾಯಿದೆ ನಮ್ಮ ನೆರೆಯ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಕ್ರೌರ್ಯ, ಕಿರುಕುಳ, ಬಲವಂತದ ಮತಾಂತರ, ಕೊಲೆ, ಅತ್ಯಾಚಾರ ಮತ್ತು ಎಲ್ಲಾ ರೀತಿಯ ದೌರ್ಜನ್ಯಗಳನ್ನು ಎದುರಿಸುತ್ತಿರುವ ಅಲ್ಪಸಂಖ್ಯಾತರ ದುಃಸ್ಥಿತಿಗೆ ಪರಿಹಾರ ಕಲ್ಪಿಸುತ್ತದೆ. ನೆರೆಯ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಅಲ್ಲಿ ಜಾತ್ಯತೀತತೆ, ಶಾಂತಿ ಮತ್ತು ಮಾನವೀಯತೆಯ ಕಲ್ಪನೆಯು ಬದುಕಲು ಸಾಧ್ಯವಿಲ್ಲ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 8 ಮಂದಿ ಸಾವು